Site icon Vistara News

Golden Star | ಜನುಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದೇಕೆ ಗಣೇಶ್‌?

Golden Star

ಬೆಂಗಳೂರು : ಗೋಲ್ಡನ್‌ ಸ್ಟಾರ್‌ (Golden Star) ಗಣೇಶ್‌ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಹಲವು ವರುಷಗಳೇ ಕಳೆದಿವೆ. ಜುಲೈ 2 ಅವರ ಜನುಮ ದಿನ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೊರೊನಾದಿಂದಾಗಿ ಗಣೇಶ್‌ ತಮ್ಮ ಜನ್ಮ ದಿನವನ್ನು ಆಚರಿಸಲು ಸಾಧ್ಯವಾಗಿಲ್ಲ. ಕೊರೊನಾ ಹಾವಳಿ ತಗ್ಗಿದರೂ ಕೂಡ ಅಭಿಮಾನಿಗಳ ಜತೆ ಹುಟ್ಟು ಹಬ್ಬದ ಸಂಭ್ರಮ ಆಚರಿಸಿಕೊಳ್ಳಲಾಗುತ್ತಿಲ್ಲ ಎಂದು ಅಭಿಮಾನಿಗಳಿಗೆ ಪತ್ರವನ್ನು ಬರೆದು ಮನವಿ ಮಾಡಿಕೊಂಡಿದ್ದಾರೆ.

ಮುಂಗಾರು ಮಳೆ ಸಿನಿಮಾದ ಮೂಲಕ ಸಾಕಷ್ಟು ಅಭಿಮಾನಿಗಳ ಪ್ರೀತಿ ಪಡೆದ ಗಣೇಶ್‌ ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಪತ್ರದಲ್ಲಿ ಅವರು ಹೀಗೆ ಬರೆದಿದ್ದಾರೆ- “ಅಕ್ಕರೆಯ ಅಭಿಮಾನಿ ಬಂಧುಗಳಿಗೆ, ಎಲ್ಲರೂ ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇನೆ. ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆ ಹಾಕಿ, ನನ್ನ ಯಶಸ್ಸನ್ನು ನಿಮ್ಮದೇ ಯಶಸ್ಸು ಎನ್ನುವಂತೆ ಸಂಭ್ರಮಿಸಿ ನೀವೆಲ್ಲರೂ ಖುಷಿ ಪಟ್ಟಿದ್ದೀರಿ. ಪ್ರತೀ ವರ್ಷವೂ ನನ್ನ ಹುಟ್ಟಿದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡೆಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿ ಭರಿತ ಅಭಿಮಾನಕ್ಕೆ ನಾನು ಸದಾ ಋಣಿ. ʼʼ

ಇದನ್ನೂ ಓದಿ | ಬಾನದಾರಿಯಲ್ಲಿ: ರೀಷ್ಮಾ ನಾಣಯ್ಯ ಫಸ್ಟ್‌ ಲುಕ್‌ ರಿವೀಲ್‌

ಇದನ್ನೂ ಓದಿ | ಆಗಸ್ಟ್‌ 15ಕ್ಕೆ 3 ದಿನ ಮೊದಲು ಹಾರಲಿದೆ ʼಗಾಳಿಪಟ -2ʼ: ಗೋಲ್ಡನ್‌ ಸ್ಟಾರ್‌ ಯೋಗರಾಜ ಭಟ್‌ ಜೋಡಿ

“ನನ್ನ ಹುಟ್ಟು ಹಬ್ಬದ ನೆಪದಲ್ಲಾದರೂ ನಾನು ನಿಮ್ಮ ವೈಯಕ್ತಿಕವಾಗಿ ಭೇಟಿ ಮಾಡಿ, ನಿಮ್ಮೆಲ್ಲರ ಪ್ರೀತಿಯನ್ನು ಆಸ್ವಾದಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ, ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದಾಗಿ ನಾನು ನನ್ನ ಹುಟ್ಟಿದ ದಿನದಂದು ಅಂದರೆ ಜುಲೈ 2ರಂದು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ.

ನೀವೆಲ್ಲರೂ ಅಭಿಮಾನದಿಂದ ಪ್ರತೀ ಬಾರಿ ನನಗಾಗಿ ತರುವ ಹಾರ, ತುರಾಯಿ, ಕೇಕ್‌ ಇತ್ಯಾದಿಗಳ ಬದಲಿಗೆ ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನನಗೆ ತಲುಪಿಸಿಬಿಡಿʼʼ ಎಂದು ಬರೆದುಕೊಂಡಿದ್ದಾರೆ.

ಪತ್ರವನ್ನು ಸೋಷಿಯಲ್‌ ಮೀಡಿಯಾ ಮೂಲಕ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ. ಗಣೇಶ್‌ ಅವರ ‘ಗಾಳಿಪಟ 2’ ಸಿನಿಮಾ ಇದೇ ಆಗಸ್ಟ್ 12ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ತ್ರಿಬಲ್‌ ರೈಡಿಂಗ್‌, ಬಾನದಾರಿಯಲ್ಲಿ ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘Ismart ಜೋಡಿ’ ಎಂಬ ಹೊಸ ಶೋ ಬರುತ್ತಿದ್ದು, ಅದರ ಸಾರಥಿಯಾಗಿ ‘ಗೋಲ್ಡನ್ ಸ್ಟಾರ್’ ಗಣೇಶ್ ಇರಲಿದ್ದಾರೆ. ಇದೊಂದು ರೊಮ್ಯಾಂಟಿಕ್ ಸೆಲೆಬ್ರಿಟಿ ಕಪಲ್ ಶೋ ಎಂದು ವಾಹಿನಿ ಹೇಳಿಕೊಂಡಿದೆ.

ಇದನ್ನೂ ಓದಿ | Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್‌

Exit mobile version