ಬೆಂಗಳೂರು : ದಿ ಕೇರಳ ಸ್ಟೋರಿ (The Kerala Story) ಬಿಡುಗಡೆಯಾದಾಗಿನಿಂದ ಹಲವಾರು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಒಂದು ಕಡೆ 200 ಕೋಟಿ ರೂಪಾಯಿ ಬಾಚಿಕೊಂಡ ಕಾರಣ ಸಿನಿಮಾ ತಂಡದವರು ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದರೆ ಇನ್ನೊಂದು ಕಡೆ ವಿರೋಧಿಗಳ ಕುಕೃತ್ಯಗಳಿಂದಾಗಿ ಸಿನಿಮಾ ತಂಡದ ಸದಸ್ಯರು ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಚಿತ್ರದ ಪ್ರಮುಖ ಪಾತ್ರದಲ್ಲ ನಟಿಸಿದ್ದ ಬಾಲಿವುಡ್ ನಟಿ ಅದಾ ಶರ್ಮಾ ಅವರ ಮೊಬೈಲ್ ಫೋನ್ ಸಂಖ್ಯೆಯನ್ನು ಕಿಡಿಗೇಡಿಗಳು ಸೋರಿಕೆ ಮಾಡಿದ್ದಾರೆ. ಅದೇ ಸಂಖ್ಯೆಯನ್ನು ಬಳಸಿಕೊಂಡು ಅವರಿಗೆ ಮಾನಸಿಕ ಕಿರುಕುಳ ನೀಡಲು ಶುರು ಮಾಡಿದ್ದಾರೆ ದುಷ್ಕರ್ಮಿಗಳು.
ಎಕನಾಮಿಕ್ ಟೈಮ್ಸ್ ವರದಿ ಮಾಡಿರುವ ಅದಾ ಶರ್ಮಾ ಅವರ ಸಂಪರ್ಕ ಮಾಹಿತಿಯನ್ನು ‘jhamunda_bolte’ ಎಂಬ ಇನ್ಸ್ಟಾಗ್ರಾಮ್ ಬಳಕೆದಾರ ಸೋರಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಹೊಸ ಸಿಮ್ ಖರೀದಿ ಮಾಡಿದರೆ ಅದನ್ನೂ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಆ ವಿವಾದಾತ್ಮಕ ಇನ್ಸ್ಟಾಗ್ರಾಮ್ ಖಾತೆಯನ್ನು ಈಗ ನಿಷ್ಕ್ರಿಯಗೊಳಿಸಲಾಗಿದೆ. ಆದರೆ, ಅಷ್ಟರೊಳಗೆ ನಂಬರ್ ಪಡೆದುಕೊಂಡಿರುವ ದುಷ್ಕರ್ಮಿಗಳು ಕಿರುಕುಳ ಶುರು ಮಾಡಿಕೊಂಡಿದ್ದಾರೆ.
ಮೇ 5ರಂದು ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾ ಇಸ್ಲಾಂಗೆ ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾಗೆ (ಐಸಿಸ್) ಕಳ್ಳಸಾಗಣೆ ಮಾಡಲಾದ ಕೇರಳದ ಹಿಂದೂ ಮಹಿಳೆಯರ ಕಥೆಗಳ ಸುತ್ತ ಸುತ್ತುತ್ತದೆ. ಬಿಡುಗಡೆಯಾದಾಗಿನಿಂದ ಪ್ರೇಕ್ಷಕರ ಒಂದು ವಿಭಾಗವು ಚಿತ್ರವನ್ನು ಬಿಜೆಪಿಯ ಪ್ರಚಾರ ತಂತ್ರ ಎಂದು ಕರೆಯುತ್ತಿದೆ. ಅದೇ ರೀತಿ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಬೆದರಿಕೆ ಸಂದೇಶಗಳು ಎದುರಾಗುತ್ತಿವೆ. ಈ ತಿಂಗಳ ಆರಂಭದಲ್ಲಿ, ನಿರ್ದೇಶಕ ಸುದೀಪ್ತೋ ಸೇನ್ ಅವರು ಸಿಬ್ಬಂದಿಗಳಲ್ಲಿ ಒಬ್ಬರಿಗೆ ಬೆದರಿಕೆ ಸಂದೇಶ ಬಂದಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ನೋಡಿದ ಬಳಿಕ, ತನ್ನ ಲಿವ್ ಇನ್ ಸಂಗಾತಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಯುವತಿ
ನಟಿ ಅದಾ ಅವರು ದಿ ಕೇರಳ ಸ್ಟೋರಿಯನ್ನು ಸಾಮಾಜಿಕ ಚಳವಳಿ’ ಎಂದು ಕರೆದಿದ್ದರು. ಕೆಲವರಿಗೆ ಚಿತ್ರದ ಬಗ್ಗೆ ಏಕೆ ಸಮಸ್ಯೆ ಇದೆ ಎಂದು ಆಶ್ಚರ್ಯಪಟ್ಟಿದ್ದರು. ನನ್ನ ಸಿನಿಮಾದಿಂದ ಭಯೋತ್ಪಾದಕ ಸಂಘಟನೆಗಳಿಗೆ ನನ್ನ ಸಿನಿಮಾದಿಂದ ಸಮಸ್ಯೆ ಏನಾದರೂ ಇದೆಯಾ ಎಂದು ಪ್ರಶ್ನಿಸಿದ್ದರು.
ಸಿನಿಮಾ ನೋಡಿದ ಯಾರಿಗೂ ಸಮಸ್ಯೆ ಇಲ್ಲ. ಇದು ಭಯೋತ್ಪಾದನೆಯ ಎಂಬುದಷ್ಟನ್ನೇ ಹೇಳಲಾಗಿದೆ. ಹಾಗಿದ್ದಾಗ ಕೆಲವರಿಗೆ ಚಲನಚಿತ್ರದ ಬಗ್ಗೆ ಯಾಕೆ ಮುನಿಸು ಎಂಬುದು ಗೊತ್ತಿಲ್ಲ. ವಾಸ್ತವವನ್ನು ಬಹಿರಂಗವಾಗಿ ಹೇಳುವ ಕಾರಣ ಭಯೋತ್ಪಾದಕ ಸಂಘಟನೆಗಳಿಗೆ ಸಮಸ್ಯೆಯಾಗಬಹುದು ಎಂದುಕೊಂಡಿದ್ದೆ. ಜನರಿಗೆ ಅದರೊಂದಿಗೆ ಸಮಸ್ಯೆ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ . ಇದು ಭಯೋತ್ಪಾದನಾ ವಿರೋಧಿ ಚಿತ್ರ’, ‘ನಾವೆಲ್ಲರೂ ಇದನ್ನು ನೋಡಲೇಬೇಕು’ ಎಂದು ಎಂದು ಅದಾ ಶರ್ಮಾ ಹೇಳಿದ್ದರು.