ಮುಂಬೈ : ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಚಿತ್ರ ನಿರ್ಮಾಪಕರು ಒಪ್ಪಿಕೊಂಡ ಹಿನ್ನಲೆಯಲ್ಲಿ ಬಾಂಬೆ ಹೈಕೋರ್ಟ್ ಬುಧವಾರ ವಿವಾದಾತ್ಮಕ ಚಿತ್ರ ‘ಹಮಾರೆ ಬಾರಾ’ (Hamare Baarah) ಬಿಡುಗಡೆಗೆ ಅನುಮತಿ ನೀಡಿದೆ. ಕಮಲ್ ಚಂದ್ರಾ ನಿರ್ದೇಶನದ ‘ಹಮಾರೆ ಬಾರಾ’ ಚಿತ್ರ ಮುಸ್ಲಿಂ ಮಹಿಳೆಯರ ಕುರಿತಾಗಿದೆ. ಇದರಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ಕಥೆಯನ್ನು ಬಿಂಬಿಸಲಾಗಿದೆ. ಹಾಗಾಗಿ ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಬಾಂಬೆ ಹೈಕೋರ್ಟ್ ತಡೆ ಹೇರಿತ್ತು.
ಆದರೆ ಚಿತ್ರದಲ್ಲಿರುವ ಆಕ್ಷೇಪಾರ್ಹ ಭಾಗಗಳನ್ನು ಅಳಿಸುವುದರ ಮೂಲಕ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಮತ್ತು ಕುರಾನ್ ನ ಬೋಧನೆಗಳನ್ನು ತಿರುಚುವುದಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಮೂರ್ತಿ ಬಿಪಿ ಕೊಲಬಾ ವಾಲಾ ಮತ್ತು ನ್ಯಾಯಮೂರ್ತಿ ಫಿರ್ದೋಶ್ ಪೂನಿವಾಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಒಂದು ದಿನದ ನಂತರ ಚಲನಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ.
ಅಣ್ಣು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾದಾಗ ವಿವಾದವನ್ನು ಹುಟ್ಟುಹಾಕಿತ್ತು. ಈ ಬಗ್ಗೆ ಅಜರ್ ಎಂಬುವವರು ಬಾಂಬೆ ಹೈಕೋರ್ಟ್ ನಲ್ಲಿ ಚಿತ್ರದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಆಕ್ಷೇಪಾರ್ಹ ದೃಶ್ಯಗಳೊಂದಿಗೆ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಕ್ಕಾಗಿ ಚಿತ್ರ ನಿರ್ಮಾಪಕರಿಗೆ 5 ಲಕ್ಷ ದಂಡ ವಿಧಿಸಿ ಅರ್ಜಿದಾರರು ತಿಳಿಸಿದ ಚಾರಿಟಿಗೆ ಮೊತ್ತವನ್ನು ದೇಣಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಆದರೆ ಇದೀಗ ಅಂತಹ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಿದೆ ಎಂಬುದಾಗಿ ಪೀಠ ತಿಳಿಸಿದೆ.
ಹಮಾರೆ ಬಾರಾ ಚಿತ್ರವನ್ನು ಜೂನ್ 7ರಂದು ಮತ್ತು ನಂತರ ಜೂನ್ 14ರಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿತ್ತು. ಆದರೆ ಕೋರ್ಟ್ ನಿಂದ ತಡೆ ಬಂದ ಹಿನ್ನಲೆಯಲ್ಲಿ ಚಿತ್ರ ಬಿಡುಗಡೆಯಾಗಲಿಲ್ಲ. ಇದೀಗ ಕೋರ್ಟ್ ಚಿತ್ರ ಬಿಡುಗಡೆಗೆ ಅನುಮತಿ ನೀಡಿದ್ದ ಕಾರಣ ಇನ್ನೂ ಚಿತ್ರ ಬಿಡುಗಡೆಯ ದಿನಾಂಕವನ್ನು ಸೂಚಿಸಬೇಕಿದೆ. ಸಿಬಿಎಫ್ ಸಿ ಈಗಾಗಲೇ ಈ ಚಿತ್ರದ ಕೆಲವು ಸಂಭಾಷಣೆಗಳನ್ನು ಕಟ್ ಮಾಡಿಸಿ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.
ಈ ಚಿತ್ರದಲ್ಲಿ ಬಿರೇಂದರ್ ಭಗತ್, ರವಿ ಎಸ್ ಗುಪ್ತಾ, ಸಂಜಯ್ ನಾಗ್ಪಾಲ್ ಮತ್ತು ಶೀಯೋ ಬಾಲಕ್ ಸಿಂಗ್ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅನ್ನು ಕಪೂರ್, ಮನೋಜ್ ಜೋಶಿ ಮತ್ತು ಪರಿತೋಷ್ ತ್ರಿಪಾಠಿ ನಟಿಸಿದ್ದಾರೆ.
ಇದನ್ನೂ ಓದಿ: Electric Shock: ಒಣ ಹಾಕಿದ್ದ ಟವೆಲ್‌ನಲ್ಲಿ ವಿದ್ಯುತ್; ತಂದೆ, ತಾಯಿ, ಮಗ ಸಾವು
ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕರ್ನಾಟಕ ಸರ್ಕಾರ ಈಗಾಗಲೇ ನಿಷೇಧ ಹೇರಿತ್ತು. ಈ ಸಿನಿಮಾದ ಪ್ರದರ್ಶನದಿಂದ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆ ಎಂದು ಸರ್ಕಾರ ಈ ಸಿನಿಮಾವನ್ನು ಬ್ಯಾನ್ ಮಾಡಿದೆ ಎನ್ನಲಾಗಿದೆ.