ಬೆಂಗಳೂರು: ವಿವೇಕ್ ಅಗ್ನಿಹೋತ್ರಿ ( Vivek Ranjan Agnihotri ) ನಿರ್ದೇಶನದ ಮುಂಬರುವ ಚಿತ್ರ ʻದಿ ವ್ಯಾಕ್ಸಿನ್ ವಾರ್ʼ (The Vaccine War) ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಸಿನಿಮಾ ಸೆಪ್ಟೆಂಬರ್ 28ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ʼದಿ ವ್ಯಾಕ್ಸಿನ್ ವಾರ್ʼ ಪಾತ್ರವರ್ಗದಲ್ಲಿ ಅನುಪಮ್ ಖೇರ್, ವಿವೇಕ್ ಅವರ ಪತ್ನಿ ಪಲ್ಲವಿ ಜೋಶಿ, ನಾನಾ ಪಾಟೇಕರ್, ಸಪ್ತಮಿ ಗೌಡ (Sapthami Gowda) ಮತ್ತು ರೈಮಾ ಸೇನ್ ಇದ್ದಾರೆ. ಕನ್ನಡದ ನಟಿ ಸಪ್ತಮಿ ಗೌಡ ಸಹ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿದ್ದು, ಸಿನಿಮಾದಲ್ಲಿ ಅವರು ಸಹಾಯಕ ವಿಜ್ಞಾನಿಯ ಪಾತ್ರದಲ್ಲಿ ನಟಿಸಿದ್ದಾರೆಂಬ ಅನುಮಾನ ಪೋಸ್ಟರ್‌ನಲ್ಲಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜ್‌ಪುರಿ, ಪಂಜಾಬಿ, ಗುಜರಾತಿ, ಮರಾಠಿ ಮತ್ತು ಬೆಂಗಾಲಿ ಸೇರಿದಂತೆ 10 ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಅದೇ ದಿನ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ನ ʼಸಲಾರ್ʼ ಸಿನಿಮಾವೂ ಬಿಡುಗಡೆಯಾಗಲಿದೆ. ಹೀಗಾಗಿ ʼಸಲಾರ್ʼ ಜತೆ ʼದಿ ವ್ಯಾಕ್ಸಿನ್ ವಾರ್ʼ ಎಂದು ಹೇಳಲಾಗುತ್ತಿದೆ. ʼದಿ ವ್ಯಾಕ್ಸಿನ್ ವಾರ್ʼ ಟೀಸರ್ ಈ ಮುಂಚೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆಸ್ಪತ್ರೆಯಲ್ಲಿ ಕೊರೊನಾ ವ್ಯಾಕ್ಸಿನ್ ಕುರಿತ ಪ್ರಯೋಗದ ದೃಶ್ಯದೊಂದಿಗೆ ಆರಂಭವಾಗುವ ಟೀಸರ್‌ನಲ್ಲಿ ಭಾರತೀಯ ವಿಜ್ಞಾನಿಗಳು ವ್ಯಾಕ್ಸಿನ್‌ಗಾಗಿ ಪಟ್ಟ ಶ್ರಮವನ್ನು ಟೀಸರ್‌ನಲ್ಲಿ ಕಟ್ಟಿಕೊಡಲಾಗಿತ್ತು. ʼಕಾಶ್ಮೀರ್ ಫೈಲ್ಸ್ʼ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.
ಇದನ್ನೂ ಓದಿ: Young Scientist Award: ಡಾ.ಬಿ.ಜೆ.ಗಿರೀಶ್‌ಗೆ ಸರ್ ಸಿ.ವಿ.ರಾಮನ್ ಯುವ ವಿಜ್ಞಾನಿ ಪ್ರಶಸ್ತಿ
ವಿವೇಕ್ ಅಗ್ನಿಹೋತ್ರಿ, ಈಗಾಗಲೇ ಸಿನಿಮಾವನ್ನು ವಿದೇಶದಲ್ಲಿ ಕೆಲವೆಡೆ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ತಾವೇ ಖುದ್ದಾಗಿ ಹೋಗಿ ಅಮೆರಿಕದ ಹಲವು ಪ್ರದೇಶಗಳಲ್ಲಿ ಅಲ್ಲಿನ ಭಾರತೀಯರಿಗಾಗಿ ಪೇಯ್ಡ್ ಪ್ರೀಮಿಯರ್ಗಳನ್ನು ಪ್ರದರ್ಶಿಸಿದ್ದಾರೆ.
ಸಪ್ತಮಿ ಗೌಡ ಅವರಿಗೆ ಇದು ಮೊದಲನೇ ಬಾಲಿವುಡ್ ಸಿನಿಮಾ. ಅಷ್ಟೇ ಅಲ್ಲದೇ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ʼಕಾಳಿʼ ಸಿನಿಮಾದಲ್ಲಿಯೂ ಸಪ್ತಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಪೈಲ್ವಾನ್, ಗಜಕೇಸರಿ, ಹೆಬ್ಬುಲಿ ಚಿತ್ರವನ್ನು ನಿರ್ದೇಶಿಸಿರುವ ಕೃಷ್ಣ ಅವರು ʼಕಾಳಿʼ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ಯುವ ರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾ ʻಯುವʼ ಸಿನಿಮಾಗೂ ಸಪ್ತಮಿ ನಾಯಕಿಯಾಗಿ ನಟಿಸುತ್ತಿದ್ದಾರೆ.