Site icon Vistara News

Gajarama Movie: ’ಗಜರಾಮ’ ಟೀಸರ್ ಔಟ್‌; ಆ್ಯಕ್ಷನ್ ಮೂಡ್‌ನಲ್ಲಿ ರಾಜವರ್ಧನ್

gajarama

gajarama

ಬೆಂಗಳೂರು: ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ (Rajavardan) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಮ್ಯಾಸೀವ್ ಸ್ಟಾರ್ ಇದೀಗ ʼಗಜರಾಮʼ ಸಿನಿಮಾ (Gajarama Movie) ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆ ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರನಲ್ಲಿರುವ ಎಸ್‌.ಆರ್.ವಿ. ಥಿಯೇಟರ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಟೀಸರ್ ಬಿಡುಗಡೆ ಬಳಿಕ ಚಿತ್ರತಂಡ ಹಲವು ಮಾಹಿತಿ ಹಂಚಿಕೊಂಡಿದೆ.

ನಾಯಕ ರಾಜವರ್ಧನ್ ಮಾತನಾಡಿ, ”ತುಂಬಾ ಎಮೋಷನಲ್ ಜರ್ನಿ. ಈ ರೀತಿಯ ಕಮರ್ಷಿಯಲ್ ಎಲಿಮೆಂಟ್‌ ಇರುವ ಬೇರೆ ಹೀರೋಗಳ ಸಿನಿಮಾಗಳನ್ನು ನಾನು ಸಣ್ಣ ವಯಸ್ಸಿನಲ್ಲಿ ನೋಡಿ ಸಿಳ್ಳೆ ಚಪ್ಪಾಳೆ ಹೊಡೆದು ಎಂಜಾಯ್ ಮಾಡುತ್ತಿದ್ದೆ. ಇವತ್ತು ನನ್ನನ್ನು ನಾನು ಸ್ಕ್ರೀನ್ ಮೇಲೆ ಈ ರೀತಿ ನೋಡಿ ಖುಷಿ ಪಡುತ್ತಿದ್ದೇನೆ. ನಮ್ಮ ತಂದೆ ಟೀಸರ್ ನೋಡಿ ಖಂಡಿತಾ ಖುಷಿ ಪಡುತ್ತಾರೆ. ಇಡೀ ತಂಡದ ಜತೆ ಕೆಲಸ ಮಾಡಿದ್ದು ತೃಪ್ತಿ ತಂದಿದೆ” ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ, ”ಗಜರಾಮ’ ಚಿತ್ರದಲ್ಲಿ ಆ್ಯಕ್ಷನ್ ಜತೆಗೆ ಸೆಂಟಿಮೆಂಟ್, ಲವ್ ಕೂಡ ಇದೆ. ಮೂರು ಶೇಡ್‌ನಲ್ಲಿ ನಾಯಕ ಕಾಣಿಸಿಕೊಳ್ಳುತ್ತಾರೆ. ಒಂದು ಪೈಲ್ವಾನ್ ಪಾತ್ರ. ಮತ್ತೊಂದು ಸೆಂಟಿಮೆಂಟ್ ಪಾತ್ರ. ಆ ಪಾತ್ರ ರಾಮನಂತಿದೆ. ಮಗದೊಂದು ನಾಯಕಿಯನ್ನು ರಕ್ಷಿಸುವ ಪಾತ್ರ. ಹೀಗೆ ಮೂರು ರೀತಿ ಶೇಡ್ ಇದೆ. ಇದು ವಿಭಿನ್ನ ಸಿನಿಮಾ. ಅದಕ್ಕಾಗಿ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ವಿಭಿನ್ನವಾಗಿ ಮಾಡಿದ್ದೇವೆ. 2024ರಲ್ಲಿ ʼಗಜರಾಮʼ ಸೂಪರ್ ಹಿಟ್ ಆಗಲಿದೆ” ಎಂದು ಹೇಳಿದರು.

ನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿ, ”ಟೀಸರ್ ಇಷ್ಟು ಅದ್ಭುತವಾಗಿ ಬರಲು ಕಾರಣ ನಿರ್ಮಾಪಕರು. ಇವರು ನನ್ನ ಮೇಲೆ ನಂಬಿಕೆ ಇಟ್ಟು ಪ್ರಾಜೆಕ್ಟ್ ಕೊಟ್ಟಿದ್ದರು. ಆ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದುಕೊಂಡಿದ್ದೇನೆ. ರಾಜವರ್ಧನ್ ತುಂಬಾ ಡೆಡಿಕೇಷನ್ ಆಗಿ ಕೆಲಸ ಮಾಡಿದ್ದಾರೆ. ರಾಮ ಪಾತ್ರಕ್ಕೆ ಪರಿಪೂರ್ಣ ಜೀವ ತುಂಬಿದ್ದಾರೆ. ದೀಪಕ್ ಪೊಲೀಸ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಂದ್ರು ಕ್ಯಾಮೆರಾ ವರ್ಕ್, ಮನೋಮೂರ್ತಿ ಸಂಗೀತ, ಧನು ಮಾಸ್ಟರ್ ಕೊರಿಯೋಗ್ರಫಿ ಅದ್ಭುತವಾಗಿದೆ” ಎಂದು ಮೆಚ್ಚುಗೆ ಸೂಚಿಸಿದರು.

ನಾಯಕಿ ತಪಸ್ವಿನಿ ಮಾತನಾಡಿ, ʼʼನನ್ನದು ಇದು ಎರಡನೇ ಸಿನಿಮಾ. ಇಂಡಸ್ಟ್ರೀಗೆ ನಾನು ಹೊಸಬಳು. ನನ್ನ ಮೊದಲ ಚಿತ್ರ ರಿಷಬ್ ಸರ್ ಜತೆ ಮಾಡಿದ್ದೆ. ʼಹರಿಕಥೆ ಅಲ್ಲ ಗಿರಿಕಥೆʼ ಚಿತ್ರದಲ್ಲಿ ಮೊದಲ ಬಾರಿ ನಟಿಸಿದ್ದೆ. ಅದು ಬ್ಯೂಟಿಫುಲ್ ಜರ್ನಿಯಾಗಿತ್ತು. ಅದಾದ ಬಳಿಕ ʼಗಜರಾಮʼ ಸಿನಿಮಾದ ಕಥೆ ಕೇಳಿ ಖುಷಿಯಾಯ್ತು. ಇಡೀ ತಂಡ ನನಗೆ ಬೆಂಬಲ ನೀಡಿದೆ. ಟೀಸರ್ ನೋಡಿ ಪಾಸಿಟಿವ್ ಎನರ್ಜಿ ಬಂದಿದೆʼʼ ಎಂದರು.

ಗಮನ ಸೆಳೆವ ಟೀಸರ್‌

ಆ್ಯಕ್ಷನ್ ಅಂಶಗಳಿಂದ ಕೂಡಿರುವ ಟೀಸರ್‌ನಲ್ಲಿ ಪ್ರೇಮಕಥೆಯನ್ನೂ ಅನಾವರಣ ಮಾಡಲಾಗಿದೆ. ಕಬೀರ್ ಸಿಂಗ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, ‘ದುನಿಯಾ’ ಸೂರಿ ಸೇರಿದಂತೆ ಒಂದಷ್ಟು ನಿರ್ದೇಶಕರ ಜತೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಸುನಿಲ್ ಕುಮಾರ್‌ ಈಗ ‘ಗಜರಾಮ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಇದನ್ನೂ ಓದಿ: Mansore: ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ ʼ19-20-21ʼ, ʼಆಕ್ಟ್-1978ʼ ಈ ಒಟಿಟಿಯಲ್ಲಿ ಪ್ರಸಾರ

‘ಗಜರಾಮ’ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿರುವುದು ವಿಶೇಷ. ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ ಮಾಡುತ್ತಿದ್ದು, ಜ್ಞಾನೇಶ್ ಬಿ. ಮಠದ್ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ‘ಗಜರಾಮ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸದ್ಯದಲ್ಲೇ ಚಿತ್ರ ತೆರೆ ಮೇಲೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version