ಮುಂಬೈ: ಕೇಂದ್ರ ಸರ್ಕಾರ ಕರೆ ನೀಡಿರುವ ಹರ್ ಘರ್ ತಿರಂಗಾ ಅಭಿಯಾನ (ಆಗಸ್ಟ್ 13ರಿಂದ ಆಗಸ್ಟ್ 15)ದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಪಾಲ್ಗೊಂಡಿದ್ದಾರೆ. ಮುಂಬೈನಲ್ಲಿರುವ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಆಮೀರ್ ಖಾನ್ ತಮ್ಮ ಮಗಳು ಇರಾ ಖಾನ್ ಜತೆ ಮನೆಯ ಬಾಲ್ಕನಿ ಮೇಲೆ ನಿಂತಿರುವ ಫೋಟೋ ವೈರಲ್ ಆಗುತ್ತಿದ್ದು, ಅಲ್ಲೇ ಅವರ ಎದುರು ರಾಷ್ಟ್ರಧ್ವಜ ಹಾರಾಡುತ್ತಿರುವುದನ್ನೂ ನೋಡಬಹುದು.
ಆಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಆಗಸ್ಟ್ 11ರಂದು ತೆರೆಕಂಡಿದ್ದರೂ ಕೂಡ ಬಾಕ್ಸ್ ಆಫೀಸ್ ಗಳಿಕೆ ತೀರ ಕಡಿಮೆ. ಆಮೀರ್ ತಮ್ಮ ಹಿಂದಿನ ವರ್ತನೆಯ ಕಾರಣಕ್ಕೆ ಈಗ ಸಂಕಷ್ಟಕ್ಕೀಡಾಗಿದ್ದಾರೆ. ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕಾರ ಮಾಡಬೇಕು ಎಂಬ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ಬಲವಾಗಿ ಕೇಳಿಬರುತ್ತಿದೆ. Boycott Laal Singh Chaddha ಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ. ಇದರ ಬೆನ್ನಲ್ಲೇ ಅವರು ತಮ್ಮ ಮನೆ ಬಾಲ್ಕನಿಯಲ್ಲಿ ರಾಷ್ಟ್ರಧ್ವಜ ಹರಿಸಿದ್ದನ್ನೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈಗ ಸಿನಿಮಾ ನೆಲಕಚ್ಚುತ್ತಿರುವ ಕಾರಣಕ್ಕೆ, ಭಾರತೀಯರನ್ನು ಓಲೈಸಲು ಆಮೀರ್ ಖಾನ್ ಧ್ವಜ ಹಾರಿಸಿದ್ದಾರೆ ಎಂದೇ ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
2015ರ ಸುಮಾರಿಗೆ ಗೋಮಾಂಸ ಸೇವನೆ, ಗೋ ಕಳ್ಳಸಾಕಾಣಿಕೆ ಸಂಬಂಧಪಟ್ಟು ಒಂದಷ್ಟು ಗುಂಪು ಹತ್ಯೆಗಳು ನಡೆದಿದ್ದವು. ಆಗ ಆಮೀರ್ ಖಾನ್, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬರ್ಥದ ಮಾತುಗಳನ್ನಾಡಿದ್ದರು. ‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾವು ಈ ದೇಶ ತೊರೆಯುವುದು ಒಳಿತಲ್ಲವೇ’ ಎಂದು ನನ್ನ ಪತ್ನಿ ಕೇಳಿದ್ದಳು ಎಂದು ಹೇಳಿಕೆ ನೀಡಿದ್ದರು. ಆಮೀರ್ ಖಾನ್ರ ಈ ಮಾತುಗಳು ಜನರನ್ನು ತುಂಬ ಕೆರಳಿಸಿದ್ದವು. ಅದಾದ ಮೇಲೆ 2014ರಲ್ಲಿ ತೆರೆಕಂಡಿದ್ದ ಅವರ ಪಿಕೆ ಸಿನಿಮಾ ಕೂಡ ದೇಶದ ಹಿಂದೂಗಳಲ್ಲಿ ಆಕ್ರೋಶ ಹುಟ್ಟುಹಾಕಿತ್ತು. ಈ ಚಿತ್ರದಲ್ಲಿ ಹಿಂದೂ ಧಾರ್ಮಿಕ ತಾಣಗಳಿಗೆ ನುಗ್ಗಿ, ಅಲ್ಲಿನ ಪೂಜಾ ವಿಧಾನ ಪ್ರಶ್ನಿಸುವ, ಶಿವನನ್ನು ಗೇಲಿ ಮಾಡುವ ದೃಶ್ಯ ಇದ್ದಿದ್ದೇ ಈ ಆಕ್ರೋಶಕ್ಕೆ ಕಾರಣವಾಗಿತ್ತು. ಇದರೊಂದಿಗೆ ಇನ್ನೂ ಕೆಲವು ಅವರ ವರ್ತನೆಗಳಿಗೆ ಬೇಸತ್ತಿರುವ ಜನ, ಈಗ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯ ಹೊತ್ತಲ್ಲಿ ಅದರ ಬಿಸಿ ಮುಟ್ಟಿಸುತ್ತಿದ್ದಾರೆ.
ನಾಲ್ಕು ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ ಬಂದ ಆಮೀರ್ ಖಾನ್, ಇದೀಗ ತಮ್ಮ ಸಿನಿಮಾ ಲಾಲ್ ಸಿಂಗ್ ಚಡ್ಡಾಕ್ಕೆ ವ್ಯಕ್ತವಾಗುತ್ತಿರುವ ವಿರೋಧ ನೋಡಿ ಹೆದರಿದ್ದಾರೆ. ತಮ್ಮನ್ನು ಕ್ಷಮಿಸುವಂತೆ ಕೈಮುಗಿದು ಕೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕೇವಲ ನಾನು ಮಾತ್ರವಿಲ್ಲ, ನೂರಾರು ಜನರ ಪರಿಶ್ರಮವಿದೆ. ದಯವಿಟ್ಟು ಅವರ ಬಗ್ಗೆಯೂ ಯೋಚನೆ ಮಾಡಿ ಎಂದಿದ್ದಾರೆ. ಇದೀಗ ತಮ್ಮ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಆಮೀರ್ ಖಾನ್, ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರಾ? ಎಂಬ ಪ್ರಶ್ನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ.
ಇದನ್ನೂ ಓದಿ: ವಿಸ್ತಾರ Explainer | ಆಮಿರ್ ಖಾನ್‌ನ ಲಾಲ್ ಸಿಂಗ್ ಚಡ್ಡಾಗೆ ಬಾಯ್ಕಾಟ್ ಏಕೆ?