Site icon Vistara News

Gadar 2 Movie: ಜೈಲರ್‌ ಅಬ್ಬರದ ಮಧ್ಯೆಯೂ ಖದರ್‌ ತೋರಿಸಿದ ಗದರ್‌ 2, ಮೊದಲ ದಿನ ಭಾರಿ ಕಲೆಕ್ಷನ್

gadar 2 movie

ಮುಂಬೈ: ಗದರ್‌ 2 ಸಿನಿಮಾ (Gadar 2 Movie) ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣಲಾರಂಭಿಸಿದೆ. ಬಿಡುಗಡೆಗೆ ಮೊದಲೇ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಈ ಸಿನಿಮಾ ಬಿಡುಗಡೆಯಾದ ದಿನವೇ ಭಾರೀ ಮೊತ್ತವನ್ನು ಕಲೆಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿನಿಮಾದ ಗಳಿಕೆ ನೋಡಿರುವ ತಜ್ಞರು ಸಿನಿಮಾ ಶೀಘ್ರವೇ 100 ಕೋಟಿ ರೂ. ಗಳಿಕೆಯನ್ನು ದಾಟಲಿದೆ ಎಂದು ಹೇಳಲಾರಂಭಿಸಿದ್ದಾರೆ.

Sacnilk.com ವೆಬ್‌ಸೈಟ್‌ ವರದಿಯ ಪ್ರಕಾರ ಗದರ್‌ 2 ಸಿನಿಮಾ ಬಿಡುಗಡೆಯಾದ ದಿನ ದೇಶಾದ್ಯಂತ ಒಟ್ಟಾರೆಯಾಗಿ 40 ಕೋಟಿ ರೂ.ಗೂ ಅಧಿಕ ಸಂಪಾದನೆಯನ್ನು ಮಾಡಿಕೊಂಡಿದೆ. ಹಾಗೆಯೇ ಶುಕ್ರವಾರ ಥಿಯೇಟರ್‌ಗಳಲ್ಲಿ ಹಿಂದಿ ಸಿನಿಮಾ ನೋಡಿದವರ ಪೈಕಿ ಶೇ.60.81 ಮಂದಿ ಗದರ್‌ 2 ಸಿನಿಮಾವನ್ನೇ ನೋಡಿದ್ದಾರೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Viral Video: ಕುಂದಾಪುರದಲ್ಲಿ ಕೆಸರಿನಲ್ಲಿ ಸಿಕ್ಕಿಬಿದ್ದಿದ್ದ ಹಸುವನ್ನು ರಕ್ಷಿಸಿದ ಬೈಕರ್‌; ಜನರಿಂದ ಭಾರಿ ಮೆಚ್ಚುಗೆ

ಈ ಗದರ್‌ 2 ಸಿನಿಮಾ 2001ರಲ್ಲಿ ಬಿಡುಗಡೆಯಾದ ಗದರ್‌: ಏಕ್‌ ಪ್ರೇಮ್‌ ಕಥಾ ಸಿನಿಮಾದ ಸೀಕ್ವೆಲ್‌ ಆಗಿದೆ. 2001ರಲ್ಲಿ ಬಿಡುಗಡೆಯಾದಾಗ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಹಣ ಬಾಚಿಕೊಳ್ಳುವುದರೊಂದಿಗೆ ಸಿನಿಮಾ ದಾಖಲೆ ಬರೆದಿತ್ತು. ಇದೀಗ ಅದೇ ರೀತಿಯಲ್ಲಿ ಅದರ ಎರಡನೇ ಭಾಗ ಕೂಡ ಜನರ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗಿದೆ.

ಗದರ್‌ 2 ಸಿನಿಮಾದಲ್ಲಿ ಸನ್ನಿ ಡಿಯೋಲ್‌, ಆಮಿಷಾ ಪಟೇಲ್‌ ಮತ್ತು ಉತ್ಕರ್ಷ್‌ ಶರ್ಮಾ ಅವರು ನಟಿಸಿದ್ದಾರೆ. 1971ರಲ್ಲಿ ಭಾರತ ಪಾಕಿಸ್ತಾನ ನಡುವೆ ಯುದ್ಧ ನಡೆದ ಸಂದರ್ಭದಲ್ಲಿನ ಕಥೆ ಇದಾಗಿದೆ. ಇದರಲ್ಲಿ ಸನ್ನಿ ಅವರು ತಾರಾ ಸಿಂಗ್‌ ಪಾತ್ರದಲ್ಲಿ ನಟಿಸಿದ್ದರೆ, ಆಮಿಷಾ ಅವರು ತಾರಾ ಪತ್ನಿ ಸಕೀನಾ ಪಾತ್ರದಲ್ಲಿ ಹಾಗೆಯೇ ಉತ್ಕರ್ಷ್‌ ಅವರು ಅವರ ಪುತ್ರ ಚರಣ್‌ ಜೀತ್‌ ಸಿಂಗ್‌ ಪಾತ್ರದಲ್ಲಿ ನಟಿಸಿದ್ದಾರೆ. ತರಣ್‌ ಜೀತ್‌ ಸಿಂಗ್‌ ಪಾಕಿಸ್ತಾನದಲ್ಲಿ ಪಾಕ್‌ ಸೇನೆಯ ಕೈಗೆ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲೆಂದು ತಾರಾ ಸಿಂಗ್‌ ಪಾಕಿಸ್ತಾನಕ್ಕೆ ತೆರಳುವ ಕಥೆ ಇದರಲ್ಲಿದೆ. ಈ ಸಿನಿಮಾದವನ್ನು ಅನಿಲ್‌ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ.

ಈ ಹಿಂದೆ ಸನ್ನಿ ಡಿಯೋಲ್‌ ಅವರು ಈ ಸಿನಿಮಾದ ಬಗ್ಗೆ ಮಾತನಾಡಿದ್ದರು. “ಗದರ್‌ 2 ಸಿನಿಮಾ ತನ್ನ ಮೊದಲ ಭಾಗದ ಪರಂಪರೆಯನ್ನು ಮುಂದಕ್ಕೆ ಒಯ್ಯುತ್ತದೆ. ಭಾರತದ ಅತ್ಯಂತ ಪ್ರೀತಿಯ ಕೌಟುಂಬಿಕ ಸಿನಿಮಾವನ್ನು ಮರಳಿ ತರುವುದಕ್ಕೆ ಸಾಧಯವಾಗಿರುವುದು ನಮಗೆ ಸಿಕ್ಕ ಆಶೀರ್ವಾದವಾಗಿದೆ. ಈ ಜಗತ್ತು ತಾರಾ ಮತ್ತು ಸಕೀನಾಳನ್ನು ಮತ್ತೆ ತೆರೆದ ತೋಳುಗಳಿಂದ ಸ್ವಾಗತಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದರು. ಮೊದಲನೇ ದಿನದಂದೇ 40 ಕೋಟಿ ರೂ. ಬಾಚಿಕೊಂಡಿರುವ ಗದರ್‌ 2 ಸಿನಿಮಾ ಈ ವಾರಾಂತ್ಯದಲ್ಲಿ ಎಷ್ಟು ಗಳಿಕೆ ಮಾಡಿಕೊಳ್ಳುತ್ತದೆ ಹಾಗೆಯೇ ಎರಡನೇ ವಾರದಲ್ಲಿ ಅದರ ಗಳಿಕೆ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Exit mobile version