Site icon Vistara News

Actor Upendra: ಜಾತಿನಿಂದನೆ; ಉಪೇಂದ್ರ ವಿರುದ್ಧ ಮತ್ತೊಂದು ಎಫ್‌ಐಆರ್, ಬಂಧನ ಭೀತಿಯಲ್ಲಿ ಬುದ್ಧಿವಂತ

Actor Upendra

ಬೆಂಗಳೂರು: ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ (Actor Upendra) ಅವರು ವಿಡಿಯೊ ಲೈವ್‌ನಲ್ಲಿ ಮಾತನಾಡುವಾಗ ಗಾದೆ ಮಾತೊಂದನ್ನು ಉಲ್ಲೇಖಿಸಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ನಟನ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿತ್ತು. ಇದಾದ ಬಳಿಕ ನಟ ಕ್ಷಮೆ ಕೂಡ ಕೇಳಿದ್ದರು. ಈಗಾಗಲೇ ಎರಡು ಪೊಲೀಸ್ ಠಾಣೆಗಳಲ್ಲಿ (Police Gave Notice to Upendra )ಉಪೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಿದೆ (Kannada News). ಯಾವುದಾದರೂ ಒಂದು ಠಾಣೆಗೆ ಪ್ರಕರಣಗಳು ವರ್ಗಾವಣೆ ಆಗಲಿದೆ. ನಂತರ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಇನ್ನು ನಟ ಉಪೇಂದ್ರ ಅವರಿಗೆ ಬಂಧನದ ಭೀತಿ ಎದುರಾಗಿದೆ ಎಂದು ತಿಳಿದುಬಂದಿದೆ.

ಮೊದಲು ದೂರು ದಾಖಲಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂಧನ್!

ನಟ ಉಪೇಂದ್ರ ಸಾಮಾಜಿಕ ಜಾಲತಾಣದ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ʻಊರೆಂದರೆ ಹೊಲಗೇರಿ ಇರುತ್ತೆʼ ಎಂಬ ಪದ ಉಪಯೋಗಿಸಿ ಮಾತನಾಡಿದ್ದು, ಇದರಿಂದ ದಲಿತ ಸಮಾಜದಲ್ಲಿನ ಜಾತಿ ಭಾವನೆಗಳಿಗೆ (objectionable word) ಘಾಸಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ನಟ ಉಪೇಂದ್ರ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಎಫ್ಐಆರ್ ದಾಖಲಿಸಿದ್ದರು.

ಮತ್ತೊಂದು ಎಫ್ ಐ ಆರ್ ದಾಖಲು

ಇದೀಗ ಮತ್ತೆ ಉಪೇಂದ್ರ ವಿರುದ್ಧ ಕರ್ನಾಟಕ (Kannada News) ರಣಧೀರ ಪಡೆಯ ಭೈರಪ್ಪ ಹರೀಶ್‌ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ʻʻದಲಿತ ಸಮುದಾಯವನ್ನು ನಿಂದಿಸುವ ಮತ್ತು ಸಮುದಾಯಗಳನ್ನು /ಜಾತಿಗಳನ್ನು ಎತ್ತಿಕಟ್ಟಿ ಅಶಾಂತಿ, ಗಲಭೆ ಹುಟ್ಟಿಸುವ ಉದ್ದೇಶದಿಂದ ದಲಿತ ನಿಂದನೆ ಮಾಡಿದ್ದಾರೆ. ಉಪ್ಪಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು. ಸಾಮಾನ್ಯವಾಗಿ ದಲಿತರು ವಾಸ ಮಾಡುವ ಪ್ರದೇಶವನ್ನು ಹೊಲಗೇರಿ ಎಂದು ಹೇಳಿದ್ದಾರೆ. ಅಂದರೆ ಈ ರೀತಿ ದಲಿತರು ವಾಸ ಮಾಡುವ ಪ್ರದೇಶಗಳು ಕೆಟ್ಟ ಪ್ರದೇಶಗಳಾಗಿದ್ದು, ಊರು ಅಂದರೆ ಕೆಟ್ಟ ಪ್ರದೇಶಗಳೂ, ಕೆಟ್ಟ ಜನರೂ ಇರುತ್ತಾರೆ ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಭಾರತ ದಂಢಸಂಹಿತೆ ಪ್ರಕಾರ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕದಡಲು ಪೂರ್ವಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು ಅಪರಾಧವಾಗಿದೆ. ಉಪೇಂದ್ರ ಹೇಳಿಕೆಯ ಬಳಿಕ ಹೊಲೆಗೇರಿಗಳು ಎಂದರೆ ಕೆಟ್ಟ ಸ್ಥಳಗಳು, ಹೊಲೆಗೇರಿ ಎಂದರೆ ನಮ್ಮ ಧರ್ಮಕ್ಕೆ ಅವಮಾನ ಎಂಬ ಸಂದೇಶ ಸಾರ್ವಜನಿಕರನ್ನು ತಲುಪಿದೆ.ʼʼಎಂದು ದೂರು ದಾಖಲಿಸಿದ್ದಾರೆ. ಇಂದು (ಆಗಸ್ಟ್‌ 14ರಂದು) ವಿಡಿಯೊ ಮಾಡಿದ ಜಾಗದಲ್ಲಿ ಪೊಲೀಸರಿಂದ ಮಹಜರು ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Actor Upendra: ಯಾಕೆ ನನ್ನ ಮೇಲೆ ಇಷ್ಟೊಂದು ದ್ವೇಷ? ಟೀಕಿಸಿದವರಿಗೆ ಉಪೇಂದ್ರರಿಂದ ಹಲವು ಪ್ರಶ್ನೆಗಳು!

ಆಗಸ್ಟ್‌ 12ರಂದು ಉಪೇಂದ್ರ (Actor Upendra) ಅವರು ತಮ್ಮ ಅಭಿಮಾನಿಗಳ ಜತೆ ಪ್ರಜಾಕೀಯ ಮುನ್ನೆಲೆಗೆ ಬಂದು 6 ವರ್ಷವಾದ ಪ್ರಯುಕ್ತ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ʼಊರು ಅಂದ್ಮೇಲೆ ಹೊಲೆಗೇರಿ ಇರುತ್ತಲ್ಲಾ ಹಾಗೆ..ʼ ಎಂದು ಹೇಳಿದ್ದರು. ಇದೀಗ ಇದೇ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಜಾತಿ ಜಗಳ ಬಿಟ್ಟು ಒಂದಾಗಬೇಕು ಎನ್ನುವ ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು.

Exit mobile version