Site icon Vistara News

Geetu Mohandas: ಯಶ್‌ TOXIC ಚಿತ್ರಕ್ಕೆ ಗೀತು ಮೋಹನ್‌ ದಾಸ್‌ ನಿರ್ದೇಶಕಿ; ಯಾರಿವರು?

geethu

geethu

ಬೆಂಗಳೂರು: ಸಿನಿ ಪ್ರಿಯಯ ಬಹು ದಿನಗಳ ಕಾತುರಕ್ಕೆ ತೆರೆ ಬಿದ್ದಿದೆ.‌ ಯಶ್‌ (Yash) ಅವರ ಮುಂದಿನ ಚಿತ್ರ ಯಾವುದು ಎನ್ನುವ ಬಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೆಜಿಎಫ್‌ 2 ಭರ್ಜರಿ ಯಶಸ್ಸು ಗಳಿಸಿ ಒಂದೂವರೆ ವರ್ಷವಾದರೂ ಯಶ್‌ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿರಲಿಲ್ಲ. ಕನ್ನಡ ಸಿನಿ ಪ್ರಿಯರು ಸೇರಿದಂತೆ ದೇಶಾದ್ಯಂತದ ಯಶ ಅಭಿಮಾನಿಗಳು ಅವರ ಮುಂದಿನ ಚಿತ್ರದ ಘೋಷಣೆಗಾಗಿ ಕಾದು ಕೂತಿದ್ದರು. ಅದರಂತೆ ಇಂದು (ಡಿಸೆಂಬರ್‌ 8) ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರಕ್ಕೆ  ʻಟಾಕ್ಸಿಕ್‌ʼ (TOXIC) ಎಂದು ಹೆಸರಿಡಲಾಗಿದೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ನಿರ್ದೇಶಕಿಯೊಬ್ಬರು ಯಶ್‌ಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಮಲೆಯಾಳಂನ ಗೀತು ಮೋಹನ್‌ ದಾಸ್‌ (Geetu Mohandas) ʻಟಾಕ್ಸಿಕ್‌ʼನ ನಿರ್ದೇಶಕಿ. ಅವರ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶ

1981ರಲ್ಲಿ ಕೇರಳದ ಕೊಚ್ಚಿಯಲ್ಲಿ ಜನಿಸಿದ ಗೀತು ಮೋಹನ್‌ ದಾಸ್‌ 1986ರಲ್ಲಿ ‘ಒನ್ನು ಮುದಲ್‌ ಪೂಜ್ಯಂವರೆ’ ಮಲೆಯಾಳಂ ಚಿತ್ರದ ಮೂಲಕ ಬಾಲನಟಿಯಾಗಿ ಬಣ್ಣ ಹಚ್ಚಿದರು. ವಿಶೇಷ ಎಂದರೆ ಮೊದಲ ಚಿತ್ರದಲ್ಲೇ ಅವರು ಅತ್ಯುತ್ತಮ ಬಾಲನಟಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡರು. 1988ರಲ್ಲಿ ‘ಎನ್‌ ಬೊಮ್ಮಕುಟ್ಟಿ ಅಮ್ಮಾವುಕ್ಕು’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. 2000ದಲ್ಲಿ ತೆರೆಕಂಡ ಮಲೆಯಾಳಂ ಚಿತ್ರ ‘ಲೈಫ್‌ ಇಸ್‌ ಬ್ಯೂಟಿಫುಲ್‌’ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ಗೆ ನಾಯಕಿಯಾದರು. 2004ರಲ್ಲಿ ಬಿಡುಗಡೆಯಾದ ‘ಅಕಲೆ’ ಚಿತ್ರದ ಅಭಿನಯಕ್ಕಾಗಿ ಗೀತು ಮೋಹನ್‌ದಾಸ್‌ ಅತ್ಯುತ್ತಮ ನಟಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು.

ನಟನೆಯಿಂದ ನಿರ್ದೇಶನದತ್ತ

30ಕ್ಕೂ ಹೆಚ್ಚು ಮಲೆಯಾಳಂ, ತಮಿಳು ಚಿತ್ರಗಳಲ್ಲಿ ನಟಿಸಿದ ಬಳಿಕ ಗೀತು ಮೋಹನ್‌ ದಾಸ್‌ ಚಿತ್ರ ನಿರ್ಮಾಣ, ನಿರ್ದೇಶನದತ್ತ ಹೊರಳಿದರು. 2009ರಲ್ಲಿ ಅವರು ಪ್ರೊಡಕ್ಷನ್‌ ಹೌಸ್‌ ಹುಟ್ಟು ಹಾಕಿದರು. ಅದರ ಮೂಲಕ ‘ಕೇಳ್‌ಕ್ಕುನ್ನುಂಡೋ’ ಕಿರುಚಿತ್ರ ನಿರ್ದೇಶಿಸಿದರು. ಇದಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ 2014ರಲ್ಲಿ ‘ಲಿಯರ್‌ ಡೈಸ್‌’ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದರು. ಇದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರವಾಯಿತು. ವಿಶೇಷ ಎಂದರೆ ʼಲಿಯರ್ಸ್‌ ಡೈಸ್‌ʼ ಚಿತ್ರದ ಛಾಯಾಗ್ರಣಕ್ಕಾಗಿ ಇವರ ಪತಿ ರಾಜೀವ್‌ ರವಿ ಅವರಿಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಇನ್ನು 2019ರಲ್ಲಿ ಗೀತು ಮೋಹನ್‌ ದಾಸ್‌ ನಿರ್ದೇಶನದ ‘ಮೂತಾನ್‌’ ಚಿತ್ರ ಹಿಂದಿ ಮತ್ತು ಮಲೆಯಾಳಂನಲ್ಲಿ ತೆರೆಕಂಡಿತು. ಲಕ್ಷ ದ್ವೀಪದ ಹಿನ್ನೆಲೆಯ ಕಥೆಯನ್ನೊಳಗೊಂಡ ಈ ಚಿತ್ರ ವಿಮರ್ಶಕ ಮೆಚ್ಚುಗೆ ಗಳಿಸಿತ್ತು.

ಯಶ್‌ಗೆ ನಿರ್ದೇಶನ

ಇದೀಗ ಗೀತು ಮೋಹನ್‌ ದಾಸ್‌ ಅವರಿಗೆ ಯಶ್‌ ಚಿತ್ರ ನಿರ್ದೇಶಿಸುವ ಅವಕಾಶ ಲಭಿಸಿದೆ. ಕ್ಲಾಸ್‌ ನಿರ್ದೇಶಕಿ ಮತ್ತು ಮಾಸ್‌ ನಾಯಕ ಕಾಂಬಿನೇಷನ್‌ನ ‘ಟಾಕ್ಸಿಕ್‌’ ಚಿತ್ರದ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. 2025ರ ಏಪ್ರಿಲ್‌ 10ರಂದು ಈ ಸಿನಿಮಾ ತೆರೆ ಕಾಣಲಿದೆ. ಇದು ಗೋವಾದ ಡ್ರಗ್‌ ಮಾಫಿಯಾದ ಕಥೆ ಹೊಂದಿದೆ ಎನ್ನಲಾಗಿದೆ. ಹಾಲಿವುಡ್‌ ರೇಂಜ್‌ನಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎನ್ನುವ ಲೆಕ್ಕಾಚಾರವಿದೆ.

ಇದನ್ನೂ ಓದಿ: Yash19 Title Reveal: ಯಶ್‌ ಹೊಸ ಸಿನಿಮಾದ ಟೈಟಲ್‌ ಅನೌನ್ಸ್‌! ವಿಡಿಯೊ ನೋಡಿ!

Exit mobile version