Site icon Vistara News

Film Chamber Karnataka: ನಾಳೆ ಚಿತ್ರಮಂದಿರಗಳು ತೆರೆಯಲ್ಲ; ಬೆಂಗಳೂರು ಬಂದ್‌ಗೆ ಚಿತ್ರೋದ್ಯಮ ಸಾಥ್‌!

Film Chamber Karnataka

ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್‌ 26ರಂದು (ಮಂಗಳವಾರ)‌ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕಾವೇರಿ ನದಿ ನೀರು ವಿಚಾರವಾಗಿ ಹೋರಾಟ ಮಾಡುತ್ತಿರುವ ರೈತರ ಪರ ನಿಲ್ಲಲು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber Karnataka) ಮಂಡಳಿ ನಿರ್ಧರಿಸಿದೆ. ಈಗಾಗಲೇ ಹಲವು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ.

ಕನ್ನಡ ಚಿತ್ರರಂಗದ ಪ್ರದರ್ಶಕ ಸಂಘದ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್ ಈ ಬಗ್ಗೆ ಮಾತನಾಡಿ ʻʻಅಧ್ಯಕ್ಷರು ಪಧಾಧಿಕಾರಿಗಳ ಜತೆ ಕೂತು ಚರ್ಚೆ ಮಾಡಿದ್ದೇವೆ. ನೀರಿನ ವಿಚಾರದಲ್ಲಿ ಕರೆ ನೀಡಿದ ಬಂದ್​ಗೆ ಚಿತ್ರಮಂದಿರಗಳು ಬೆಂಬಲಕ್ಕೆ ಸದಾ ಸಿದ್ಧ. ನಾಡಿನ ಹಿತಕ್ಕಾಗಿ ಚಿತ್ರೋದ್ಯಮ ಯಾವತ್ತೂ ಇರುತ್ತದೆʼʼಎಂದರು.

ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಮ್. ಸುರೇಶ್ ಮಾತನಾಡಿ ʻʻಕಾವೇರಿ ವಿಚಾರ ಗಂಭೀರವಾದ ವಿಚಾರ. ನಮ್ಮ ಅಂಗ ಸಂಸ್ಥೆಗಳ ಜತೆ ಚರ್ಚೆ ಮಾಡಬೇಕು. ಕಲಾವಿದರನ್ನು ಭೇಟಿ ಮಾಡಬೇಕು. ಸಮಯದ ಅಭಾವ ಇದೆ. ಹೀಗಾಗಿ ರೂಪುರೇಷೆಯನ್ನು ಸಾಯಂಕಾಲ ತಿಳಿಸುತ್ತೇವೆ. ರೈತರ ನೀರಿನ ಸಮಸ್ಯೆ ಆ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಸರ್ಕಾರಕ್ಕೆ ಮನದಟ್ಟು ಆಗಬೇಕಂದರೆ ಸಮಯವಕಾಶ ಬೇಕು. ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುತ್ತೇವೆ’ ಎಂದರು.

ನಾಳೆಯ ಬೆಂಗಳೂರು ಬಂದ್‌ಗೆ ಬೆಂಬಲವನ್ನೂ ಸೂಚಿಸಿರುವ ವಾಣಿಜ್ಯ ಮಂಡಳಿ, ಬೆಂಗಳೂರು ಸಿಟಿಯಲ್ಲಿ ಶೂಟಿಂಗ್ ನಡೆಯುವುದಿಲ್ಲ. ಬೆಂಗಳೂರು ಬಿಟ್ಟು ಹೊರಗೆ ಶೂಟಿಂಗ್ ಮಾಡುತ್ತಿರುವವರಿಗೆ ತೊಂದರೆ ಇಲ್ಲ ಎಂದಿದೆ.

ಇದನ್ನೂ ಓದಿ: Karnataka Film Chamber: ಕರ್ನಾಟಕ ಚಲನಚಿತ್ರ ಮಂಡಳಿ ಚುನಾವಣೆ; ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಆರಂಭಿಸಿದ ಶಿಲ್ಪಾ ಶ್ರೀನಿವಾಸ್!

ಹಿರಿಯ ನಟಿ ಲೀಲಾವತಿ ಸಾಥ್‌

ಈಗಾಗಲೇ ವಿವಿಧ ರೈತ ಹಾಗೂ ಸಂಘಟನೆಗಳು ಹೋರಾಟ ನಡೆಸುತಿದ್ದು, ಕಾವೇರಿ ಹೋರಾಟಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಿರಿಯ ನಟಿ ಎಂ.ಲೀಲಾವತಿ ಕೂಡ ಬೆಂಬಲ ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಮನೆಯಲ್ಲಿ ಮಾತನಾಡಿದ ಅವರು ʻʻನಾನು ಸಹ ಕಾವೇರಿ ಹೋರಾಟಕ್ಕೆ ಹೊರಡುವೆ. ನಮ್ಮ ಜಲ, ನಮ್ಮ ನೆಲ, ನಮ್ಮ ನುಡಿ, ಎಲ್ಲಾ ಕನ್ನಡಕೊಸ್ಕರ. ಕಾವೇರಿ ನೀರಿಗಾಗಿ ನಾನು ಹೋರಾಟಕ್ಕೆ ಬರುವೆ’ ಎಂದಿದ್ದಾರೆ. ನೆಲಮಂಗಲದ ಮನೆಯಿಂದ ಮಂಡ್ಯ ಪ್ರತಿಭಟನೆ ಸ್ಥಳಕ್ಕೆ ಮಗ ವಿನೋದ್ ರಾಜ್ ಜತೆಗೆ ಹೊರಟಿದ್ದಾರೆ.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಘಟನೆ ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್​ಗೆ ಬೆಂಬಲ ನೀಡಿದೆ. ಮಂಗಳವಾರದಂದು ಕಿರುತೆರೆಗೆ ಸಂಬಂಧಿಸಿದ ಯಾವುದೇ ಚಿತ್ರೀಕರಣ ನಡೆಯುವುದಿಲ್ಲ ಎಂದು ಸಂಘದ ಅಧ್ಯಕ್ಷ ಗಣೇಶ್ ರಾವ್ ಕೇಸರ್ಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬಂದ್‌ ದಿನ ಏನು ಇರಲ್ಲ?

ಆಟೋ, ಕ್ಯಾಬ್, ಗೂಡ್ಸ್ ವಾಹನಗಳು, ಖಾಸಗಿ ಬಸ್‌ಗಳು, ಥಿಯೇಟರ್‌, ಸೂಪರ್ ಮಾರ್ಕೆಟ್‌, ಪೆಟ್ರೋಲ್ ಬಂಕ್‌, ಶಾಲಾ -ಕಾಲೇಜ್‌ಗಳು, ಅಂಗಡಿಗಳು, ಬೀದಿಬದಿ ಅಂಗಡಿಗಳು, ಜ್ಯುವೆಲ್ಲರಿ ಶಾಪ್‌ಗಳು, ಕೈಗಾರಿಕೆಗಳು ಹೋಟೆಲ್‌ಗಳು, ಮಾಲ್‌ಗಳು.

ಎಲ್ಲ ಬಿಎಂಟಿಸಿ ಬಸ್‌ ಘಟಕಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತರದಿರಲು ನೌಕರರು ನಿರ್ಧರಿಸಿದ್ದಾರೆ. ಖಾಸಗಿ ಶಾಲೆಗಳಿಗೆ ಬಹುತೇಕ ರಜೆ ಘೋಷಣೆಯಾಗಿದ್ದು, ಪರೀಕ್ಷೆಗಳು ನಡೆಯುವ ಕಡೆ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿ ಬಂದ್‌ಗೆ ಬೆಂಬಲ ಸೂಚಿಸಲಿದ್ದಾರೆ.

Exit mobile version