ಮೈಸೂರು: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಗೆ ಗ್ರಹಚಾರ ಬೆನ್ನು ಬಿದ್ದಂತೆ ಇದೆ. ಈಗಾಗಲೇ ರಾಖಿ ಸಾವಂತ್ ಕೊಟ್ಟ ದೂರಿನ ಕಾರಣದಿಂದ ಮುಂಬಯಿ ಜೈಲಿನಲ್ಲಿ ಇರುವ ಆದಿಲ್ ಖಾನ್ ವಿರುದ್ಧ ಮೈಸೂರಲ್ಲಿ ಇನ್ನೊಂದು ಎಫ್ಐಆರ್ ದಾಖಲಾಗಿದೆ. ಇರಾನಿಯನ್ ಯುವತಿಯೊಬ್ಬಳು ಆದಿಲ್ ಖಾನ್ ವಿರುದ್ಧ ಅತ್ಯಾಚಾರ ದೂರು ನೀಡಿದ್ದು, ಅದರಡಿಯಲ್ಲಿ ಕೇಸ್ ದಾಖಲಾಗಿದೆ.
‘ನಾವಿಬ್ಬರೂ ಮೈಸೂರಿನಲ್ಲಿ ಲಿವಿಂಗ್ ಟುಗೆದರ್ನಲ್ಲಿ ಇದ್ದೆವು. ಆಗ ನನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಆದಿಲ್ ವಂಚಿಸಿದ್ದಾನೆ. ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಾನು ಐದು ತಿಂಗಳ ಹಿಂದೆ ಅವನ ಬಳಿ ನನ್ನನ್ನು ಮದುವೆಯಾಗುವಂತೆ ಕೇಳಿದೆ. ಆದರೆ ಆತ ತಿರಸ್ಕರಿಸಿದ. ನಾನು ನಿನ್ನ ಜತೆ ಇದ್ದಂತೆಯೇ, ಇನ್ನೂ ಹಲವು ಹುಡುಗಿಯರ ಜತೆ ಸಂಬಂಧ ಹೊಂದಿದ್ದೇನೆ. ಮದುವೆಯಾಗುವ ಮಾತೇ ಇಲ್ಲ ಎಂದು ಹೇಳಿದ. ಅಷ್ಟೇ ಅಲ್ಲ, ನನಗೆ ಬೆದರಿಕೆ ಒಡ್ಡಿದ್ದಲ್ಲದೆ, ಪೊಲೀಸರಿಗೆ ದೂರು ನೀಡಿದ್ದೇ ಆದಲ್ಲಿ, ನನ್ನ ಬೆತ್ತಲೆ ಫೋಟೋ ಲೀಕ್ ಮಾಡುವುದಾಗಿ ಹೇಳಿದ್ದ’ ಎಂದು ಇರಾನಿಯನ್ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆದಿಲ್ ಖಾನ್ ಮೈಸೂರಿನ ರಾಜೀವ್ನಗರದ ನಿವಾಸಿ. ಈ ಯುವತಿ ಇರಾನ್ನಿಂದ ಬಂದು ಮೈಸೂರಿನಲ್ಲಿ ಡಾಕ್ಟರ್ ಆಫ್ ಫಾರ್ಮಸಿ ಓದುತ್ತಿದ್ದಳು. ಕಳೆದ ಐದು ವರ್ಷಗಳಿಂದಲೂ ವಿವಿಪುರಂನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಳು.
ಇದನ್ನೂ ಓದಿ: Rakhi Sawant: ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಬಂಧನ; ಆತ ಮೋಸಗಾರ ಎಂದ ನಟಿ!
ನಟಿ ರಾಖಿ ಸಾವಂತ್ ತನಗೆ ಆದಿಲ್ ಖಾನ್ ಜತೆ ಮದುವೆಯಾಗಿದ್ದನ್ನು ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಅಂದರೆ ಫೆಬ್ರವರಿಯಲ್ಲಿ ಆದಿಲ್ ಖಾನ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದರು. ಆತ ಮಹಾನ್ ಮೋಸಗಾರ, ನನ್ನ ದುಡ್ಡನ್ನೆಲ್ಲ ತೆಗೆದುಕೊಂಡಿದ್ದಾನೆ. ಆದಿಲ್ಗೆ ಅಕ್ರಮ ಸಂಬಂಧವಿದೆ. ನಾನು ಇನ್ನೊಬ್ಬಳು ಶ್ರದ್ಧಾ ವಾಳ್ಕರ್ ಆಗಲು ಸಿದ್ಧಳಿಲ್ಲ’ ಎಂದು ಹೇಳಿದ್ದರು. ಮುಂಬಯಿ ಓಶಿವಾರಾ ಠಾಣೆಯಲ್ಲಿ ದೂರು ದಾಖಿಸಿದ್ದರು. ರಾಖಿ ನೀಡಿದ ದೂರಿನ ಅನ್ವಯ ಆದಿಲ್ ಅರೆಸ್ಟ್ ಆಗಿ, ಜೈಲುಪಾಲಾಗಿದ್ದಾರೆ.