ಬೆಂಗಳೂರು: ಕಿರುತೆರೆ ನಟನೊಬ್ಬ (Television actor) ಬಾರ್ನಲ್ಲಿ ಕಂಠಪೂರ್ತಿ ಕುಡಿದು ಅಮಲೇರಿಸಿಕೊಂಡು ಕಿರಿಕ್ ಮಾಡಿದ್ದಾರೆ. ಇವರ ವಿರುದ್ಧ ಈಗ ಬೆಂಗಳೂರಿನ ಆರ್ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಿರುತೆರೆ ನಟನ ಹೆಸರು ಪ್ರಜ್ವಲ್ ಎಂದಾಗಿದ್ದು, ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತ ವರ್ಷಿಣಿ (Amruthavarshini Serial)ಯಲ್ಲಿ ಅಭಿನಯಿಸಿದ್ದರು. ಹಾಗೇ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ-ತಂಗಿ ಧಾರಾವಾಹಿಯಲ್ಲಿ ಇವರು ಇಂದ್ರನ ಪಾತ್ರ ನಿರ್ವಹಿಸುತ್ತಿದ್ದಾರೆ.
ಮೂರು ದಿನಗಳ ಹಿಂದೆ ಪ್ರಜ್ವಲ್ ಆರ್ಆರ್ ನಗರದಲ್ಲಿರುವ ಅಮೃತಾ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಹೋಗಿದ್ದರು. ಅಲ್ಲಿ ತಮ್ಮ ಸ್ನೇಹಿತರೊಂದಿಗೆ ಕುಡಿಯುತ್ತ ಕುಳಿತಿದ್ದರು. ಅದೇ ವೇಳೆ ಅಲ್ಲಿಗೆ ಬಂದಿದ್ದ ಚೇತನ್ ಎಂಬುವರು ಪ್ರಜ್ವಲ್ ಜತೆಗೆ ಇದ್ದ ಮನು ಎಂಬಾತನನ್ನು ಕರೆದಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಪ್ರಜ್ವಲ್ ಕೂಗಾಡಿದ್ದಾರೆ. ಪ್ರಜ್ವಲ್ ಮತ್ತು ಅವರ ಸಂಗಡಿಗರು ಸೇರಿ ಚೇತನ್ ಮೇಲೆ ಹಲ್ಲೆ ನಡೆಸಿದ್ದಾರೆ. ಚೇತನ್ ಅವರು ನೀಡಿದ ದೂರನ್ನು ಆಧರಿಸಿ, ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Theft Case: ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸ್ತಾಳೆ; ಚಿನ್ನಾಭರಣ ಎಗರಿಸಿ ಪರಾರಿ ಆಗ್ತಾಳೆ ನರ್ಸ್ ಲಕ್ಷ್ಮೀ!
ನಾನು ನನ್ನ ಸ್ನೇಹಿತರನ್ನು ಭೇಟಿ ಮಾಡಲು ಅಮೃತಾ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಹೋಗಿದ್ದೆ. ಅಲ್ಲಿ ಪ್ರಜ್ವಲ್ ಮತ್ತು ಅವನ ಸ್ನೇಹಿತರ ಜತೆ ನನ್ನ ಗೆಳೆಯ ಮನು ಕುಳಿತಿದ್ದ. ನಾನು ಊಟ ಮುಗಸಿಕೊಂಡು ಹೊರಡುವಾಗ ಮನು ಬಳಿ ಹೋಗಿ ನನ್ನ ಜೊತೆ ಬರುವಂತೆ ಕರೆದೆ. ಆಗ ಪ್ರಜ್ವಲ್ ಸಿಟ್ಟಾದ. ಪ್ರಜ್ವಲ್ ಮತ್ತು ಅವನ ಸ್ನೇಹಿತರು ನಮ್ಮನ್ನು ಸುತ್ತುವರಿದು ಅತ್ಯಂತ ಕೆಟ್ಟದಾಗಿ ನಿಂದಿಸಿದರು. ಮನುವನ್ನು ನೀನ್ಯಾಕೆ ಕರೆಯುತ್ತಿಯಾ ಎಂದು ಕೂಗಾಡಿದ್ದಾರೆ. ಅಷ್ಟೇ ಅಲ್ಲ, ಬಾರ್ನಲ್ಲಿಯೇ ಇದ್ದ ಒಂದು ಮರದ ತುಂಡಿನಿಂದ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಚೇತನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.