ಮುಂಬೈ: ಬಾಲಿವುಡ್‌ನ ಪ್ರಸಿದ್ಧ ಚಿತ್ರ ಸಾಹಿತಿಗಳಲ್ಲಿ ಜಾವೇದ್ ಅಖ್ತರ್ ಮತ್ತು ಗುಲ್ಜಾರ್ ಸಾಬ್ (Gulzar-Akhtar) ಪ್ರಮುಖ ಸ್ಥಾನಗಳಲ್ಲಿ ನಿಲ್ಲುತ್ತಾರೆ. ಈ ಇಬ್ಬರು ಸಾಹಿತಿಗಳು ಅವರದ್ದೇ ಆದ ರೀತಿಯಲ್ಲಿ ಅಭಿಮಾನಿಗಳಿಗೆ ಹತ್ತಿರವಾದವರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಇಬ್ಬರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು, ಪರಸ್ಪರ ಹೊಗಳಿಕೊಂಡಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ಇದನ್ನೂ ಓದಿ: Star Fashion | ನಟ ಹೃತಿಕ್ ರೋಷನ್ ಗ್ರೀಕ್ ಗಾಡ್ ಆಫ್ ಬಾಲಿವುಡ್ ಆಗಿದ್ದು ಹೇಗೆ?
ಇತ್ತೀಚೆಗೆ ಜಾವೇದ್ ಅಖ್ತರ್ ಅವರ ಆತ್ಮಕಥೆ ಬಿಡುಗಡೆ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಈ ಇಬ್ಬರೂ ಸಾಹಿತಿಗಳು ಒಟ್ಟಿಗೆ ವೇದಿಕೆ ಮೇಲೆ ಕುಳಿತಿದ್ದರು. ಜಾವೇದ್ ಅವರ ಕುರಿತಾಗಿ ಮಾತನಾಡುವುದಕ್ಕೆ ಮೈಕ್ ಹಿಡಿದ ಗುಲ್ಜಾರ್ ಅವರು, ಅಖ್ತರ್ ಬರೆದಿರುವ “ಏಕ್ ಲಡಕೀ ಕೊ ದೇಖಾತೊ ಏಸಾ ಲಗಾ” ಹಾಡಿನ ಬಗ್ಗೆ ಮಾತನಾಡಿದ್ದಾರೆ. “ಈ ಹಾಡನ್ನು ನಾನು ಯಾವಾಗಲೂ ಹಲವು ಹುಡುಗಿಯರಿಗಾಗಿ ಬರೆದಿದ್ದು ಎಂದುಕೊಂಡಿದ್ದೆ” ಎಂದು ಹೇಳಿದ್ದಾರೆ.
ಹಾಗೆಯೇ ಒಮ್ಮೆ ಅಭಿಮಾನಿಯೊಬ್ಬರು ತಮ್ಮೊಂದಿಗೆ ಫೋಟೋವನ್ನು ತೆಗೆದುಕೊಂಡು ಕೊನೆಯಲ್ಲಿ “ಬಾಯ್ ಅಖ್ತರ್ ಸರ್” ಎಂದು ಹೇಳಿಹೋಗಿದ್ದನ್ನೂ ನೆನಪಿಸಿಕೊಂಡಿದ್ದಾರೆ. ಅಖ್ತರ್‌ನಷ್ಟು ಒಳ್ಳೆಯ ಸಾಹಿತಿ ನಾನಲ್ಲ ಎಂದು ನನಗೆ ಆಗ ಅನಿಸಿತ್ತು ಎಂದು ಹೇಳಿದ ಅವರು, ಕೊನೆಗೆ ಅಖ್ತರ್ ಅವರ ಬಗ್ಗೆ ಕವಿತೆಯೊಂದನ್ನೂ ವಾಚಿಸಿದ್ದಾರೆ. ಈ ಎಲ್ಲ ಸಮಯದಲ್ಲಿ ಅಖ್ತರ್ ಅವರು ಮನಸ್ಸು ಬಿಚ್ಚಿ ನಕ್ಕಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಇದನ್ನೂ ಓದಿ: Actress Rekha | ಬಾಲಿವುಡ್ ನಟಿ ರೇಖಾಗೆ ತಮ್ಮ 15ನೇ ವಯಸ್ಸಿನಲ್ಲಿ ಸೆಟ್‌ನಲ್ಲಿ ಆಗಬಾರದ್ದು ಆಗಿದ್ದೇನು?
ಇದಾದ ನಂತರ ಅಖ್ತರ್ ಅವರು ಕೂಡ ಗುಲ್ಜಾರ್ ಅವರ ಬಗ್ಗೆ ಮಾತನಾಡಿದ್ದಾರೆ. ಒಮ್ಮೆ ಗುಲ್ಜಾರ್ ಅವರ ಅಭಿಮಾನಿ ತಮ್ಮನ್ನೇ ಗುಲ್ಜಾರ್ ಎಂದು ತಪ್ಪು ತಿಳಿದುಕೊಂಡು ಮಾತನಾಡಿಸಿದ್ದರ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಜೋಡಿ ಈ ರೀತಿಯಲ್ಲಿ ಪರಸ್ಪರ ಸಂತೋಷದಿಂದ ಮಾತನಾಡಿಕೊಂಡಿರುವುದನ್ನು ಕಂಡು ಸಾಹಿತ್ಯಾಭಿಮಾನಿಗಳೆಲ್ಲರೂ ಸಂತಸ ಪಟ್ಟಿದ್ದಾರೆ. ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, “ಸ್ವರ್ಗ ಎಂದರೆ ಇದೇ ನೋಡಿ”, “ಅಖ್ತರ್ ಅವರು ಇಷ್ಟೊಂದು ನಕ್ಕಿದ್ದನ್ನು ಎಂದೂ ಕಂಡಿರಲಿಲ್ಲ” ಎನ್ನುವ ನೂರಾರು ಕಾಮೆಂಟ್‌ಗಳನ್ನು ಮಾಡಿದ್ದಾರೆ.