Site icon Vistara News

Voot | ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಈಗ ವೂಟ್‌ನಲ್ಲಿ ಲಭ್ಯ

Voot

ಬೆಂಗಳೂರು : ದಿನದಿಂದ ದಿನಕ್ಕೆ ವೂಟ್ ಪ್ರಾದೇಶಿಕವಾಗಿ ಮತ್ತಷ್ಟು ವೈವಿಧ್ಯಮಯವಾಗುತ್ತಿದೆ. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ‘ಹರಿಕಥೆ ಅಲ್ಲ ಗಿರಿಕಥೆ’ ವೂಟ್ (Voot) ಸೆಲೆಕ್ಟ್‌ನಲ್ಲಿ ಶುಕ್ರವಾರ ಪ್ರಸಾರಗೊಂಡಿದೆ. ಹೊಟ್ಟೆ ಹುಣ್ಣಾಗುವಷ್ಟು ಹಾಸ್ಯ ತುಂಬಿರುವ ಚಿತ್ರ ವೂಟ್ ಪ್ರೇಕ್ಷಕರನ್ನು ನಗಿಸಲು ಆಗಸ್ಟ್ 12ರಂದು ಮೂಡಿಬಂದಿದೆ. ಯುವ ನಿರ್ದೇಶಕರಾದ ಕರಣ್ ಅನಂತ್ ಹಾಗೂ ಅನಿರುದ್ಧ ಮಹೇಶ್, ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದರೆ, ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ.

ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ರಿಷಭ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊನ್ನವಳ್ಳಿ ಕೃಷ್ಣ, ರಚನಾ ಇಂದರ್, ತಪಸ್ವಿನಿ ಪೂಣಚ್ಚ, ಪ್ರಮೋದ್ ಶೆಟ್ಟಿ ಇತರರು ತಾರಾಗಣದಲ್ಲಿದ್ದಾರೆ.

ಮೂವರು ಗಿರಿಗಳ ನೆಲೆಗಟ್ಟಿನಲ್ಲಿ ಈ ಚಿತ್ರವನ್ನು ಹೆಣೆಯಲಾಗಿದೆ. ಒಬ್ಬ ಗಿರಿ ಉದಯೋನ್ಮುಖ ನಿರ್ದೇಶಕನಾದರೆ, ಮತ್ತೊಬ್ಬ ವಿಲನ್ ಹಾಗೂ ಮತ್ತೋರ್ವ ನಟಿ ಗಿರಿಜಾ ಈ ಮೂವರು ಅಕಸ್ಮಿಕವಾಗಿ ಸೇರಿಕೊಳ್ಳುತ್ತಾರೆ. ಈ ಮೂವರು ಸೇರಿಕೊಂಡು ಸಿನಿಮಾ ಮಾಡಲು ನಿರ್ಧರಿಸುತ್ತಾರೆ. ಇದೇ ಚಿತ್ರದ ಮೂಲ ತಿರುಳು. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮವಾಗಿದ್ದು, ಪ್ರೇಕ್ಷಕರನ್ನು ಎರಡು ಗಂಟೆ ನಗಿಸಬೇಕು ಎಂಬುದೇ ಸಿನಿಮಾದ ಮೂಲ ಉದ್ದೇಶವಾಗಿದೆ.‌

ರಿಷಭ್ ಶೆಟ್ಟಿ ಹಾಗೂ ಹಿರಿಯ ನಟ ಹೊನ್ನಾವಳಿ ಕೃಷ್ಣ ನಟನೆ ಗಮನ ಸೆಳೆಯುತ್ತದೆ. ಇಬ್ಬರ ನಡುವಿನ ಹಾಸ್ಯ ಸಂಭಾಷಣೆ, ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಜತೆಗೆ ಸಾಕಷ್ಟು ಮನರಂಜನೆಯಾಗಿದೆ.

ಇದನ್ನೂ ಓದಿ | ಹರಿ ಕಥೆ ಅಲ್ಲ ಗಿರಿ ಕಥೆ | ಟ್ರೇಲರ್‌ ರಿಲೀಸ್‌, ಭಾರಿ ನಗಿಸ್ತಾ ಇದ್ದಾರೆ ಶೆಟ್ರು

‘ನಾನು ಮೊದಲಿಗೆ ಕಥೆ ಓದಿಗಾಗಲೇ ಬೌಲ್ಡ್ ಆದೆ. ಇದೊಂದು ಹಾಸ್ಯಭರಿತ ಸಿನಿಮಾ. ಒಟಿಟಿಯಲ್ಲಿ ಜನ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ನನಗೆ ಸಿಕ್ಕಿದ್ದ ಪಾತ್ರ ತುಂಬಾ ಸವಾಲಿನಿಂದ ಕೂಡಿತ್ತು. ವೂಟ್‌ನಲ್ಲಿ ಚಿತ್ರ ವೀಕ್ಷಿಸಲು ಉತ್ಸುಕನಾಗಿದ್ದೇನೆ. ಅಲ್ಲದೆ, ಜನರ ಪ್ರತಿಕ್ರಿಯೆ ಯಾವ ರೀತಿ ಬರುತ್ತದೆ ನೋಡಬೇಕು. ಇದೊಂದು ವಿಶೇಷ ಜರ್ನಿ. ಇಂಥ ತಂಡದೊಂದಿಗೆ ಕೆಲಸ ಮಾಡಿದ್ದು ತುಂಬಾ ಖುಷಿ ನೀಡಿತು’ ಎಂದು ನಟ ರಿಷಭ್ ಶೆಟ್ಟಿ ತಿಳಿಸಿದ್ದಾರೆ.

‘ಚಿತ್ರ ಹರಿಕಥೆ ಅಲ್ಲ ಗಿರಿಕಥೆ ಹಾಗೂ ನನ್ನ ಪಾತ್ರ ಗಿರಿಜಾ ಮನಸಿಗೆ ತುಂಬಾ ಹತ್ತಿರವಾಗಿದೆ. ಚಿತ್ರಕ್ಕಾಗಿ ಸಾಕಷ್ಟು ವರ್ಕ್ ಮಾಡಿದ್ದೆ. ಪ್ರತಿಯೊಂದು ಸಂಭಾಷಣೆ, ಸನ್ನಿವೇಶ ಅದ್ಭುತವಾಗಿ ಮೂಡಿ ಬಂದಿದೆ. ನಮ್ಮನಡುವಿನ ಕೆಮಿಸ್ಟ್ರಿ ಆನ್‌ಸ್ಕ್ರೀನ್‌ನಲ್ಲಿ ತುಂಬಾ ಚೆನ್ನಾಗಿ ಬಂದಿದೆ. ವೂಟ್ ಸೆಲೆಕ್ಟ್‌ನಲ್ಲಿ ಚಿತ್ರ ನೋಡಲು ಉತ್ಸುಕನಾಗಿರುವೆ’ ಎಂದು ಚಿತ್ರದ ನಾಯಕಿ ರಚನಾ ಇಂದರ್ ಹೇಳಿಕೊಂಡಿದ್ದಾರೆ. ಅಂದ ಹಾಗೆ ಈ ಬಾರಿ ಬಿಗ್ ಬಾಸ್ ಸಹ ವೂಟ್ ನಲ್ಲೇ ಪ್ರಸಾರವಾಗುತ್ತಿರುವ ಕಾರಣ ಸದ್ಯಕ್ಕೆ ವೂಟ್ ಬಹುಬೇಡಿಕೆಯ ಆಪ್ ಆಗಿ ಹೊರಹೊಮ್ಮಿದೆ.

ಇದನ್ನೂ ಓದಿ | ಹರಿ ಕಥೆ ಅಲ್ಲ ಗಿರಿ ಕಥೆ | ಶೆಟ್ರು ಹೇಳಲಿದ್ದಾರೆ ಡೈರೆಕ್ಟ್ರ ಕಥೆ!

Exit mobile version