ಬೆಂಗಳೂರು: ಕನ್ನಡ ಸಿನಿಮಾಗಳು ಎಲ್ಲೆಲ್ಲೂ ಮಿಂಚುತ್ತಿವೆ, ಈಗ ಜಾಗತಿಕ ಸಿನಿಮಾ ಮಾರುಕಟ್ಟೆಯಲ್ಲಿ ಸ್ಯಾಂಡಲ್ವುಡ್ ಸಿನಿಮಾಗಳ ಗತ್ತು ಗಟ್ಟಿಯಾಗುತ್ತಿದೆ. ಅದರಲ್ಲೂ ಕೊರೊನಾ ಕಂಟಕ ಕಳೆದ ಬಳಿಕ ಚಂದನವನ ಮಿಂಚುತ್ತಿದೆ. ಈ ಹೊತ್ತಲ್ಲೇ ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಅಬ್ಬರಿಸುತ್ತಿದೆ. ಮತ್ತೊಂದು ಕಡೆ ಬೆಟ್ಟದಷ್ಟು ನಿರೀಕ್ಷೆಯನ್ನು ಹೊತ್ತು ಬರುತ್ತಿದೆ ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ (Head Bush) ಸಿನಿಮಾ.
‘ಹೆಡ್ ಬುಷ್’ ಸಿನಿಮಾ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಇದ್ದು, ಡಾಲಿ ಧನಂಜಯ್ ಫ್ಯಾನ್ಸ್ ಈ ಸಿನಿಮಾಗೆ ಕಾಯುತ್ತಿದ್ದಾರೆ. ಅಕ್ಟೋಬರ್ 21ಕ್ಕೆ ಚಿತ್ರ ರಿಲೀಸ್ ಆಗಲಿದ್ದು, ಡಾಲಿ ಧನಂಜಯ್ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ್ದಾರೆ. ಹಾಗೇ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ‘ಹೆಡ್ ಬುಷ್’ ಟ್ರೈಲರ್ ಸೌಂಡ್ ಮಾಡುತ್ತಿದೆ. ಚಿತ್ರದ ಮೇಲಿನ ಕೂತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ ಹೆಡ್ ಬುಷ್ ಟ್ರೈಲರ್. ಇದೇ ಹೊತ್ತಲ್ಲೇ ಬೆಂಗಳೂರಿಗರಿಗೆ ಈ ಸಿನಿಮಾ ಮೇಲೆ ಕುತೂಹಲ ದುಪ್ಪಟ್ಟಾಗುತ್ತಿದೆ. ಈ ಕುತೂಹಲಕ್ಕೆ ಬಲವಾದ ಕಾರಣ ಕೂಡ ಇದೆ.
ಜಯರಾಜ್ ಹವಾ!
ಮುಂಬೈ ಅಂಡರ್ ವರ್ಲ್ಡ್ ಬಿಟ್ಟರೆ ಬೆಂಗಳೂರಿನ ಭೂಗತ ಜಗತ್ತು ಅಂದಿನ ಸಮಯಕ್ಕೆ ದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿತ್ತು. ಆಯಿಲ್ ಮಾಫಿಯಾ, ರಿಯಲ್ ಎಸ್ಟೇಟ್ ಬಾಲ ಬಿಚ್ಚಿದ್ದೇ ಆಗ. ಅದರಲ್ಲೂ ಬೆಂಗಳೂರು ಇತಿಹಾಸದಲ್ಲಿ ಮೊದಲ ಡಾನ್ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದ ಡಾನ್ ಜಯರಾಜ್ ಅಲಿಯಾಸ್ ಎಂ.ಪಿ.ಜಯರಾಜ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತೆ. ಈ ಹಿಂದೆ ಡಾನ್ ಜಯರಾಜ್ ರಕ್ತಚರಿತ್ರೆ ಕುರಿತು ಹಲವಾರು ಸಿನಿಮಾಗಳು ಬಂದಿವೆ. ಆದರೆ ‘ಹೆಡ್ ಬುಷ್’ ತುಂಬಾನೆ ಸ್ಪೆಷಲ್ ಅಂತಿದೆ ಚಿತ್ರತಂಡ. ಇಲ್ಲಿ ರೌಡಿಸಂ ಮಾತ್ರ ತೋರಿಸದೆ ಅಂದಿನ ರಾಜಕೀಯ ಸ್ಥಿತಿಯ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.
1970 ಹಾಗೂ 1980ರ ದಶಕದಲ್ಲಿ ಬೆಂಗಳೂರನ್ನು ನಡುಗಿಸಿದ್ದ ರೌಡಿಗಳ ಪಾತ್ರಗಳು ‘ಹೆಡ್ ಬುಷ್’ ಸಿನಿಮಾ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಗೆ ಬರುತ್ತಿದೆ. ಅದರಲ್ಲೂ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಎಂ.ಪಿ. ಜಯರಾಜ್ ಪಾತ್ರ ನಿರ್ವಹಿಸುತ್ತಿದ್ದು, ಡಾಲಿಯ ಗೆಟಪ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಕ್ಟೋಬರ್ 21ಕ್ಕೆ ‘ಹೆಡ್ ಬುಷ್’ ಸಿನಿಮಾ ದೇಶಾದ್ಯಂತ ರಿಲೀಸ್ ಆಗಲಿದೆ. ಬೆಂಗಳೂರು ಭೂಗತ ಲೋಕದ ಕಥೆ, 1970-80ರ ದಶಕದ ರಾಜಕೀಯ ಪರಿಸ್ಥಿತಿಯನ್ನು ಈ ಚಿತ್ರ ವಿವರಿಸಲಿದೆ. ಜೊತೆಗೆ ಇದುವರೆಗೂ ರಿವೀಲ್ ಆಗದ ವಿಚಾರಗಳನ್ನೂ ತೆರೆಮೇಲೆ ತರಲಿದ್ದಾರೆ ಡಾಲಿ & ಟೀಂ.
ಇದನ್ನೂ ಓದಿ: Head Bush | ಬೆಂಗಳೂರನ್ನು ನಡುಗಿಸಲು ಮತ್ತೊಮ್ಮೆ ಬರ್ತಿದ್ದಾನೆ ಡಾನ್ ಜಯರಾಜ್!