ಬಾಪಟ್ಲಾ: ದಕ್ಷಿಣ ಭಾರತ ಸಿನಿರಂಗದಲ್ಲಿ ಫ್ಯಾನ್ಸ್‌ಗಳ ಅಭಿಮಾನಕ್ಕೆ ಮಿತಿಯೇ ಇಲ್ಲ. ಮೊದಲ ದಿನ ಮೊದಲ ಪ್ರದರ್ಶನಕ್ಕೆ ಹಾಜರಾಗುವುದರಿಂದ ಹಿಡಿದು ತಮ್ಮಿಷ್ಟದ ತಾರೆಯರಿಗಾಗಿ ದೇವಾಲಯಗಳನ್ನು ನಿರ್ಮಿಸುವವರೆಗೆ, ಅಭಿಮಾನಿಗಳು ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಆರಾಧಿಸುತ್ತಾರೆ. ಏಪ್ರಿಲ್ 28ರಂದು ಸಮಂತಾ (Samantha Ruth Prabhu) ಅವರ ಜನುಮದಿನ. ಅವರ ಕಟ್ಟಾ ಅಭಿಮಾನಿ ಯುವಕ ಸಂದೀಪ್ ಅವರು ನಟಿಗೆ ಅತ್ಯುತ್ತಮ ಉಡುಗೊರೆಯನ್ನು ನೀಡಲು ನಿರ್ಧರಿಸಿದ್ದಾರೆ. ಆಂಧ್ರಪ್ರದೇಶದ ಬಾಪಟ್ಲಾದಲ್ಲಿರುವ (Bapatla, Andhra Pradesh) ತನ್ನ ಮನೆಯಲ್ಲಿ ಸಮಂತಾ ಅವರಿಗೆ ದೇವಸ್ಥಾನ ನಿರ್ಮಿಸಿದ್ದಾರೆ.
ಸಮಂತಾ ಮೇಲಿನ ಅಭಿಮಾನದಿಂದ ಸಂದೀಪ್ ಅವರು ಈಗಾಗಲೇ ತಿರುಪತಿ, ಚೆನ್ನೈ, ನಾಗಪಟ್ಟಣಂ ದೇವಸ್ಥಾನಗಳಿಗೆ ನಟಿಯ ಹೆಸರಲ್ಲಿ ತೀರ್ಥಯಾತ್ರೆ ಮಾಡಿದ್ದಾರಂತೆ. ಸಮಂತಾ ಮಯೋಸಿಟಿಸ್ನಿಂದ ಚೇತರಿಸಿಕೊಂಡ ನಂತರ ಸಂದೀಪ್ ಈ ಯಾತ್ರೆ ಮಾಡಿದ್ದರು. ಇದೀಗ ದೇಗುಲ ನಿರ್ಮಿಸಿ ಮೂರ್ತಿ ಇಡಲು ಮುಂದಾಗಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಯಕಿಯರಿಗೆ ದೇವಸ್ಥಾನ ಕಟ್ಟುವ ಸಂಪ್ರದಾಯ ಈಗಿನದಲ್ಲ. ಹಿರಿಯನಟಿ ಖುಷ್ಬೂ ಅವರಿಂದಲೇ ಆರಂಭವಾಗಿತ್ತು. ಈ ಪಟ್ಟಿಗೆ ಹಲವು ನಟಿಯರು ಸೇರಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಖುಷ್ಬೂ ಅಭಿಮಾನಿಗಳು ದೇಗುಲ ನಿರ್ಮಿಸಿ ಹಾಲಿನ ಅಭಿಷೇಕ ಮಾಡಿದ್ದರು. ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರಿಗೆ ಅಭಿಮಾನಿಗಳು ದೇವಾಲಯ ನಿರ್ಮಿಸಿದ್ದರು .ತಮಿಳು ಅಭಿಮಾನಿಗಳು ಮಂದಿರ ಕಟ್ಟಿರುವ ನಾಯಕಿಯರ ಪಟ್ಟಿಗೆ ಹನ್ಸಿಕಾ ಕೂಡ ಸೇರಿಕೊಂಡಿದ್ದರು. ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಅಭಿಮಾನಿಗಳು ದೇಗುಲಗಳನ್ನು ನಿರ್ಮಿಸಿ ಅರ್ಚನೆ, ಹಾಲಿನ ಅಭಿಷೇಕಗಳನ್ನು ಮಾಡಿದ್ದರು.
ಇದನ್ನೂ ಓದಿ: Samantha Ruth Prabhu: ಸಮಂತಾಗೆ ವಯಸ್ಸಾಗಿದೆ ಎಂದ ಚಿಟ್ಟಿಬಾಬು: ಹೊಸ ಪೋಸ್ಟ್‌ನಲ್ಲಿ ಸ್ಯಾಮ್ ಹೇಳಿದ್ದೇನು?
ನಿರ್ದೇಶಕ ಗುಣಶೇಖರ್ ಅವರ ಶಾಕುಂತಲಂ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆದರೆ ಚಿತ್ರ ಯಶಸ್ವಿ ಪ್ರದರ್ಶನ ಕಂಡಿಲ್ಲ. ಹೀನಾಯಾವಾಗಿ ಸೋಲು ಕಂಡಿತು. ಸದ್ಯ ಸಿಟಾಡೆಲ್ ಸಿರೀಸ್‌ನಲ್ಲಿ ವರುಣ್ ಧವನ್ ಜತೆ ಚಿತ್ರೀಕರಣದಲ್ಲಿದ್ದಾರೆ ಸಮಂತಾ.