ಬೆಂಗಳೂರು: ʼವರಾಹ ರೂಪಂʼ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ʼಕಾಂತಾರʼ ಚಿತ್ರದ (Kantara Movie) ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್ ಫೆ.8ರಂದು ನಿರೀಕ್ಷಣಾ ಜಾಮೀನು ನೀಡಿತ್ತು. ಈ ಜಾಮೀನು ನೀಡುವಾಗ ಕೇರಳ ಹೈಕೋರ್ಟ್, ಮಧ್ಯಂತರ ಅಥವಾ ಅಂತಿಮ ಆದೇಶ ನೀಡುವ ತನಕ ವರಾಹರೂಪಂ ಹಾಡನ್ನು ಬಳಸಬಾರದು ಎಂಬ ಷರತ್ತಿಗೆ ಈಗ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತು ಏನಾಗಿತ್ತು?
ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ ಕಿರಗಂದೂರು ಅವರಿಗೆ ನಿರೀಕ್ಷಣಾ ಜಾಮೀನು ನೀಡುವಾಗ ಕೇರಳ ಹೈಕೋರ್ಟ್ , ಈ ಪ್ರಕರಣದ ಕುರಿತಾದ ಮಧ್ಯಂತರ ಅಥವಾ ಅಂತಿಮ ಆದೇಶ ಹೊಸ ಬೀಳುವ ತನಕ, ವರಾಹ ರೂಪಂ ಹಾಡಿನೊಂದಿಗೆ ಕಾಂತಾರ ಚಿತ್ರವನ್ನು ಪ್ರದರ್ಶಿಸುವಂತಿಲ್ಲ ಎಂದು ಷರತ್ತು ವಿಧಿಸಿತ್ತು. ಇದೀಗ ಈ ನಿರ್ದಿಷ್ಟ ಷರತ್ತಿಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದರಿಂದ, ಕಾಂತಾರ ಚಿತ್ರ ತಂಡಕ್ಕೆ ನಿರಾಳ ಒದಗಿಸಿದೆ.
ವರಾಹರೂಪಂ ಹಾಡು ಎರಡು ದಾವೆಗಳಿಗೆ ಸಂಬಂಧಿಸಿದ ವಿಷಯವಾಗಿದ್ದು ನವರಸಂ ಹಾಡಿನ ಹಕ್ಕುಸ್ವಾಮ್ಯ ಹೊಂದಿದ್ದ ‘ಮಾತೃಭೂಮಿ ಮುದ್ರಣ ಮತ್ತು ಪ್ರಕಾಶನ ಸಂಸ್ಥೆ’ ಹಾಗೂ ಐದು ವರ್ಷಗಳ ಹಿಂದೆ ಹಾಡನ್ನು ಸಂಯೋಜಿಸಿದ್ದ ಕೇರಳದ ಜನಪ್ರಿಯ ಸಂಗೀತ ತಂಡ ‘ತೈಕ್ಕುಡಂ ಬ್ರಿಡ್ಜ್ ‘ ಮೊಕದ್ದಮೆ ಹೂಡಿದ್ದವು.
ಇದನ್ನೂ ಓದಿ: Kantara Movie: ‘ವರಾಹ ರೂಪಂ’ ವಿವಾದ: ರಿಷಬ್, ವಿಜಯ್ ಕಿರಗಂದೂರುಗೆ ನಿರೀಕ್ಷಣಾ ಜಾಮೀನು
ವರಾಹ ರೂಪಂ’ ವಿವಾದ
ಕಾಂತಾರ’ ಸಿನಿಮಾದ ‘ವರಾಹ ರೂಪಂ’ ಹಾಡಿನ ಟ್ಯೂನ್ ಅನ್ನು ಕದಿಯಲಾಗಿದೆ ಎಂದು ಮಲಯಾಳಂನ ತೈಕ್ಕುಡಂ ಬ್ರಿಡ್ಜ್ ಆರೋಪಿಸಿ ಕೋಯಿಕ್ಕೋಡ್ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಬುಧವಾರ ಫೆ.8ರಂದು ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಇದನ್ನೂ ಓದಿ: Kantara Movie: ಒಟಿಟಿಯಲ್ಲಿ ಬರಲಿದೆ ಕಾಂತಾರ ಇಂಗ್ಲಿಷ್ ಆವೃತ್ತಿ: ರಿಷಬ್ ಶೆಟ್ಟಿ
ಪ್ರಿಕ್ವೆಲ್ ಆಗಿ ಬರಲಿದೆ ಕಾಂತಾರ 2:
ಕಾಂತಾರ-1 ಸಿಕ್ವೆಲ್ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್ ಖಚಿತಪಡಿಸಿದ್ದಾರೆ.