ಮುಂಬೈ: ಸ್ನೇಹ ಜಾತಿ, ಧರ್ಮ, ವರ್ಣ ಸೇರಿ ಎಲ್ಲ ಭಾವನೆಗಳನ್ನು ಮೀರಿದ್ದು. ಪ್ರತಿಯೊಬ್ಬರಿಗೂ ತಮ್ಮ ಆಂತರ್ಯವನ್ನು ತೆರೆದುಕೊಳ್ಳಲು ಸಾಧ್ಯ ಆಗುವುದು ಸ್ನೇಹಿತರ ಮುಂದೆ ಮಾತ್ರ. ಸಂತೋಷದಿಂದ ಹ್ಯಾಂಗ್‌ಔಟ್ ಮಾಡುವುದರಿಂದ ಹಿಡಿದು ದುಃಖದಲ್ಲಿ ಸಮಾಧಾನ ಮಾಡುವವರೆಗೆ ಎಲ್ಲದಕ್ಕೂ ಮೊದಲು ಮುಂದೆ ಬರುವವರೇ ಸ್ನೇಹಿತರು. ಬಾಲಿವುಡ್‌ನಲ್ಲಿ ಕೂಡ ಈ ಸ್ನೇಹವನ್ನು ತೋರಿಸುವಂತಹ ಅನೇಕ ಸಿನಿಮಾಗಳು (Friendship Movies) ಬಿಡುಗಡೆಯಾಗಿ ಜನರ ಮನಸ್ಸನ್ನು ಗೆದ್ದಿವೆ. ಅಂತಹ ಕೆಲವು ಸಿನಿಮಾಗಳ ಪರಿಚಯವನ್ನು ಸ್ನೇಹಿತರ ದಿನದ (Friendship Movies) ಹಿನ್ನೆಲೆಯಲ್ಲಿ ನಾವಿಲ್ಲಿ ನೀಡುತ್ತಿದ್ದೇವೆ. ಈ ಸಿನಿಮಾಗಳನ್ನು ನೀವು ನೋಡಿರದಿದ್ದರೆ ಈಗ ನೋಡಬಹುದು.
3 ಈಡಿಯಟ್ಸ್
ಫ್ರೆಂಡ್‌ಶಿಪ್ ವಿಚಾರ ಬಂದಾಗ 3 ಈಡಿಯಟ್ಸ್ ಸಿನಿಮಾವನ್ನು ಮರೆಯಲು ಸಾಧ್ಯವೇ? ಹಾಸ್ಯಮಯವಾದ ಈ ಸಿನಿಮಾ “ಆಲ್ ಈಸ್ ವೆಲ್” ಎನ್ನುತ್ತಾ ದೊಡ್ಡ ಜೀವನ ಪಾಠವನ್ನೇ ಹೇಳಿಕೊಟ್ಟಿತು. ಆಮೀರ್ ಖಾನ್, ಆರ್ ಮಾಧವನ್ ಮತ್ತು ರಾಜು ರಸ್ತೋಗಿ ಅವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಅವರ ಸ್ನೇಹ ವೈಯಕ್ತಿಕ ಸಮಸ್ಯೆಗಳನ್ನೂ ಬಗೆಹರಿಸಲು ಮುಂದಾಗುವಷ್ಟು ಗಟ್ಟಿಯಾಗಿರುತ್ತದೆ. ಬದುಕಲು ಸ್ನೇಹ ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟಿರುವ ಈ ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕ ನಟಿಯಾಗಿ ನಟಿಸಿದ್ದಾರೆ.
ಶೋಲೆ
ಯೇ ದೋಸ್ತಿ ಹಮ್ ನಹೀ ತೋಡೆಂಗೇ… ಹಾಡು ಇಂದಿಗೂ ಸ್ನೇಹಿತರಿಗೆ ಹೇಳಿ ಮಾಡಿಸಿರುವ ಹಾಡು. ಈ ಹಾಡು ಇರುವುದು ಅಮಿತಾಭ್ ಬಚ್ಚನ್ ನಟಿಸಿರುವ ʼಶೋಲೆʼ ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಅಮಿತಾಭ್ ಮತ್ತು ಧರ್ಮೇಂದ್ರ ಅವರ ಸ್ನೇಹ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಡಕಾಯಿತನಿಂದ ದಾಳಿಗೆ ಒಳಗಾಗುವ ಹಳ್ಳಿಯನ್ನು ರಕ್ಷಿಸಲು ಈ ಇಬ್ಬರು ಸ್ನೇಹಿತರು ಹೋರಾಡುವ ರೀತಿ ಸಿನಿಮಾವನ್ನು ಗೆಲ್ಲಿಸಿದೆ. ಈ ಸಿನಿಮಾ ಇಂದಿಗೂ ಅನೇಕರಿಗೆ ಅವಿಸ್ಮರಣೀಯ ಸಿನಿಮಾವಾಗಿದೆ.
ಕುಚ್ ಕುಚ್ ಹೋತಾ ಹೈ
ಕರಣ್ ಜೋಹರ್ ಅವರು ನಿರ್ದೇಶಕನಾಗಿ ಹೊರಹೊಮ್ಮಿದ ಈ ಸಿನಿಮಾ ಸ್ನೇಹದ ನಿಜ ಅರ್ಥವನ್ನು ತೋರಿಸಿಕೊಡುತ್ತದೆ. ಯಾವುದೇ ಪ್ರೀತಿ ಇರಬೇಕು ಎಂದರೆ ಅಲ್ಲಿ ಎಲ್ಲಕ್ಕಿಂತ ಮೊದಲು ಸ್ನೇಹ ಹುಟ್ಟಿಕೊಂಡಿರಲೇಬೇಕು ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಈ ಸಿನಿಮಾದಲ್ಲಿ ನಟ ಶಾರುಖ್ ಖಾನ್, ನಟಿಯರಾದ ಕಾಜೋಲ್ ಹಾಗೂ ರಾಣಿ ಮುಖರ್ಜಿ ಅವರು ನಟಿಸಿದ್ದಾರೆ. ಇದರಲ್ಲಿ ಕಾಜೋಲ್ ಹಾಗೂ ಶಾರುಖ್ ಖಾನ್ ಸ್ನೇಹದಿಂದ ಪ್ರೀತಿಗೆ ಜಾರುವುದನ್ನು ನೀವು ಕಾಣಬಹುದು.
ಮುನ್ನಾಭಾಯ್ MBBS
ಈ ಸಿನಿಮಾ ಬಾಲಿವುಡ್ ಪ್ರೇಮಿಗಳನ್ನು ನಕ್ಕು ನಲಿಸಿದ ಸಿನಿಮಾ. ಗೂಂಡಾ ಪ್ರವೃತ್ತಿಯ ಯುವಕ ತನ್ನ ಅತ್ಯಾಪ್ತ ಸ್ನೇಹಿತನೊಂದಿಗೆ ಮಾಡುವ ಹಾಸ್ಯಮಯ ಕೆಲಸಗಳನ್ನು ಸಿನಿಮಾದಲ್ಲಿ ನೋಡಬಹುದು. ರಾಜ್‌ಕುಮಾರ್ ಹಿರಾನಿ ಅವರು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ, ಗೂಂಡಾನ ತಂದೆ ತನ್ನ ಮಗನನ್ನು ಡಾಕ್ಟರ್ ಆಗಿ ನೋಡಲು ಬಯಸಿರುತ್ತಾನೆ. ಆದರೆ ಗೂಂಡಾ ಸ್ವಭಾವ ಬಿಡದ ಆತ ವರ್ಷಗಳ ಕಾಲ ತಂದೆಗೆ ತಾನೊಬ್ಬ ಡಾಕ್ಟರ್ ಎಂದು ಸುಳ್ಳು ಹೇಳಿಕೊಂಡು ಬರುವುದು ಮತ್ತು ಅದಕ್ಕೆ ಆತನ ಸ್ನೇಹಿತ ಸಾಥ್ ಕೊಡುವುದನ್ನು ನೀವು ನೋಡಬಹುದು. ಸಿನಿಮಾದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Friendship Day 2023: ಗೆಳೆತನದ ಸೀಕ್ರೆಟ್; ದೂರದ ಗೆಳೆಯರು ಸದಾ ಇರಲಿ ನಿಮ್ಮ ಹತ್ತಿರ!
ರಾಕ್ ಆನ್
1998ರಲ್ಲಿ ಬಿಡುಗಡೆಯಾದ ʼರಾಕ್ ಆನ್ʼ ಭಾರತದಲ್ಲಿ ತಯಾರಾದ ಮೊದಲ ರಾಕ್ ಮ್ಯೂಸಿಕಲ್ ಚಿತ್ರವಾಗಿದೆ. ಫರ್ಹಾನ್ ಅಖ್ತರ್ ಅವರು ಮೊದಲ ನಟನೆಯ ಹಾಗೂ ಗಾಯನದ ಸಿನಿಮಾವಿದು. ಸ್ನೇಹಿತರೆಲ್ಲರೂ ಸೇರಿಕೊಂಡು ಮ್ಯೂಸಿಕಲ್ ಬ್ಯಾಂಡ್ ಒಂದನ್ನು ತಯಾರಿಸಿಕೊಳ್ಳುತ್ತಾರೆ. ಆದರೆ ಅವರ ಅಹಂನಿಂದಾಗಿ ಅದು ನಿಲ್ಲುತ್ತದೆ. ಹತ್ತು ವರ್ಷಗಳ ನಂತರ ಅದರಲ್ಲಿ ಒಬ್ಬನಿಗೆ ಕ್ಯಾನ್ಸರ್ ಇದೆ ಮತ್ತು ಆತನಿಗೆ ಮ್ಯೂಸಿಕ್ ಬ್ಯಾಂಡ್ ಕೊನೆಯ ಆಸೆಯಾಗಿದೆ ಎಂದು ತಿಳಿದ ತಕ್ಷಣ ಎಲ್ಲರೂ ಒಟ್ಟಾಗಿ ಬ್ಯಾಂಡ್ ನಡೆಸುವ ವಿಶೇಷ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಿಕೊಡಲಾಗಿದೆ.
ರಂಗ್ ದೇ ಬಸಂತಿ
ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರು ಬರೆದು ನಿರ್ದೇಶನ ಮಾಡಿರುವ ಸಿನಿಮಾ ʼರಂಗ್ ದೇ ಬಸಂತಿʼ. ಸಿನಿಮಾದಲ್ಲಿ ಆಮೀರ್ ಖಾನ್, ಸಿದ್ಧಾರ್ಥ್ ನಾರಾಯಣ್, ಸೋಹಾ ಅಲಿ ಖಾನ್, ಕುನಾಲ್ ಕಪೂರ್, ಆರ್. ಮಾಧವನ್, ಶರ್ಮನ್ ಜೋಶಿ, ಅತುಲ್ ಕುಲಕರ್ಣಿ ಮತ್ತು ಬ್ರಿಟಿಷ್ ನಟಿ ಆಲಿಸ್ ಪ್ಯಾಟನ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಸ್ನೇಹಿತರೆಲ್ಲರು ಸೇರಿಕೊಂಡು ಸಿನಿಮಾ ಮಾಡುವ ಸುತ್ತ ಹೆಣೆದಿರುವ ಕಥೆ ಇದಾಗಿದೆ. ಇದರಲ್ಲಿ ಸ್ನೇಹಿತರು ಎಷ್ಟೊಂದು ಆಳವಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತಿರುತ್ತಾರೆ ಎನ್ನುವುದನ್ನು ತೋರಿಸಿಕೊಡಲಾಗಿದೆ.
ಯೆ ಜವಾನಿ ಹೈ ದೀವಾನಿ
ಈ ಸಿನಿಮಾದಲ್ಲಿ ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಆದಿತ್ಯ ರಾಯ್ ಕಪೂರ್ ಮತ್ತು ಕಲ್ಕಿ ಕೊಚ್ಲಿನ್ ಅವರು ಆಪ್ತ ಸ್ನೇಹಿತರಾಗಿ ನಟಿಸಿದ್ದಾರೆ. ಕಾಲೇಜು ದಿನಗಳಿಂದಲೂ ಒಟ್ಟಾಗಿದ್ದ ಈ ಸ್ನೇಹಿತರು ಕೊನೆಗೆ ಬೇರೆ ಬೇರೆಯಾಗಿ ಮತ್ತೆ ಕಲ್ಕಿ ಮದುವೆಯಲ್ಲಿ ಎಲ್ಲರೂ ಒಟ್ಟಾಗಿ ಸೇರುವುದರ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಜೀವನದಲ್ಲಿ ಎಲ್ಲವೂ ಇದ್ದು, ಸ್ನೇಹಿತರಿಲ್ಲವೆಂದರೆ ಅದಕ್ಕೆ ಅರ್ಥವೇ ಇಲ್ಲ ಎನ್ನುವ ಸಂದೇಶವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಸಿನಿಮಾ 2013ರಲ್ಲಿ ಬಿಡುಗಡೆಯಾಗಿತ್ತು.
ಇದನ್ನೂ ಓದಿ: Friendship Day 2023: ನೀವು ಒಳ್ಳೆಯ ಗೆಳೆಯರೇ? ರಾಶಿಗನುಗುಣವಾಗಿ ನಿಮ್ಮ ಗೆಳೆತನದ ಗುಣ ಹೀಗಿದೆ!
ದಿಲ್ ಚಾಹ್ತಾ ಹೈ
ಆಮೀರ್ ಖಾನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಖನ್ನಾ ಅವರು ನಟಿಸಿರುವ ಈ ಸಿನಿಮಾವನ್ನು ಫರ್ಹಾನ್ ಅಖ್ತರ್ ಅವರು ನಿರ್ದೇಶನ ಮಾಡಿದ್ದಾರೆ. ಮುಂದಿನ ಭವಿಷ್ಯದ ಬಗ್ಗೆ ಗೊಂದಲವನ್ನೇ ತುಂಬಿಕೊಂಡಿದ್ದ ಸ್ನೇಹಿತರು ಒಬ್ಬರಿಂದ ಒಬ್ಬರು ಬೇರಾಗಿ 16 ವರ್ಷಗಳ ನಂತರ ಮತ್ತೆ ಸಿಗುವ ಬಗ್ಗೆ ಕಥೆಯಲ್ಲಿ ತೋರಿಸಲಾಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಒಳ್ಳೆಯ ಗಳಿಕೆಯನ್ನು ಕಂಡಿತ್ತು. ನಾಯಕ ನಟಿಯನ್ನು ಮುಖ್ಯವಾಗಿಸದೆ ಸ್ನೇಹವನ್ನೇ ಮುಖ್ಯವಾಗಿಟ್ಟುಕೊಂಡು ಸಿನಿಮಾ ಮಾಡಬಹುದು ಎನ್ನುವುದನ್ನು ಈ ಸಿನಿಮಾ ತೋರಿಸಿಕೊಟ್ಟಿತು.
ಜಿಂದಗಿ ನಾ ಮಿಲೇಗಿ ದುಬಾರ
ಜೋಯಾ ಅಖ್ತರ್ ನಿರ್ದೇಶನದ ಈ ಸಿನಿಮಾ ಮೂವರು ಸ್ನೇಹಿತರ ಕಥೆಯಾಗಿದೆ. ರೋಡ್ ಟ್ರಿಪ್‌ಗೆಂದು ಹೋಗುವ ಸ್ನೇಹಿತರು ಜೀವನದ ಏಳುಬೀಳುಗಳನ್ನು ಒಟ್ಟಿಗೆ ಎದುರಿಸುವ ಅತ್ಯದ್ಭುತ ಕಥೆ ಇದರಲ್ಲಿದೆ. ಸಿನಿಮಾದಲ್ಲಿ ಹೃತಿಕ್ ರೋಷನ್, ಅಭಯ್ ಡಿಯೋಲ್ ಮತ್ತು ಫರ್ಹಾನ್ ಅಖ್ತರ್ ನಟಿಸಿದ್ದಾರೆ. ಮೂರು ರೀತಿಯ ಪಾತ್ರಗಳು ಒಟ್ಟಾದಾಗ ನಡೆಯುವ ಜಗಳ, ತಮಾಷೆ, ಭಾವನಾತ್ಮಕ ಕ್ಷಣ ಎಲ್ಲವನ್ನೂ ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಈ ಸಿನಿಮಾ 2011ರಲ್ಲಿ ಬಿಡುಗಡೆಯಾಯಿತು.
ಕಲ್ ಹೋ ನಾ ಹೋ
ಬದುಕನ್ನು ಪ್ರೀತಿಸಲು ಕಲಿಸುವ ಸಿನಿಮಾ ಕಲ್ ಹೋ ನಾ ಹೋ. ನೈನಾ ಹೆಸರಿನ ಯುವತಿ(ಪ್ರೀತಿ ಜಿಂಟಾ) ನ್ಯೂಯಾರ್ಕ್‌ನಲ್ಲಿ ಧೈರ್ಯಶಾಲಿಯಾಗಿ ಬದುಕುತ್ತಿರುತ್ತಾಳೆ. ಆಕೆಗೆ ಅಮನ್ ಮೆಹ್ರಾ (ಶಾರುಖ್ ಖಾನ್) ಪರಿಚಯವಾಗಿ ಸ್ನೇಹ ಬೆಳೆಯುತ್ತದೆ. ಆತ ಸಂತಸದಿಂದ ಬದುಕುವುದನ್ನು ಕಂಡು ಆಕೆಯೂ ಅವನೊಂದಿಗೆ ಸಂತಸದಿಂದ ಬದುಕಲಾರಂಭಿಸುತ್ತಾಳೆ. ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಕೂಡ ಇದ್ದು, ಆತ ನೈನಾರನ್ನು ಪ್ರೀತಿಸುವ ಹುಡುಗನಾಗಿರುತ್ತಾನೆ. ಈ ಮೂವರು ಮಧ್ಯೆ ಸ್ನೇಹ ಮತ್ತು ಪ್ರೀತಿಯನ್ನು ತೋರಿಸುವ ಸಿನಿಮಾ ಇದಾಗಿದೆ.