ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ನಟ, ಮಾಡೆಲ್ ಭುವನ್ ಪೊನ್ನಣ್ಣ (bhuvan ponnanna) ಆಗಸ್ಟ್ 23ರಂದು ಕೊಡಗಿನಲ್ಲಿ ಕೊಡವ ಸಂಪ್ರದಾಯದಂತೆ (Harshika Bhuvan Wedding) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ದೀರ್ಘ ಕಾಲದ ಸ್ನೇಹಿತರಾಗಿದ್ದ ಭುವನ್ ಮತ್ತು ಹರ್ಷಿಕಾ ಈಗ ಹಸೆಮಣೆ ಏರಲಿದ್ದಾರೆ. ವಿರಾಜಪೇಟೆಯ “ಅಮ್ಮತಿ ಕೊಡವ ಸಮಾಜ”ದಲ್ಲಿ ವಿವಾಹ ನೆರವೇರಲಿದೆ. ಈಗಾಗಲೇ ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದೆ ಜೋಡಿ. ಸಿನಿಮಾ ರಂಗಕ್ಕೂ-ರಾಜಕೀಯಕ್ಕೂ ನಂಟಿದೆ. ಹೀಗಾಗಿ ಹರ್ಷಿಕಾ-ಭುವನ್ ಅವರು ಸಿಎಂ ಸಿದ್ದಾರಾಮಯ್ಯ ಹಾಗೂ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ (Harshika Bhuvan Invites Political leaders) ಮತ್ತು ಬಿಎಸ್ ಯಡಿಯೂರಪ್ಪ ಅವರನ್ನು ಮದುವೆಗೆ ಆಮಂತ್ರಿಸಿದ್ದಾರೆ.
ಸಿನಿಮಾ ತಾರೆಯರಾದ ಶಿವರಾಜ್ ಕುಮಾರ್, ರವಿಚಂದ್ರನ್, ಗಣೇಶ್ , ದೊಡ್ಡಣ್ಣ, ಶ್ರೀನಾಥ್ ಜಯಮಾಲ, ಸುಧಾರಾಣಿ, ತಾರಾ, ಮಾಲಾಶ್ರೀ, ಅನುಪ್ರಭಾಕರ್ ಅಮೂಲ್ಯ, ದಿಗಂತ್, ಅಶ್ವಿನಿ ಪುನೀತ್ ರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್, ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿದೆ ಜೋಡಿ.
ಇದನ್ನೂ ಓದಿ: Harshika Poonacha: ಸಪ್ತಪದಿ ತುಳಿಯಲು ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ ಸಜ್ಜು; ಆ.23, 24ಕ್ಕೆ ಕೊಡಗಿನಲ್ಲಿ ಮದುವೆ
ಆಮಂತ್ರಣ ನೀಡಿದ ಜೋಡಿ
ಸಮಾರಂಭದಲ್ಲಿ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಹಾಗೂ ಬಂಧು-ಮಿತ್ರರು ಪಾಲ್ಗೊಳ್ಳಲಿದ್ದಾರೆ. 6 ವರ್ಷದಿಂದ ಭುವನ್ ಹಾಗೂ ಹರ್ಷಿತಾ ಪೂಣಚ್ಚ ಪ್ರೀತಿಯಲ್ಲಿದ್ದರು. ಇದರ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಹರ್ಷಿಕಾ ಪೂಣಚ್ಚ , ʻʻಭುವನ್ ಮತ್ತು ನಾನು ಕೊಡಗಿನವರು. ನಾವಿಬ್ಬರೂ ಆತ್ಮೀಯ ಸ್ನೇಹಿತರು. ಒಟ್ಟಿಗೆ ಒಂದು ಫ್ಯಾಷನ್ ಕಂಪನಿ ನಡೆಸುತ್ತಿದ್ದೇವೆ. ಭುವನ್ ಅಂತಾರಾಷ್ಟ್ರೀಯ ಫ್ಯಾಷನ್ ಶೋ ಕೊರಿಯೋಗ್ರಾಫರ್ ಆಗಿದ್ದವರು. ಕಷ್ಟದ ಸಮಯದಲ್ಲಿ ಅವರು ತುಂಬಾ ನೆರವು ನೀಡಿದ್ದಾರೆʼʼ ಎಂದು ತಿಳಿಸಿದ್ದರು.
ಇದನ್ನೂ ಓದಿ: Harshika Poonacha | ಐಫೆಲ್ ಟವರ್ ಎದುರು ಹರ್ಷಿಕಾ ಪೂಣಚ್ಚ ಕೊಟ್ಟ ಪೋಸ್‌ಗಳಿಗೆ ಫ್ಯಾನ್ಸ್ ಫಿದಾ!
ಇದೀಗ ಈ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗಿದೆ. ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹರ್ಷಿಕಾ ಹೊರಹೊಮ್ಮಿದ್ದರು. ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ ಬಳಿಕ ಅವರು ಹಿಂದಿರುಗಿ ನೋಡಿಲ್ಲ. ಈ ಚಿತ್ರದ ನಟನೆಗೆ ಹರ್ಷಿಕಾಗೆ ಬೆಸ್ಟ್ ಸೈಡ್ ಆಕ್ಟರ್ ಎಂಬ ಪ್ರಶಸ್ತಿ ದೊರೆತಿತ್ತು. ʼಭಲೇ ಜೋಡಿ’, ‘ಉಪೇಂದ್ರ ಮತ್ತೆ ಬಾ’, ‘ಚಾರ್‌ಮಿನಾರ್’, ‘ಕಾಸಿನಸರ’ ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭುವನ್ ಅವರು ಕುಚ್ಚಿಕು ಕುಚ್ಚಿಕು, ರಾಂಧವ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.