Site icon Vistara News

Head Bush Review | ರಕ್ತ ಚರಿತ್ರೆ ಮೇಲೆ ರಾಜಕೀಯ ‘ಕಲೆ’: ಹೇಗಿದೆ ‘ಹೆಡ್ ಬುಷ್’ ಅಬ್ಬರ?

Head Bush Review

ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಹೆಡ್ ಬುಷ್’ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಿದೆ. ನೂರಾರು ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಿರುವ ಹೆಡ್ ಬುಷ್ (Head Bush Review) ಡಾಲಿ ಫ್ಯಾನ್ಸ್ ಸಂಭ್ರಮಕ್ಕೆ ಕಾರಣವಾಗಿದೆ. ಈ ಮೂಲಕ 1970 ಹಾಗೂ 80ರ ದಶಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರನ್ನು ಅಕ್ಷರಶಃ ನಡುಗಿಸಿದ್ದ ಡಾನ್ ಜಯರಾಜ್ ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ಎಂಟ್ರಿ ಕೊಟ್ಟಿದ್ದಾನೆ.

ಹಿಂದೆ ಕೂಡ ಡಾನ್ ಜಯರಾಜ್ ಕುರಿತು ಹಲವು ಸಿನಿಮಾಗಳು ಬಂದಿದ್ದವು. ಆದರೆ ಈ ಬಾರಿ ಹೊಸ ಕಾನ್ಸೆಪ್ಟ್ ಜತೆಗೆ ಡಾಲಿ ಧನಂಜಯ & ಟೀಂ ‘ಹೆಡ್ ಬುಷ್’ ಸಿನಿಮಾ ನಿರ್ಮಿಸಿತ್ತು. ಈ ಕಾರಣಕ್ಕೆ ‘ಹೆಡ್ ಬುಷ್’ ಸಾಕಷ್ಟು ಕುತೂಹಲ ಕೆರಳಿಸಿತ್ತು. ಎಂ.ಪಿ. ಜಯರಾಜ್ ಆಗಿದ್ದವನು ಅದು ಹೇಗೆ ಡಾನ್ ಜಯರಾಜ್ ಆಗುತ್ತಾನೆ ಎಂಬುದನ್ನು ‘ಹೆಡ್ ಬುಷ್’ ಪಾರ್ಟ್-1 ಸೂಕ್ಷ್ಮವಾಗಿ ತಿಳಿಸಿದೆ. ಆದರೆ ಸಿನಿಮಾ ಮೊದಲಾರ್ಧ ಸ್ವಲ್ಪ ವೇಗವಾಗಿ ಸಾಗಿದರೂ, ದ್ವಿತೀಯಾರ್ಧ ಸ್ವಲ್ಪ ತಡವೆನಿಸುತ್ತದೆ. ಇನ್ನು ‘ಹೆಡ್ ಬುಷ್’ ಪಾರ್ಟ್-2 ಬಗ್ಗೆ ಕುತೂಹಲ ಕಾಯ್ದುಕೊಳ್ಳುವಂತೆ ಸಿನಿಮಾ ನಿರ್ಮಿಸಲಾಗಿದೆ. ಹಾಗೆಯೇ ಕಥೆ ಹೆಣೆಯಲಾಗಿದೆ.

ಅಬ್ಬರಿಸಿದ ಡಾಲಿ
ಮಾಸ್ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಿರುವ ಡಾಲಿ ಧನಂಜಯ್ ಮೈಕಟ್ಟು ಹೆಡ್​ ಬುಷ್ ಸಿನಿಮಾದ ಹೈಲೈಟ್‌ ಎನ್ನಬಹುದು. ಚಿತ್ರದ ಪ್ರತಿಯೊಂದು ದೃಶ್ಯವನ್ನೂ ಡಾಲಿ ಆವರಿಸಿಕೊಂಡಿದ್ದಾರೆ. ಮತ್ತೊಂದೆಡೆ, ಸ್ಯಾಮ್ಸನ್ ಪಾತ್ರ ಕೂಡ ಸಿನಿಮಾದ ಹೈಲೈಟ್‌. ಹಾಗಾಗಿ, ‘ಹೆಡ್ ಬುಷ್’ ಪಾರ್ಟ್-1 ಅಭಿಮಾನಿಗಳ ನಿರೀಕ್ಷೆ ಹುಸಿ ಮಾಡುವುದಿಲ್ಲ.

ಡಾಲಿ ಧನಂಜಯ್ ಮತ್ತೊಮ್ಮೆ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ಹಾಗೂ ವಿಮರ್ಶಕರನ್ನು ಸೆಳೆದಿದ್ದಾರೆ. ಮಾಸ್ ಲುಕ್​​ ಹಾಗೂ ಖಡಕ್ ಫೈಟ್ ಮೂಲಕ ಡಾಲಿ ಧನಂಜಯ್ ಅಬ್ಬರಿಸಿದ್ದಾರೆ. ಮತ್ತೊಂದು ಕಡೆ ಸ್ಯಾಮ್ಸನ್ ಪಾತ್ರವೂ ಅಭಿಮಾನಿಗಳ ಕುತೂಹಲ ಹೆಚ್ಚುವಂತೆ ಮಾಡುತ್ತದೆ. ಡಾನ್ ಜಯರಾಜ್ ಗೆಳೆಯನ ಪಾತ್ರದಲ್ಲಿ ನಟ ಯೋಗಿ ಕಾಣಿಸಿಕೊಂಡಿದ್ದು, ಗಂಗನ ಪಾತ್ರದಲ್ಲಿ ಮಿಂಚಿದ್ದಾರೆ.

ರಕ್ತಸಿಕ್ತ ಅಧ್ಯಾಯ
ಮುಂಬೈ ಅಂಡರ್ ವರ್ಲ್ಡ್ ಬಿಟ್ಟರೆ ಬೆಂಗಳೂರು ಭೂಗತ ಜಗತ್ತು ಆ ಕಾಲಕ್ಕೆ ದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿತ್ತು. ಆಯಿಲ್ ಮಾಫಿಯಾ, ರಿಯಲ್ ಎಸ್ಟೇಟ್ ಬಾಲ ಬಿಚ್ಚಿದ್ದೇ ಆಗ. ಅದರಲ್ಲೂ ಬೆಂಗಳೂರು ಇತಿಹಾಸದಲ್ಲಿ ಮೊದಲ ಡಾನ್ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದ ಡಾನ್ ಜಯರಾಜ್ ಅಲಿಯಾಸ್ ಎಂ.ಪಿ.ಜಯರಾಜ್ ಕುರಿತು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತೆ. ಈ ಹಿಂದೆ ಡಾನ್ ಜಯರಾಜ್ ರಕ್ತಚರಿತ್ರೆ ಕುರಿತು ಹಲವಾರು ಸಿನಿಮಾಗಳು ಬಂದಿವೆ. ಆದರೆ ‘ಹೆಡ್ ಬುಷ್’ ಚಿತ್ರದಲ್ಲಿ ರೌಡಿಸಂ ಮಾತ್ರ ತೋರಿಸದೆ ಅಂದಿನ ರಾಜಕೀಯ ಸ್ಥಿತಿಗತಿ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.

ಒಟ್ಟಾರೆ ಹೇಳುವುದಾದರೆ 1970 ಹಾಗೂ 80ರ ದಶಕದಲ್ಲಿ ಬೆಂಗಳೂರನ್ನ ನಡುಗಿಸಿದ್ದ ರೌಡಿಗಳ ಪಾತ್ರಗಳು ಹೆಡ್ ಬುಷ್ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಬಂದಿದೆ. ಅದರಲ್ಲೂ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಜಯರಾಜ್ ಪಾತ್ರ ನಿರ್ವಹಿಸಿರುವುದು ಸಿನಿಮಾಗೆ ಪ್ಲಸ್ ಪಾಯಿಂಟ್. ಡಾಲಿ ಗೆಟಪ್ ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೊಂದು ಭಾಗ ಕೂಡ ಬರಲಿದ್ದು, ‘ಹೆಡ್ ಬುಷ್’ ಪಾರ್ಟ್-2ನಲ್ಲಿ ಜಯರಾಜ್ ಹಾಗೂ ಡಾನ್ ಕೊತ್ವಾಲ್ ಮುಖಾಮುಖಿ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Head Bush Story | ಹೆಡ್ ಬುಷ್ ಚಿತ್ರದಲ್ಲಿ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಅನಾವರಣ?

Exit mobile version