ಬೆಂಗಳೂರು: ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ (Taarak Mehta Ka Ooltah Chashmah) ಧಾರಾವಾಹಿಯ ನಟ ಗುರುಚರಣ್ ಸಿಂಗ್ (Gurucharan Singh ) ಏ.27ರಂದು ನಾಪತ್ತೆಯಾಗಿದ್ದರು ಎಂದು ವರದಿಯಾಗಿತ್ತು. ಇದೀಗ ದೆಹಲಿ ಪೊಲೀಸರ ತನಿಖೆ ಪ್ರಕಾರ ಗುರುಚರಣ್ ಸಿಂಗ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇದೇ ವೇಳೆ ನಟ ಗುರುಚರಣ್ ಹಣಕಾಸಿನ ತೊಂದರೆಗಳನ್ನೂ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ದೆಹಲಿಯ ಎಟಿಎಂನಿಂದ ಗುರುಚರಣ್ 7,000 ರೂ. ಡ್ರಾ ಮಾಡಿರುವುದು ಕೂಡ ಪತ್ತೆಯಾಗಿದೆ. ಕೊನೆಯದಾಗಿ ಏಪ್ರಿಲ್ 24 ರಂದು ಗುರುಚರಣ್ ಸಿಂಗ್ ಮನೆಯಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ʻಪಾಲಂʼನಲ್ಲಿ ಕಂಡು ಬಂದರು ಎಂದು ವರದಿಯಾಗಿದೆ. ಅಂದಿನಿಂದ ಗುರುಚರಣ್ ಸಿಂಗ್ ಅವರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ವರದಿಯಾಗಿದೆ.
ಪೊಲೀಸರ ಮಾಹಿತಿ ಪ್ರಕಾರ ʻʻಎಪ್ರಿಲ್ 22ರಂದು ಗುರುಚರಣ್ ಸಿಂಗ್ ಶೂಟಿಂಗ್ ಸೇರಿದಂತೆ ಇತರ ಕೆಲಸದ ನಿಮಿತ್ತ ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಲು ವಿಮಾನ ನಿಲ್ದಾಕ್ಕೆ ತೆರಳಿದ್ದರು. ಗುರುಚರಣ್ ಸಿಂಗ್ ಬೆಳಗ್ಗೆ 8.30ಕ್ಕೆ ಮನೆಯಿಂದ ತೆರಳಿದ್ದರು. ಆದರೆ ಅವರು ಮುಂಬೈಗೆ ತಲುಪಿಲ್ಲ. ಬದಲಾಗಿ ಬೆಳಗ್ಗೆ 9.14ರ ಸುಮಾರಿಗೆ ಪಾಲಂʼನಲ್ಲಿ ನಟ ಕಂಡು ಬಂದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಟನ ಕೊನೆಯ ಸಿಸಿಟಿವಿ ದೃಶ್ಯಗಳಲ್ಲಿ ಬೆನ್ನಿಗೆ ಬ್ಯಾಗ್ ಹೊತ್ತುಕೊಂಡು ರಸ್ತೆ ದಾಟುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: Gurucharan Singh: ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಖ್ಯಾತಿಯ ನಟ ನಿಗೂಢ ನಾಪತ್ತೆ
ಈ ಪ್ರಕರಣದ ಬಗ್ಗೆ ಗುರುಚರಣ್ ಸಿಂಗ್ ತಂದೆ ಈಗಾಗಲೇ ದೂರು ದಾಖಲಿಸಿದ್ದಾರೆ. ಡಿಸಿಪಿ ರೋಹಿತ್ ಮೀನಾ ಈ ಬಗ್ಗೆ ಈಗಾಗಲೇ ಮಾಹಿತಿ ಹಂಚಿಕೊಂಡು ʻʻಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಪ್ರಮುಖ ಸುಳಿವುಗಳು ಸಿಕ್ಕಿವೆʼʼ ಎಂದು ಮಾಹಿತಿ ಹಂಚಿಕೊಂಡಿದ್ದರು.
ಕೆಲ ವರ್ಷಗಳ ಹಿಂದೆ ಗುರುಚರಣ್ ಸಿಂಗ್ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಸೀರಿಯಲ್‌ನಿಂದ ಹೊರಬಂದು ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿ 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ.