ಪಶ್ಚಿಮ ಗೋದಾವರಿ: ನಟ ಪ್ರಭಾಸ್ ಹುಟ್ಟುಹಬ್ಬ ಆಚರಣೆ ಮಾಡಲು ಹೋದ ಅವರ ಅಭಿಮಾನಿಗಳು ಅವಘಡವನ್ನೇ ಸೃಷ್ಟಿಸಿದ್ದಾರೆ. ಅಕ್ಟೋಬರ್ 23, ಭಾನುವಾರದಂದು ಪ್ರಭಾಸ್ ಹುಟ್ಟುಹಬ್ಬ ಇತ್ತು. 43ನೇ ವರ್ಷಕ್ಕೆ ಕಾಲಿಟ್ಟ ಅವರ ಜನ್ಮದಿನವನ್ನು ದೇಶದಲ್ಲೆಡೆ ಅವರ ಅಭಿಮಾನಿಗಳು ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕವೂ ತಮ್ಮ ನೆಚ್ಚಿನ ನಟನಿಗೆ ಬರ್ತ್ ಡೇ ವಿಶ್ ಕಳಿಸಿದ್ದಾರೆ.
ಇದೆಲ್ಲದರ ಮಧ್ಯೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲಿಗುಡೆಮ್ನಲ್ಲಿ ಒಂದಷ್ಟು ಅಭಿಮಾನಿಗಳ ಸೇರಿ ಪ್ರಭಾಸ್ ಹುಟ್ಟುಹಬ್ಬ ಆಚರಣೆ ಹಮ್ಮಿಕೊಂಡಿದ್ದರು. ಇವರೆಲ್ಲ ಸೇರಿ ಅಲ್ಲಿನ ವೆಂಕಟರಾಮ ಥಿಯೇಟರ್ ಬುಕ್ ಮಾಡಿಕೊಂಡು, ಅಲ್ಲಿ ಪ್ರಭಾಸ್ ಅವರ ಭಿಲ್ಲಾ ಸಿನಿಮಾ (2009ರಲ್ಲಿ ಬಿಡುಗಡೆಯಾದ ಚಿತ್ರ) ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಆದರೆ ಹುಚ್ಚೆದ್ದು ಕುಣಿದ ಅಭಿಮಾನಿಗಳು, ಮಿತಿಮೀರಿ ವರ್ತಿಸಿದ್ದಾರೆ. ಸಿನಿಮಾ ಹಾಲ್ನಲ್ಲಿ ಕೇಕ್ ಕತ್ತರಿಸಿ, ಅಲ್ಲಿಯೇ ಪಟಾಕಿ ಸಿಡಿಸಿದ್ದಾರೆ. ಇವರು ಮಾಡಿದ ಅವಾಂತರದಿಂದ ಥಿಯೇಟರ್ಗೆ ಬೆಂಕಿ ಹೊತ್ತಿಕೊಂಡು, ಹಲವಾರು ಸೀಟ್ಗಳು ಸುಟ್ಟುಬೂದಿಯಾಗಿವೆ. ಅಲ್ಲಿನ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಕೈಮೀರಿ ಹೋಗಿತ್ತು. ನಂತರ ಅಗ್ನಿಶಾಮಕ ದಳದವರೇ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ತಮ್ಮ ನೆಚ್ಚಿನ ನಟನ ವಿಚಾರ ಬಂದಾಗ ಅಭಿಮಾನಿಗಳು ತಾಳ್ಮೆ ಕಳೆದುಕೊಂಡು ವರ್ತಿಸುವುದು ಇದೇ ಮೊದಲೇನೂ ಅಲ್ಲ. 2021ರಲ್ಲಿ ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಸಿನಿಮಾ ಬಿಡುಗಡೆಯಾದಾಗ ಅವರ ಅಭಿಮಾನಿಗಳಿಂದಾಗಿ ವಿಶಾಖಪಟ್ಟಣದಲ್ಲಿರುವ ಒಂದು ಥಿಯೇಟರ್ನಲ್ಲಿ ನೂಕುನುಗ್ಗಲು ಉಂಟಾಗಿತ್ತು. ಕಾಲ್ತುಳಿತ ಅನೇಕರು ಗಾಯಗೊಂಡಿದ್ದರು. ಥಿಯೇಟರ್ನ ಕೂರ್ಚಿಗಳೆಲ್ಲ ಅಸ್ತವ್ಯಸ್ತವಾಗುವ ಜತೆ, ಗಾಜುಗಳು ಒಡೆದಿದ್ದವು.