ಬೆಂಗಳೂರು: ‘ಹೆಡ್ ಬುಷ್’ ಸಿನಿಮಾ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಕ್ಟೋಬರ್ 21, ಅಂದರೆ ಇದೇ ಶುಕ್ರವಾರ ಸಿನಿಮಾ (Head Bush Story) ತೆರೆಗೆ ಬರಲಿದೆ. ಬೆಂಗಳೂರು ಭೂಗತ ಲೋಕದ ಇತಿಹಾಸ ಕೆದಕುವ ಹಾಗೂ ಭೂಗತ ಲೋಕಕ್ಕೂ ಮತ್ತು ಅಂದಿನ ರಾಜಕೀಯಕ್ಕೂ ಇದ್ದ ಸಂಬಂಧವನ್ನು ಎಳೆ ಎಳೆಯಾಗಿ ಬಿಡಿಸಿಡಲಿದೆ ಈ ಸಿನಿಮಾ. ಒಟ್ಟು 2 ಭಾಗಗಳಲ್ಲಿ ರಿಲೀಸ್ ಆಗಲಿರುವ ‘ಹೆಡ್ ಬುಷ್’, ಈಗ ಪಾರ್ಟ್-1 ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಯುಟ್ಯೂಬ್ನಲ್ಲಿ ಅಬ್ಬರ ಎಬ್ಬಿಸಿದೆ.
ಅಂದಹಾಗೆ ‘ಹೆಡ್ ಬುಷ್-1’ನಲ್ಲಿ 1974ರಿಂದ 1978ರವರೆಗೂ ನಡೆಯುವ ಅಂಡರ್ ವರ್ಲ್ಡ್ ಸ್ಟೋರಿಯನ್ನು ಹೇಳಿದೆ ಡಾಲಿ & ಗ್ಯಾಂಗ್. ಅಂದಿನ ಕಾಲಘಟ್ಟದಲ್ಲಿ ಅಂದರೆ 1975ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಹೀಗಾಗಿ ಹೆಡ್ ಬುಷ್-1ನಲ್ಲಿ ತುರ್ತು ಪರಿಸ್ಥಿತಿಯ ಘಟನೆಗಳನ್ನು ತೋರಿಸಲಾಗಿದೆಯಾ ಎಂಬ ಪ್ರಶ್ನೆಗೆ ಖುದ್ದು ನಟ ಡಾಲಿ ಧನಂಜಯ್ ಉತ್ತರಿಸಿದ್ದಾರೆ.
ಕಾದು ನೋಡಿ!
‘ಹೆಡ್ ಬುಷ್-1’ ಕಥೆಯ ಕುರಿತು ಸುಳಿವು ಬಿಟ್ಟುಕೊಡದ ನಟ ಡಾಲಿ ಧನಂಜಯ್, ‘ಹೆಡ್ ಬುಷ್-1’ನಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ಹೇಳಲಾಗಿದೆಯಾ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿಲ್ಲ. ಆದರೆ ಈ ಸಿನಿಮಾ 1974ರಿಂದ 78ರ ಕಾಲಘಟ್ಟದ ಸಂಪೂರ್ಣ ಚಿತ್ರಣವನ್ನು ತೋರಿಸಲಿದೆ ಎಂದಿದ್ದಾರೆ. ಹಾಗಿದ್ದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಳ್ವಿಕೆಯಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಬಗೆಗಿನ ಕರಾಳ ಅಧ್ಯಾಯವನ್ನು ತೋರಿಸಲಿದ್ದಾರಾ? ಎಂಬುದೇ ಡಾಲಿ ಫ್ಯಾನ್ಸ್ಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದಕ್ಕೆ ಅಕ್ಟೋಬರ್ 21ರಂದು ಉತ್ತರ ಸಿಗಲಿದೆ.
1970 ಹಾಗೂ 1980ರ ದಶಕದಲ್ಲಿ ಬೆಂಗಳೂರನ್ನು ನಡುಗಿಸಿದ್ದ ರೌಡಿಗಳ ಪಾತ್ರಗಳು ‘ಹೆಡ್ ಬುಷ್’ ಸಿನಿಮಾ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಗೆ ಬರುತ್ತಿವೆ. ಅದರಲ್ಲೂ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಎಂ.ಪಿ. ಜಯರಾಜ್ ಪಾತ್ರ ನಿರ್ವಹಿಸುತ್ತಿದ್ದು, ಡಾಲಿಯ ಗೆಟಪ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದರ ಜೊತೆಗೆ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಅನಾವರಣವಾದರೆ ‘ಹೆಡ್ ಬುಷ್’ ಸಿನಿಮಾ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದು ಗ್ಯಾರಂಟಿ.
ಇದನ್ನೂ ಓದಿ: Head Bush | ಬೆಂಗಳೂರು ನಿವಾಸಿಗಳಿಗೆ ‘ಹೆಡ್ ಬುಷ್’ ಬಗ್ಗೆ ಬೆಟ್ಟದಷ್ಟು ಕುತೂಹಲ!