ಕನ್ನಡದ ಸುದೀಪ್ ಅಭಿನಯದ ‘ನಮ್ಮಣ್ಣ’, ರವಿಚಂದ್ರನ್-ಶಿವರಾಜ್ಕುಮಾರ್ ಅಭಿನಯದ ‘ಕೋದಂಡರಾಮ’ ಮತ್ತು ಹಿಂದಿ, ತೆಲುಗು-ತಮಿಳಿನ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ ಫ್ಲೋರಾ ಸೈನಿ ಅವರು ತಮ್ಮ ಜೀವನದ ಕರಾಳ ಕ್ಷಣವನ್ನು ನೆನಪಿಸಿಕೊಂಡು ಪೋಸ್ಟ್ ಹಾಕಿದ್ದಾರೆ. 20ನೇ ವಯಸ್ಸಿನಲ್ಲಿದ್ದಾಗ ತಾವು ಚಿತ್ರ ನಿರ್ಮಾಪಕನೊಬ್ಬನನ್ನು ಪ್ರೀತಿಸಿ ಕಷ್ಟಪಟ್ಟದ್ದನ್ನು ಹಾಗೂ ನಂತರ ಆತನಿಂದ ದೂರವಾಗಿ ಈಗ ಸುಂದರ ಬದುಕು ಕಟ್ಟಿಕೊಂಡಿದ್ದನ್ನು ಅವರು ಕೆಲವೇ ಸಾಲುಗಳ ಮೂಲಕ ವಿವರಿಸಿದ್ದಾರೆ.
‘ನಾನು 20ನೇ ವರ್ಷದಲ್ಲಿದ್ದಾಗ ನನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದೆ. ಹಲವು ಸಿನಿಮಾಗಳು ಕೈಯಲ್ಲಿದ್ದವು. ಅದರ ನಡುವೆಯೇ ಮಾಡೆಲಿಂಗ್ ಕೂಡ ಮಾಡುತ್ತಿದ್ದೆ. ಅದೇ ಸಮಯದಲ್ಲಿಯೇ ನಾನೊಬ್ಬನ ಪ್ರೀತಿಯಲ್ಲಿ ಬಿದ್ದೆ. ಆತ ಆಗ ಹೆಸರು ಮಾಡಿದ್ದ, ದೊಡ್ಡ ಚಿತ್ರ ನಿರ್ಮಾಪಕ. ಆದರೆ ಈ ಪ್ರೀತಿ ನನ್ನನ್ನು ನರಳಿಸಿತು. ನನ್ನ ಪಾಲಕರು ಈ ಸಂಬಂಧ ಒಪ್ಪದೆ ಇದ್ದರೂ ನಾನು ಕೇಳದೆ ಅವನೊಂದಿಗೆ ಇರಲು ಶುರುಮಾಡಿದೆ. ಆದರೆ ನಾವಿಬ್ಬರೂ ಒಟ್ಟಿಗೆ ಇರಲು ಶುರು ಮಾಡಿದ ಕೆಲವೇ ದಿನದಲ್ಲಿ ಬದಲಾವಣೆಗಳು ಆದವು. ಆತ ನನ್ನನ್ನು ಅಶ್ಲೀಲವಾಗಿ ನಿಂದಿಸುತ್ತಿದ್ದ. ನನ್ನ ಮುಖ-ಖಾಸಗಿ ಅಂಗಗಳ ಮೇಲೆ ಗುದ್ದಿ ನೋಯಿಸುತ್ತಿದ್ದ. ನನ್ನ ಫೋನ್ ಕಿತ್ತಿಟ್ಟುಕೊಂಡು, ನಾನು ಯಾವುದೇ ಕೆಲಸಕ್ಕೆ ಹೋಗದಂತೆ ನಿಯಂತ್ರಣ ಹೇರಿದ. ಇದೇ ಸ್ಥಿತಿಯಲ್ಲಿ 14 ತಿಂಗಳು ಕಳೆದೆ. ಇಷ್ಟೂ ದಿನ ನಾನು ಯಾರೊಂದಿಗೂ ಮಾತನಾಡದಂತೆ ಅವನು ನಿರ್ಬಂಧ ಹೇರಿದ್ದ. ಹೀಗೆ ಒಂದು ದಿನ ಸಂಜೆ ಆ ನನ್ನ ಪ್ರಿಯತಮ ಎನ್ನಿಸಿಕೊಂಡಿದ್ದವ ನನ್ನ ಹೊಟ್ಟೆಗೆ ಬಲವಾಗಿ ಗುದ್ದಿದ ಮತ್ತು ಅಂದೇ ರಾತ್ರಿ ನಾನು ಅವನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದೆ’
‘ಬಳಿಕ ನಾನು ನನ್ನ ಅಪ್ಪ-ಅಮ್ಮನೊಟ್ಟಿಗೆ ವಾಸಿಸಲು ಪ್ರಾರಂಭಿಸಿದೆ. ಆದರೆ ದೈಹಿಕ ಮತ್ತು ಮಾನಸಿಕ ಗಾಯಗಳಿಂದ-ಆಘಾತದಿಂದ ಚೇತರಿಸಿಕೊಳ್ಳಲು ನನಗೆ ತಿಂಗಳುಗಳೇ ಬೇಕಾದವು. ಆದರೆ ನಿಧಾನಕ್ಕೆ ನಾನು ಅದರಿಂದ ಹೊರಬಿದ್ದೆ. ನಟನೆಯನ್ನೇ ಇಷ್ಟಪಟ್ಟು, ಅದರಲ್ಲೇ ಹೆಚ್ಚೆಚ್ಚು ತೊಡಗಿಸಿಕೊಂಡೆ. ನಾನೀಗ ಖುಷಿಯಾಗಿದ್ದೇನೆ. ನನಗೆ ಈಗ ಹೊಸದಾದ-ನೈಜವಾದ ಪ್ರೀತಿ ಸಿಕ್ಕಿದೆ. ಎಷ್ಟೇ ಕತ್ತಲು ಆವರಿಸಲಿ, ನಾನು ನನಗಾಗಿ ಒಂದು ಬೆಳಕು ಕಂಡುಕೊಳ್ಳುತ್ತೇನೆ’ ಎಂದು ನಟಿ ಫ್ಲೋರಾ ಸೈನಿ ಬರೆದುಕೊಂಡಿದ್ದಾರೆ.
ಹಾಗೇ ‘ಜೀವನ ಯಾವತ್ತಿಗೂ ಮುಂದುವರಿಯುತ್ತಿರಬೇಕು. ಬದುಕಲ್ಲಿ ದೊಡ್ಡದೊಡ್ಡ ಪಾಠಗಳನ್ನು ನಾವು ಕಲಿತ ಬಳಿಕವಷ್ಟೇ ಅಷ್ಟೇ ದೊಡ್ಡ ಮಟ್ಟದ ಪ್ರತಿಫಲ-ಒಳ್ಳೆಯ ಸಂಗತಿಗಳು ನಮಗೆ ಸಿಗುತ್ತ ಹೋಗುತ್ತವೆ. ಜೀವನ ನಮಗಾಗಿ ಸೃಷ್ಟಿಸಿಕೊಡುವ ಮ್ಯಾಜಿಕ್ಗಳ ಮೇಲೆ ಅಪನಂಬಿಕೆ ಬೇಡ. ಈ ಭೂಮಿ ನಿಮಗಾಗಿ ಹೊತ್ತು ತರುವ ಅಚ್ಚರಿಯ ಮೇಲೆ ಸದಾ ನಂಬಿಕೆಯಿಡಿ. ಆದರೆ ಎಷ್ಟಾಗತ್ತೋ ಅಷ್ಟು ಕಡಿಮೆ ನಿರೀಕ್ಷೆಗಳನ್ನು ಇಟ್ಟುಕೊಳ್ಳಿ’ ಎಂದು ಬರೆದಿದ್ದಾರೆ.
ನಟಿ ಫ್ಲೋರಾ ಈ ವಿಚಾರವನ್ನು ಹೇಳಿಕೊಳ್ಳುತ್ತಿರುವುದು ಇದೇ ಮೊದಲೇನೂ ಅಲ್ಲ. 2018ರಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ಕೊಟ್ಟಾಗಲೂ ತಾನು ಅನುಭವಿಸಿದ ನರಕಸದೃಶ ಕ್ಷಣಗಳನ್ನು ಹೇಳಿಕೊಂಡಿದ್ದರು. ಅಂದಹಾಗೇ, ಈ ನಟಿ ಪ್ರೀತಿಸಿದ್ದು ಗೌರಾಂಗ್ ದೋಶಿ ಎಂಬ ಚಿತ್ರನಿರ್ಮಾಪಕನನ್ನು. ಆತ ಫ್ಲೋರಾರಿಗೆ ಹಿಂಸೆ ನೀಡುತ್ತಿದ್ದ ಎನ್ನುವುದು ಈಗಾಗಲೇ ಜಗಜ್ಜಾಹೀರಾದ ವಿಷಯವಾಗಿದೆ.