Site icon Vistara News

Project K Movie : ಪ್ರಾಜೆಕ್ಟ್‌ ಕೆ ಚಿತ್ರದ ದೀಪಿಕಾ ಪಡುಕೋಣೆ ಫಸ್ಟ್‌ ಲುಕ್‌ ಹೀಗಿದೆ!

first look of deepika padukone

ಹೈದರಾಬಾದ್‌: ಬಾಲಿವುಡ್‌ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ನಟನೆಯ ತೆಲುಗು ಸಿನಿಮಾ ʼಪ್ರಾಜೆಕ್ಟ್‌ ಕೆʼ ಚಿತ್ರದ (Project K Movie) ದೀಪಿಕಾ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ. ಅದ್ಭುತವಾಗಿರುವ ಫಸ್ಟ್‌ ಲುಕ್‌ ನೋಡಿರುವ ಅಭಿಮಾನಿಗಳು ಸಂತಸದಿಂದ ಅದನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ.

ಪ್ರಾಜೆಕ್ಟ್‌ ಕೆ ದೀಪಿಕಾ ಅವರ ಮೊದಲ ತೆಲುಗು ಸಿನಿಮಾ. ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ವೈಜಯಂತಿ ಮೂವೀಸ್‌ ಪ್ರೊಡಕ್ಷನ್‌ ಹೌಸ್‌, ಫಸ್ಟ್‌ ಲುಕ್‌ ಅನ್ನು ಸೋಮವಾರ ಸಂಜೆ 5 ಗಂಟೆಗೆ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಕಾರಣಾಂತರಗಳಿಂದ ಸ್ವಲ್ಪ ತಡವಾಗಿ ಬಿಡುಗಡೆ ಮಾಡಲಾಗಿದೆ. ಫಸ್ಟ್‌ ಲುಕ್‌ನಲ್ಲಿ ದೀಪಿಕಾ ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Kamal Haasan : ʻಪ್ರಾಜೆಕ್ಟ್‌ ಕೆʼ ಸಿನಿಮಾದಲ್ಲಿ ಕಮಲ್ ಹಾಸನ್; ಸಂಭಾವನೆ ಎಷ್ಟು ನೋಡಿ!
ಫಸ್ಟ್‌ ಲುಕ್‌ ಹಂಚಿಕೊಂಡಿರುವ ವೈಜಯಂತಿ ಮೂವೀಸ್‌ ಪ್ರೊಡಕ್ಷನ್‌ ಹೌಸ್‌ “ಉತ್ತಮ ನಾಳೆಗಾಗಿ ಒಂದು ಭರವಸೆ ಬೆಳಕಿಗೆ ಬರುತ್ತದೆ” ಎಂದು ಹೇಳಿದೆ. ಹಾಗೆಯೇ ಸಿನಿಮಾದ ಫಸ್ಟ್‌ ಗ್ಲಿಮ್ಪಸಸ್‌ ಅನ್ನು ಭಾರತದಲ್ಲಿ ಜುಲೈ 21ರಂದು ಮತ್ತು ಅಮೆರಿಕದಲ್ಲಿ ಜುಲೈ 20ರಂದು ಬಿಡುಗಡೆ ಮಾಡುವುದಾಗಿಯೂ ತಿಳಿಸಿದೆ.

ಪ್ರಾಜೆಕ್ಟ್‌ ಕೆ ಸಿನಿಮಾ ವಿಷ್ಣು ದೇವರ ಭವಿಷ್ಯದ ಪುನರ್ಕಲ್ಪನೆಯ ಕುರಿತಾದ ಸಿನಿಮಾ ಎಂದು ಹೇಳಲಾಗುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಮಹಾನಟಿ’ಯನ್ನು ನಿರ್ದೇಶಿಸಿದ್ದ ನಿರ್ದೇಶಕ ನಾಗ್‌ ಅಶ್ವಿನ್‌ ಅವರು ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್‌ ಮತ್ತು ದಿಶಾ ಪಟಾನಿ ಕೂಡ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ತಮಿಳು ಸ್ಟಾರ್ ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ನೂರಾರು ಕೋಟಿಗಳ ಬೃಹತ್‌ ಬಜೆಟ್‌ನಲ್ಲಿ ತಯಾರಾಗುತ್ತಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Bheemana Amavasya: ನಟ ಪ್ರೇಮ್ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದ ಪತ್ನಿ
ಈ ತಿಂಗಳ ಆರಂಭದಲ್ಲಿ ಪ್ರಾಜೆಕ್ಟ್‌ ಕೆ ಸಿನಿಮಾ ಸ್ಯಾನ್‌ ಡಿಯಾಗೊದಲ್ಲಿ ಕಾಮಿಕ್‌ ಕಾನ್‌ನ ಭಾಗವಾಗಲಿದೆ ಎಂದು ಘೋಷಿಸಲಾಗಿತ್ತು. ಈ ರೀತಿ ಕಾಮಿಕ್‌ ಕಾನ್‌ಗೆ ಆಯ್ಕೆಯಾದ ಮೊದಲನೇ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಇದು ಪಡೆದುಕೊಂಡಿತ್ತು. ಈ ಬಗ್ಗೆ ದೀಪಿಕಾ ಪಡುಕೋಣೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. “ಕಾಮಿಕ್ ಕಾನ್‌ಗೆ ಹೋದ ಮೊದಲ ಭಾರತೀಯ ಚಲನಚಿತ್ರದ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಅಲ್ಲಿ ನಿಮ್ಮನ್ನು ನೋಡೋಣ” ಎಂದು ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ದೀಪಿಕಾ ಅವರು ʼಪ್ರಾಜೆಕ್ಟ್‌ ಕೆʼ ಸಿನಿಮಾದ ನಂತರ ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ʼಜವಾನ್‌ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ಪ್ರಿಯಾಮಣಿ ಬಣ್ಣ ಹಚ್ಚಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ.

Exit mobile version