Site icon Vistara News

Fighter Trailer: ʼಫೈಟರ್‌ʼ ಚಿತ್ರದ ಟ್ರೈಲರ್‌ ಔಟ್‌; ವೈಮಾನಿಕ ಸಾಹಸವೇ ಹೈಲೈಟ್‌

fighter trailer

fighter trailer

ಮುಂಬೈ: ಸತತ ಸೋಲಿನಿಂದ ಬಸವಳಿದಿದ್ದ ಬಾಲಿವುಡ್‌ಗೆ (Bollywood) ಕಳೆದ ವರ್ಷ ಲಕ್ಕಿ ಎನಿಸಿಕೊಂಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಹಿಂದಿ ಸಿನಿಮಾಗಳು ಪಾರಮ್ಯ ಮೆರೆದಿದ್ದವು. ಈ ಗೆಲುವು 2024ರಲ್ಲಿಯೂ ಮುಂದುವರಿಯುವ ನಿರೀಕ್ಷೆಯಲ್ಲಿದೆ ಬಾಲಿವುಡ್‌. ಅದಕ್ಕೆ ಮುನ್ನುಡಿಯಾಗಿ ಜನವರಿ 25ರಂದು ತೆರೆ ಕಾಣಲಿರುವ ಬಹು ಕೋಟಿ ರೂ. ಬಜೆಟ್‌ನ ʼಫೈಟರ್‌ʼ ಚಿತ್ರ ಅಂತಹದ್ದೊಂದು ಭರ್ಜರಿ ಓಪನಿಂಗ್‌ ನೀಡಲಿದೆ ಎನ್ನಲಾಗಿದೆ. ಈಗಾಗಲೇ ಪೋಸ್ಟರ್‌, ಹಾಡು, ಟೀಸರ್‌ನಿಂದ ಗಮನ ಸೆಳೆದ ಈ ಚಿತ್ರದ ಟ್ರೈಲರ್‌ ಇದೀಗ ರಿಲೀಸ್‌ ಆಗಿದೆ (Fighter Trailer).

ಮತ್ತೊಮ್ಮೆ ಸಿದ್ಧಾರ್ಥ್‌ ಆನಂದ್‌-ದೀಪಿಕಾ ಮೋಡಿ ಮಾಡುತ್ತಾರ?

2023ರ ಜನವರಿ 25ರಂದು ಬಿಡುಗಡೆಯಾದ ʼಪಠಾಣ್‌ʼ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. 1 ಸಾವಿರ ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿ ದಾಖಲೆ ನಿರ್ಮಿಸಿತ್ತು. ಶಾರುಖ್‌ ಖಾನ್‌-ದೀಪಿಕಾ ಪಡುಕೋಣೆ ಅಭಿನಯಿಸಿದ್ದ ಈ ಚಿತ್ರಕ್ಕೆ ಸಿದ್ಧಾರ್ಥ್‌ ಆನಂದ್‌  ಆ್ಯಕ್ಷನ್‌ ಕಟ್‌ ಹೇಳಿದ್ದರು. ವಿಶೇಷ ಎಂದರೆ ʼಫೈಟರ್‌ʼ ಚಿತ್ರವನ್ನೂ ಸಿದ್ಧಾರ್ಥ್‌ ಆನಂದ್‌ ನಿರ್ದೇಶಿಸಿದ್ದಾರೆ. ಮೊದಲ ಬಾರಿ ಹೃತಿಕ್‌ ರೋಷನ್‌-ದೀಪಿಕಾ ಪಡುಕೋಣೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ನಿರೀಕ್ಷೆ ಗರಿಗೆದರಿದೆ. ಅದಕ್ಕೆ ತಕ್ಕಂತೆ ಟ್ರೈಲರ್‌ ಕೂಡ ಗಮನ ಸೆಳೆಯುತ್ತಿದೆ.

ಈ ಆ್ಯಕ್ಷನ್‌ ಥ್ರಿಲ್ಲರ್‌ನಲ್ಲಿ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ಪೈಲಟ್‌ ಆಗಿ ಸಾಕಷ್ಟು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಹಾಲಿವುಡ್‌ ರೀತಿಯ ಸಾಹಸ ದೃಶ್ಯಗಳು ಇರಲಿವೆ ಎನ್ನುವ ಮಾತು ಕೇಳಿ ಬಂದಿತ್ತು. ಇದನ್ನು ಸಾಬೀತು ಪಡಿಸುವ ಸಾಕಷ್ಟು ತುಣುಕುಗಳು ಟ್ರೈಲರ್‌ನಲ್ಲಿ ಕಂಡು ಬಂದಿದೆ. ವಿದೇಶದಲ್ಲಿ ನಡೆದ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಹೃತಿಕ್‌ ಮತ್ತು ದೀಪಿಕಾ ಭಾಗವಹಿಸಿದ್ದರು. ಈ ಹಿಂದೆ Aerial action (ವೈಮಾನಿಕ ಸಾಹಸ) ಒಳಗೊಂಡ ಈ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿ ವೈರಲ್‌ ಆಗಿತ್ತು. ಮತ್ತೊಂದು ಗಮನಾರ್ಹ ವಿಚಾರ ಎಂದರೆ ಈ ಸಿನಿಮಾ 3ಡಿಯಲ್ಲಿ ಬಿಡುಗಡೆಯಾಗಲಿದೆ. 

ಗಮನ ಸೆಳೆದ ಟ್ರೈಲರ್‌

ಇದೀಗ ಬಿಡುಗಡೆಗೊಂಡ ಟ್ರೈಲರ್‌ನಲ್ಲಿ ಭರಪೂರ ಸಾಹಸ ದೃಶ್ಯಗಳಿದ್ದು, ಆಗಸದಲ್ಲಿನ ಸ್ಟಂಟ್‌ ಗಮನ ಸೆಳೆಯುತ್ತಿದೆ. ಜತೆಗೆ ದೇಶಭಕ್ತಿಯ ಅಂಶಗಳೂ ಎದ್ದು ಕಾಣುತ್ತಿವೆ. ಹಿರಿಯ ನಟ ಅನಿಲ್‌ ಕಪೂರ್‌ ಕೂಡ ಮಿಂಚು ಹರಿಸಿದ್ದಾರೆ. ಭಾರತೀಯ ವಾಯುಪಡೆಯ ಕೆಡೆಟ್‌ಗಳು ಈ ಚಿತ್ರಕ್ಕಾಗಿ ಕೆಲಸ ಮಾಡಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ: Fighter Movie: ʻಫೈಟರ್‌ʼ ಸಿನಿಮಾ ʻಶೇರ್ ಖುಲ್ ಗಯೇʼ ಕದ್ದ ಟ್ಯೂನ್‌? ನೀವೆ ಕೇಳಿ ಹೇಳಿ!

ಬೋಲ್ಡ್‌ ಆಗಿ ಕಾಣಿಸಿಕೊಂಡ ಹೃತಿಕ್‌-ದೀಪಿಕಾ

ಕೆಲವು ದಿನಗಳ ಹಿಂದೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿತ್ತು. ಇದರಲ್ಲಿ ಹೃತಿಕ್‌ ಮತ್ತು ದೀಪಿಕಾ ಜೋಡಿಯ ಕೆಲವು ಇಂಟಿಮೇಟ್‌ ಸೀನ್‌ಗಳು ಹೈಲೈಟ್‌ ಆಗಿದ್ದವು. ಬೀಚ್‌ನಲ್ಲಿ ಇಬ್ಬರು ರೊಮ್ಯಾನ್ಸ್‌ ಮಾಡುವ ದೃಶ್ಯ ಅಭಿಮಾನಿಗಳ ಕಣ್ಣು ಕುಕ್ಕಿತ್ತು. ʼಪಠಾಣ್‌ʼ ಚಿತ್ರದಂತೆಯೇ ಇಲ್ಲೂ ದೀಪಿಕಾ ಬಿಕಿನಿ ಧರಿಸಿರುವುದು ಕಂಡು ಬಂದಿತ್ತು. ಇದೀಗ ಬಿಡುಗಡೆಗೊಂಡ ಟ್ರೈಲರ್‌ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕರಣ್‌ ಸಿಂಗ್‌ ಗ್ರೋವರ್‌, ಅಕ್ಷಯ್‌ ಓಬೆರಾಯ್‌, ಸಜೀದಾ ಶೇಕ್‌, ಸಂಜೀವ್‌ ಜೈಸ್ವಾಲ್‌ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version