Site icon Vistara News

Ram Mandir: ಅಯೋಧ್ಯೆಯಲ್ಲಿ ಹೇಮಾ ಮಾಲಿನಿ ರಾಮಾಯಣ ನೃತ್ಯ ನಾಟಕ ವಿಶೇಷ ಪ್ರದರ್ಶನ!

Hema Malini As Sita Perform In Ayodhya Ahead Of Ram Mandir Consecration

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಮುನ್ನ ಸ್ವಾಮಿ ರಾಮಭದ್ರಾಚಾರ್ಯ ಆಯೋಜಿಸಿರುವ 10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ (Hema Malini) ಮತ್ತು ತಂಡದವರು ರಾಮಾಯಣ ನೃತ್ಯ ನಾಟಕವನ್ನು ಜ.17ರಂದು ಪ್ರದರ್ಶಿಸಿದ್ದರು. ಜನವರಿ 22 ರ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿಯೂ ಕೂಡ ನಟಿ ವಿಶೇಷ ಪ್ರದರ್ಶನವನ್ನು ನೀಡಲಿದ್ದಾರೆ.

ಜ.17ರಂದು ರಾಮಾಯಣ ನೃತ್ಯ ನಾಟಕವನ್ನು ವಿಶಾಲ್ ನಾಯಕ್ ಜತೆಗೆ ಪ್ರದರ್ಶಿಸಿದರು. ಇದೀಗ ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪ್ರದರ್ಶನದ ಬಗ್ಗೆ ಹೇಮಾ ಮಾಲಿನಿ ಮಾತನಾಡಿ “ಈ ಕಾರ್ಯಕ್ರಮವನ್ನು ಸ್ವಾಮಿ ರಾಮಭದ್ರಾಚಾರ್ಯ ಅವರು ಆಯೋಜಿಸಿದ್ದಾರೆ. ಆ 10 ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಸಮಯದಲ್ಲಿ ನಾನು ಇಲ್ಲಿರುವುದು ನನ್ನ ಅದೃಷ್ಟ. ಇಡೀ ಬಾಲಿವುಡ್ ‘ರಾಮಮಯ’ ಆಗಿದೆ. ಕಲಾವಿದರು ರಾಮಗೀತೆಗಳನ್ನು ಹಾಡುತ್ತಿದ್ದಾರೆ. ಕಳೆದ ವರ್ಷವೂ ರಾಮ ಭಜನೆ ಹಾಡಿದ್ದೆʼʼ ಎಂದರು.

ಇದನ್ನೂ ಓದಿ: Ayodhya Ram Mandir: ರಾಮ ಮಂದಿರದ 2000 ಅಡಿ ಆಳದಲ್ಲಿರುತ್ತೆ ಟೈಮ್‌ ಕ್ಯಾಪ್ಸೂಲ್!‌ ಏನಿದರ ವಿಶೇಷತೆ?

ಮಥುರಾದ ಕೃಷ್ಣ ಜನ್ಮಸ್ಥಳದಲ್ಲೂ ಕೃಷ್ಣನ ದೇವಸ್ಥಾನ ಇರಬೇಕೇ ಎಂದು ಪ್ರಶ್ನೆ ಬಂದಾಗ ಹೇಮಾ ಮಾಲಿನಿ ಮಾತನಾಡಿ ʻಖಂಡಿತವಾಗಿಯೂ ಇರಬೇಕು. ಮಥುರಾ ಮತ್ತು ವೃಂದಾವನವು ದೇವಾಲಯಗಳನ್ನು ಹೊಂದಿರುವ ನಗರಗಳಾಗಿವೆ. ಕೃಷ್ಣನ ಜನ್ಮಸ್ಥಳ ಕೂಡʼʼ ಎಂದರು.

ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಐತಿಹಾಸಿಕ ಸಮಾರಂಭದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದೇಶದ ರಾಜಧಾನಿ ನವ ದೆಹಲಿಯಲ್ಲಿಯೂ ಅಂದು ದೇಗುಲಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ. ರಣಬೀರ್ ಕಪೂರ್, ಆಲಿಯಾ ಭಟ್, ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಕಂಗನಾ ರಣಾವತ್, ಅಮಿತಾಭ್ ಬಚ್ಚನ್ ಸೇರಿದಂತೆ ಸೌತ್‌ ನಟರುಗಳಿಗೆ ಆಹ್ವಾನ ಬಂದಿದೆ.

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ. ವಿದೇಶಗಳಿಂದ ಆಗಮಿಸುವ ಎಲ್ಲ ಗಣ್ಯರು ಜನವರಿ 21ರಂದೇ ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Exit mobile version