Site icon Vistara News

Gauri Lankesh | ಕವಿತಾ ಲಂಕೇಶ್‌ ನಿರ್ದೇಶನದ ಗೌರಿ ಸಾಕ್ಷ್ಯಚಿತ್ರಕ್ಕೆ ಬೆಸ್ಟ್‌ ಹ್ಯೂಮನ್‌ ರೈಟ್ಸ್‌ ಪ್ರಶಸ್ತಿ

Gauri Lankesh

ಬೆಂಗಳೂರು : ಪತ್ರಕರ್ತೆ ದಿವಂಗತ ಗೌರಿ ಲಂಕೇಶ್‌ (Gauri Lankesh) ಜೀವನ ಆಧಾರಿತ ಸಾಕ್ಷ್ಯಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೇರವಾಗಿ ಬರೆಯುವ ಗಟ್ಟಿಗಿತ್ತಿ ಗೌರಿ ಲಂಕೇಶ್‌ ಕುರಿತ ಸಾಕ್ಷ್ಯಚಿತ್ರ ʻಗೌರಿʼ ಟೊರೆಂಟೊದಲ್ಲಿ ನಡೆದ ಮಹಿಳಾ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಮಾನವ ಹಕ್ಕುಗಳ (ಬೆಸ್ಟ್‌ ಹ್ಯೂಮನ್‌ ರೈಟ್ಸ್‌) ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಲಂಕೇಶ್‌ ಪತ್ರಿಕೆ ಸಂಸ್ಥಾಪಕ ಪಿ. ಲಂಕೇಶ್‌ ಪುತ್ರಿ ಗೌರಿ ಲಂಕೇಶ್‌ ತಂದೆಯಂತೆ ಪತ್ರಿಕೋದ್ಯಮದಲ್ಲಿ ಹೆಸರು ಪಡೆದುಕೊಂಡವರು. ಗೌರಿ ಲಂಕೇಶ್‌ ನಿಧನದ ಬಳಿಕ ಅವರ ಹೋರಾಟವನ್ನು ಜನರಿಗೆ ತಿಳಿಸುವ ಉದ್ದೇಶವಾಗಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್‌ ನಿರ್ದೇಶನ ಮಾಡಿದ್ದರು. ಕವಿತಾ ಲಂಕೇಶ್‌ ನಿರ್ದೇಶನದ ʻಗೌರಿʼ ಸಾಕ್ಷ್ಯಚಿತ್ರಕ್ಕೆ ಟೊರಂಟೊ ವುಮೆನ್ಸ್‌ ಫಿಲಂ ಫೆಸ್ಟಿವಲ್ 2022ರ ಅತ್ಯುತ್ತಮ ಮಾನವ ಹಕ್ಕುಗಳ ಪ್ರಶಸ್ತಿಗೆ ಭಾಜನವಾಗಿದೆ.

ಇದನ್ನೂ ಓದಿ | ಗೌರಿಯನ್ನು ಕೊಲ್ಲಿಸಿದವರು ದೇಶ ಆಳುತ್ತಿದ್ದಾರೆ ಎಂದು ನಟ ಪ್ರಕಾಶ್‌ ರಾಜ್ ಆಕ್ರೋಶ

ಈ ಸಾಕ್ಷ್ಯಚಿತ್ರ ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾ ಫಿಲ್ಮ್‌ ಫೆಸ್ಟಿವಲ್‌, ಡಾಕ್‌ ನ್ಯೂಯಾರ್ಕ್‌, ಆ್ಯಮ್‌ಸ್ಟರ್‌ಡ್ಯಾಮ್‌ನ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಉತ್ಸವ, ಸನ್‌ಡಾನ್ಸ್‌ ಚಿತ್ರೋತ್ಸವಗಳಿಗೂ ಆಯ್ಕೆಯಾಗಿದೆ ಎಂದು ಕವಿತಾ ತಿಳಿಸಿದ್ದಾರೆ. ಆ್ಯಮ್‌ಸ್ಟರ್‌ಡ್ಯಾಂನ ಫ್ರೀ ಪ್ರೆಸ್‌ ಅನ್‌ಲಿಮಿಟೆಡ್‌ ಗೌರಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಈ ವಿಚಾರವನ್ನು ಕವಿತಾ ಲಂಕೇಶ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ʻಗೌರಿʼ ಸಾಕ್ಷ್ಯಚಿತ್ರದಲ್ಲಿ ಏನಿದೆ?
ಗೌರಿ ಹತ್ಯೆ ಪ್ರಕರಣ ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿತ್ತು. ʻʻಪ್ರಸ್ತುತ ದಿನಮಾನದಲ್ಲಿ ಪತ್ರಕರ್ತ ಈ ಸಮಾಜದಲ್ಲಿ ಅನುಭವಿಸುತ್ತಿರುವ ದೈಹಿಕ ಮತ್ತು ಮಾನಸಿಕ ಹಿಂಸೆ ಜತೆ ಆತನಿಗೆ ಬರುವ ಬೆದರಿಕೆಗಳ ಬಗ್ಗೆ ʻಗೌರಿʼ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರ ಮೇಲೆ ದಾಳಿಗಳಾಗಿವೆ. ಕಳೆದ ದಶಕದಲ್ಲಿ 30ಕ್ಕೂ ಹೆಚ್ಚು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಮಾತ್ರವಲ್ಲ, ಗೌರಿ ಲಂಕೇಶ್‌ ಪ್ರಕಟಿಸುವ ವರದಿಗಳ ಪರಿಣಾಮವಾಗಿ 80ಕ್ಕೂ ಹೆಚ್ಚು ಪ್ರಕರಣಗಳನ್ನು ರಾಜ್ಯದ ವಿವಿಧ ಕೋರ್ಟ್‌ಗಳಲ್ಲಿ ಎದುರಿಸಬೇಕಾಗಿ ಬಂತು. ಇಂತಹ ಗಂಭೀರ ವಿಷಯದತ್ತ ಸಾಕ್ಷ್ಯಚಿತ್ರ ತೆರೆದಿಟ್ಟಿದೆʼʼ ಎಂದಿದ್ದಾರೆ ನಿರ್ದೇಶಕಿ ಕವಿತಾ ಲಂಕೇಶ್‌.

2000ರಲ್ಲಿ ಪಿ.ಲಂಕೇಶ್‌ ಪ್ರಕಾಶನದ ʻಲಂಕೇಶ್‌ʼ ಪತ್ರಿಕೆಯ ಜವಾಬ್ದಾರಿಯನ್ನು ಗೌರಿ ಲಂಕೇಶ್‌ ವಹಿಸಿಕೊಂಡಿದ್ದರು. ಸೆ.5, 2017ರ ಸಂಜೆ ಗೌರಿ ಲಂಕೇಶ್‌ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಇದನ್ನೂ ಓದಿ | ಬೆಂಗಳೂರಿಗೆ ಬರಲಿದ್ದಾರೆ ಅರುಂಧತಿ ರಾಯ್‌, ಜುಬೇರ್‌: ಗೌರಿ ಲಂಕೇಶ್‌ ನೆನಪಿನ ಕಾರ್ಯಕ್ರಮ

Exit mobile version