Site icon Vistara News

Head Bush | ಬೆಂಗಳೂರನ್ನು ನಡುಗಿಸಲು ಮತ್ತೊಮ್ಮೆ ಬರ್ತಿದ್ದಾನೆ ಡಾನ್ ಜಯರಾಜ್!

Head Bush

ಬೆಂಗಳೂರು: ಕನ್ನಡ ಸಿನಿಮಾಗಳ ಬಗ್ಗೆ ಹಾಗೂ ಸ್ಯಾಂಡಲ್​​​ವುಡ್ ಬಗ್ಗೆ ಹಗುರವಾಗಿ ಮಾತನಾಡಿದ್ದ, ಅರ್ಧಂಬರ್ಧ ಜ್ಞಾನ ಪಡೆದವರ ಬಾಯಿ ಸೈಲೆಂಟ್ ಆಗಿದೆ. 2018ರಲ್ಲಿ ‘ಕೆಜಿಎಫ್-1’ ಅಬ್ಬರಿಸಿದ ಬಳಿಕ ಪರಭಾಷಿಕರು ಇತ್ತ ತಿರುಗಿ ನೋಡಿದ್ದರು. ಇನ್ನು ಕೊರೊನಾ ಕಂಟಕ ಕಳೆದು, ಚಂದನವನದಲ್ಲಿ ಹೊಸ ಮನ್ವಂತರ ಆರಂಭವಾದ ನಂತರ ಸಾಲು ಸಾಲಾಗಿ ಬ್ಲಾಕ್ ಬಸ್ಟರ್ ಸಿನಿಮಾಗಳು ಕರುನಾಡಿನಿಂದ ಹಿಡಿದು ಜಗತ್ತಿನಾದ್ಯಂತ ಅಬ್ಬರಿಸಿವೆ. ಈ ಸಾಲಲ್ಲಿ ಜೇಮ್ಸ್, ಕೆಜಿಎಫ್-2, 777 ಚಾರ್ಲಿ, ವಿಕ್ರಾಂತ್ ರೋಣ, ಕಾಂತಾರ ಹೊಸ ಇತಿಹಾಸ ಸೃಷ್ಟಿಸಿವೆ. ಇದೇ ಪಟ್ಟಿಗೆ ಸೇರ್ಪಡೆಯಾಗಲು ಬಹುನಿರೀಕ್ಷಿತ ‘ಹೆಡ್ ಬುಷ್’ (Head Bush) ಸಿದ್ಧವಾಗಿದ್ದು, ಟ್ರೈಲರ್ ಲಾಂಚ್ ಡೇಟ್ ಘೋಷಣೆಯಾಗಿದೆ.

4 ದಶಕಗಳ ಹಿಂದೆ ಬೆಂಗಳೂರನ್ನೇ ನಡುಗಿಸಿದ್ದ ಡಾನ್ ಜಯರಾಜ್ ಮತ್ತೆ ಸಿಲ್ವರ್ ಸ್ಕ್ರೀನ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಾರಿ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ನಟ ಡಾನ್ ಡಾಲಿ ಜಯರಾಜ್ ಪಾತ್ರದಲ್ಲಿ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಡಾನ್ ಡಾಲಿಯಿಂದ ಡಾನ್ ಜಯರಾಜ್ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿರುವ ನಟ ಧನಂಜಯ ತಮ್ಮ ನಟನೆಯಿಂದಲೇ ಮಿಂಚು ಹರಿಸುತ್ತಿದ್ದಾರೆ. ಹೀಗಾಗಿ ‘ಹೆಡ್ ಬುಷ್’ ಟ್ರೈಲರ್ ಯಾವಾಗ ರಿಲೀಸ್ ಆಗುತ್ತಪ್ಪ ಅಂತ ಅಭಿಮಾನಿಗಳು ಕಾಯುತ್ತಿದ್ದರು. ಈಗ ಟ್ರೈಲರ್ ಲಾಂಚ್ ಡೇಟ್ ಫೈನಲ್ ಆಗಿದ್ದು, ಇದೇ ಶನಿವಾರ ಅಂದ್ರೆ ಅಕ್ಟೋಬರ್ 16ರಂದು ‘ಹೆಡ್ ಬುಷ್’ ಟ್ರೈಲರ್ ರಿಲೀಸ್ ಆಗಲಿದೆ.

ಜೀವನವೇ ಮುಡಿಪು
ಡಾಲಿ ಧನಂಜಯ್ ‘ಹೆಡ್ ಬುಷ್’ ಚಿತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಸಿನಿಮಾದಲ್ಲಿ ದುಡಿದ ಕೋಟಿ ಕೋಟಿ ಹಣವನ್ನು ‘ಹೆಡ್ ಬುಷ್’ ಸಿನಿಮಾಗಾಗಿ ಸುರಿದು, ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ನಿರೀಕ್ಷೆಗೆ ತಕ್ಕಂತೆ ‘ಹೆಡ್ ಬುಷ್’ ಸದ್ದು ಮಾಡುತ್ತಿದೆ. ಈಗಾಗಲೇ ‘ಹೆಡ್ ಬುಷ್’ ಸಾಂಗ್ಸ್ ಹಾಗೂ ಟೀಸರ್​ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಮತ್ತೊಂದು ಕಡೆ ಡಾಲಿ ಧನಂಜಯ್ ಸಿನಿಮಾ ಪ್ರಚಾರಕ್ಕೆ ಕೈಗೊಳ್ಳುತ್ತಿರುವ ಐಡಿಯಾಗಳು ಸಖತ್ತಾಗಿ ವರ್ಕೌಟ್ ಆಗುತ್ತಿವೆ.

ಸ್ಟಾರ್​ಗಳ ಗ್ಯಾಂಗ್!
ಅಕ್ಟೋಬರ್ 21ಕ್ಕೆ ‘ಹೆಡ್ ಬುಷ್’ ರಿಲೀಸ್ ಆಗುತ್ತಿದೆ. ಸಿನಿಮಾಗೆ ಶೂನ್ಯ ಆಕ್ಷನ್ ಕಟ್ ಹೇಳಿದ್ದರೆ, ನಟಿ ಪಾಯಲ್ ರಜಪೂತ್, ಶ್ರುತಿ ಹರಿಹರನ್, ಬಾಲು ನಾಗೇಂದ್ರ, ರಘು ಮುಖರ್ಜಿ, ಲೂಸ್ ಮಾದ ಹಾಗೂ ವಸಿಷ್ಠ ಸಿಂಹ ಡಾನ್ ಜಯರಾಜ್ ಅಲಿಯಾಸ್ ನಟ ಡಾಲಿ ಧನಂಜಯ್​​ಗೆ ಸಾಥ್ ನೀಡಿದ್ದಾರೆ. ಈಗಾಗಲೇ ಈ ಸ್ಟಾರ್ ಕಾಸ್ಟ್ ನೋಡಿಯೇ ಫ್ಯಾನ್ಸ್ ಕ್ರೇಜ್ ಮುಗಿಲುಮುಟ್ಟಿದೆ, ಇನ್ನು ಸಿನಿಮಾ ರಿಲೀಸ್ ಆಗುವ ದಿನ ಥಿಯೇಟರ್​ಗಳ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗುವುದು ಗ್ಯಾರಂಟಿ.

ಒಟ್ಟಾರೆ ಹೇಳುವುದಾದರೆ ಡಾನ್ ಜಯರಾಜ್​ನ ರಕ್ತಸಿಕ್ತ ಅಧ್ಯಾಯ ಹಾಗೂ ಅಂದಿನ ಕಾಲದ ಬೆಂಗಳೂರಿನ ಪಾಲಿಟಿಕ್ಸ್ ಅನಾವರಣಕ್ಕೆ ವೇದಿಕೆ ಸಿದ್ಧವಾಗಿದೆ. ಸಿಕ್ಕಾಪಟ್ಟೆ ಸ್ಟಾರ್​ಗಳನ್ನ ಜತೆಯಲ್ಲಿ ಇಟ್ಟುಕೊಂಡು ಡಾನ್ ಡಾಲಿ ಎಂಟ್ರಿ ಕೊಡುತ್ತಿದ್ದಾರೆ. ಈಗ ಟ್ರೈಲರ್ ಹೇಗಿರಲಿದೆ ಎಂಬ ಬಗ್ಗೆ ಅಭಿಮಾನಿಗಳ ಕುತೂಹಲ ಮುಗಿಲು ಮುಟ್ಟಿದ್ದಾಗಿದೆ. ಫ್ಯಾನ್ಸ್​ ಕುತೂಹಲಕ್ಕೆ ಅ.16ರ ಶನಿವಾರ ಬೆಳಗ್ಗೆ 11.07 ಕ್ಕೆ ‘ಆನಂದ್ ಆಡಿಯೋ’ ಯುಟ್ಯೂಬ್ ಚಾನೆಲ್​ನಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ: Kantara Hindi | ಕನ್ನಡಿಗರ ಕಾಂತಾರ ಕಂಡು ಬೆಚ್ಚಿಬಿದ್ದ ಬಾಲಿವುಡ್ ನಟರು!

Exit mobile version