Site icon Vistara News

Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

Highest Collection Movie

ಭಾರತೀಯ ಸಿನಿಮಾ (Indian Movies) ರಂಗದಲ್ಲಿ ಬಾಲಿವುಡ್ (Highest Collection Movie) ದಾಖಲೆಗಳು ನಿರಂತರವಾಗಿವೆ. ಹಲವಾರು ಚಿತ್ರಗಳು ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆಯನ್ನು ಪಡೆದಿವೆ. ದಂಗಲ್‌ (Dangal), ಜವಾನ್ (Jawan), ಪಠಾಣ್ (Pathaan), ಬಜರಂಗಿ ಭಾಯಿಜಾನ್ (Bajrangi Bhaijaan), ಸೀಕ್ರೆಟ್ ಸೂಪರ್‌ಸ್ಟಾರ್ (Secret Superstar), ಪಿಕೆ (PK) ಈ ಚಿತ್ರಗಳು ತೆರೆಗೆ ಬಂದು ಹತ್ತು ವರ್ಷಗಳೇ ಕಳೆದರೂ ಇಂದಿಗೂ ಬಹುತೇಕ ಮಂದಿಯ ಮೆಚ್ಚಿನ ಚಿತ್ರವಾಗಿ ಉಳಿದಿದೆ.

ಭಾರತೀಯ ಸಿನಿಮಾ ರಂಗದಲ್ಲಿ ಕೆಲವು ಚಿತ್ರಗಳು ಗಳಿಕೆಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ (box office) ದಾಖಲೆ ಬರೆದಿರುವ ಹತ್ತು ಸಿನಿಮಾಗಳನ್ನು ಇಂದಿಗೂ ಹಲವು ಮಂದಿ ಪದೇ ಪದೇ ನೋಡುತ್ತಿರುತ್ತಾರೆ. ಆ ಚಿತ್ರಗಳು ಯಾವುದು, ಗಳಿಕೆ ಎಷ್ಟಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

1. ದಂಗಲ್

ಕುಸ್ತಿ ಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರ ಜೀವನಾಧಾರಿತ ಚಿತ್ರದಲ್ಲಿ ಮಹಾವೀರ್ ಸಿಂಗ್ ಪಾತ್ರಧಾರಿಯಾಗಿ ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 2016ರಲ್ಲಿ ತೆರೆಗೆ ಬಂದ ಈ ಚಿತ್ರ 30 ಕೋಟಿ ರೂ. ಬಜೆಟ್‌ನದ್ದಾಗಿದ್ದು, ವಿಶ್ವಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ 2,024 ಕೋಟಿ ರೂ. ಗಳಿಸಿ ದಾಖಲೆ ಬರೆದು ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಆದಾಯಗಳಿಸಿದ ಸಿನೆಮಾ ಎಂಬ ಖ್ಯಾತಿಯನ್ನು ಪಡೆದಿದೆ. ಅದರಲ್ಲೂ ಚೀನಾದಲ್ಲಿ ಈ ಸಿನಿಮಾ ಅತಿ ಹೆಚ್ಚು ಆದಾಯವನ್ನು ಗಳಿಸಿದ ಅನ್ಯ ಭಾಷೆಯ ಮೂರನೇ ಸಿನಿಮಾ ಇದು ಎನ್ನುವ ಖ್ಯಾತಿಯೂ ʼದಂಗಲ್ʼ ಚಿತ್ರದ್ದಾಗಿದೆ.


2. ಬಾಹುಬಲಿ 2

ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಚಿತ್ರ 2012ರಲ್ಲಿ ತೆರೆಗೆ ಬಂದಿದ್ದು, ಎಸ್.ಎಸ್. ರಾಜಮೌಳಿ ಮತ್ತು ವಿ. ವಿಜಯೇಂದ್ರ ಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. 250 ಕೋಟಿ ರೂ. ಬಜೆಟ್ ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,810.60 ಕೋಟಿ ರೂ. ಆದಾಯ ಗಳಿಸಿ ದಾಖಲೆ ಬರೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸಿರುವ ಚಿತ್ರ ಎಂಬ ಖ್ಯಾತಿ ಈ ಸಿನೆಮಾದ್ದಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ಆರು ದಿನದಲ್ಲಿ 789 ಕೋಟಿ ರೂ. ಗಳಿಸಿರುವುದು ಮಾತ್ರವಲ್ಲ 10 ದಿನದಲ್ಲಿ 1 ಸಾವಿರ ಕೋಟಿ ರೂ. ಆದಾಯ ಪಡೆದ ಸಿನೆಮಾ ಇದಾಗಿದೆ.


3. ಆರ್ ಆರ್ ಆರ್

ರಾಮ್ ಚರಣ್ ಮತ್ತು ಜ್ಯೂ. ಎನ್ ಟಿ ಆರ್ ಅಭಿನಯದ ಆರ್ ಆರ್ ಆರ್ ಚಿತ್ರ 2022ರಲ್ಲಿ ತೆರೆಗೆ ಬಂದಿದ್ದು, 550 ಕೋಟಿ ರೂ. ಬಜೆಟ್ ನದ್ದಾಗಿದೆ. ಅತ್ಯಂತ ದುಬಾರಿ ಖರ್ಚು ಮಾಡಿ ನಿರ್ಮಿಸಿರುವ ಈ ಚಿತ್ರ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 405.9 ಕೋಟಿ ರೂ. ಗಳಿಸಿದೆ. ವಿಶ್ವದಾದ್ಯಂತ 1,387.26 ಕೋಟಿ ರೂ. ಆದಾಯ ಗಳಿಸಿದೆ. ಭಾರತದಲ್ಲಿ ಮೂರನೇ ಅತಿ ಹೆಚ್ಚು ಆದಾಯ ಗಳಿಸಿದ ಚಿತ್ರವಾಗಿ ಮಾತ್ರವಲ್ಲ ತೆಲುಗಿನಲ್ಲಿ ಎರಡನೇ ಅತಿ ಹೆಚ್ಚು ಆದಾಯಗಳಿಸಿರುವ ಚಿತ್ರವಾಗಿ ಗುರುತಿಸಿಕೊಂಡಿದೆ.


4. ಕೆಜಿಎಫ್ ಚಾಪ್ಟರ್ 2

2022ರಲ್ಲಿ ತೆರೆಗೆ ಬಂದ ಯಶ್ ಅಭಿನಯದ ಕನ್ನಡ ಚಿತ್ರ ಕೆಜಿಎಫ್ ಚಾಪ್ಟರ್ 2 ಅನ್ನು ಪ್ರಶಾಂತ್ ನೀಲ್ ಅವರು ನಿರ್ದೇಶಿಸಿದ್ದಾರೆ. ವಿಜಯ ಕಿರಗಂದೂರ್ ನಿರ್ಮಿಸಿದ್ದಾರೆ.

100 ಕೋಟಿ ಬಜೆಟ್‌ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,250 ಕೋಟಿ ರೂ. ಆದಾಯ ಗಳಿಸಿದೆ. ವಿಶ್ವದಲ್ಲಿ (ಭಾರತೀಯ ಚಿತ್ರ) ನಾಲ್ಕನೇ ಹಾಗೂ ಭಾರತದಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದೆ.

5. ಜವಾನ್

ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರ 2023ರಲ್ಲಿ ತೆರೆಗೆ ಬಂದಿದ್ದು, 1,148.32 ಕೋಟಿ ರೂ. ಆದಾಯ ಗಳಿಸಿದೆ. 300 ಕೋಟಿ ರೂ. ಬಜೆಟ್‌ನ ಈ ಚಿತ್ರದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ ಕೂಡ ಕಾಣಿಸಿಕೊಂಡಿದ್ದಾರೆ.

ಹಿಂದಿ ಭಾಷೆಯಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದ್ದು, ಭಾರತೀಯ ಸಿನಿಮಾದಲ್ಲಿ ಐದನೇ ಸ್ಥಾನ ಪಡೆದಿದೆ.


6. ಪಠಾಣ್

ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿರುವ ಚಿತ್ರ ʼಪಠಾಣ್ʼ ವಿಶ್ವದಾದ್ಯಂತ 1,050.30 ಕೋಟಿ ರೂ. ಆದಾಯ ಗಳಿಸಿದೆ. ಶಾರುಖ್ ಖಾನ್ ಅಭಿನಯದ ಈ ಚಿತ್ರ ಗಳಿಕೆಯಲ್ಲಿ ಹಿಂದಿ ಭಾಷೆಯಲ್ಲಿ ಮೂರನೇ ಸ್ಥಾನ ಹಾಗೂ ಭಾರತೀಯ ಸಿನಿಮಾ ರಂಗದಲ್ಲಿ ಆರನೇ ಸ್ಥಾನವನ್ನು ಗಳಿಸಿದೆ. 240 ಕೋಟಿ ರೂ. ಬಜೆಟ್ ನ ಚಿತ್ರ ಇದಾಗಿದೆ.


7. ಬಜರಂಗಿ ಭಾಯಿಜಾನ್

ಭಾರತದಾದ್ಯಂತ ಬಾಯಿಜಾನ್ ಎಂದೇ ಕರೆಯಲ್ಪಡುವ ಸಲ್ಮಾನ್ ಖಾನ್, ಕರೀನಾ ಕಪೂರ್ ಅಭಿನಯದ ಈ ಚಿತ್ರ 2015ರಲ್ಲಿ ತೆರೆಗೆ ಬಂದಿದ್ದು, ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ವಿಶ್ವದಾದ್ಯಂತ 969 ಕೋಟಿ ರೂ. ಆದಾಯವನ್ನು ಈ ಚಿತ್ರ ಗಳಿಸಿದ್ದು, ಅತಿ ಹೆಚ್ಚು ಆದಾಯ ಗಳಿಸಿದ ಭಾರತದ 7ನೇ ಚಿತ್ರ ಹಾಗೂ ಹಿಂದಿ ಭಾಷೆಯ 4ನೇ ಚಿತ್ರವಾಗಿ ಗುರುತಿಸಿಕೊಂಡಿದೆ.


8. ಅನಿಮಲ್

ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಅಭಿನಯದ ಈ ಚಿತ್ರ ವಿಶ್ವದಾದ್ಯಂತ 917.36 ಕೋಟಿ ರೂ. ಆದಾಯ ಗಳಿಸಿದೆ. ಈ ಚಿತ್ರವನ್ನು 200 ಕೋಟಿ ರೂ. ಬಜೆಟ್ ನಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ.


9. ಸೀಕ್ರೆಟ್ ಸೂಪರ್ ಸ್ಟಾರ್

2017ರಲ್ಲಿ ತೆರೆಗೆ ಬಂದ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರವನ್ನು ಅದ್ವತ್ ಚಂದನ್ ನಿರ್ದೇಶಿಸಿದ್ದು, ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವದಾದ್ಯಂತ 905.7 ಕೋಟಿ ರೂ. ಆದಾಯ ಗಳಿಸಿರುವ ಈ ಚಿತ್ರವನ್ನು ಅತೀ ಕಡಿಮೆ ಬಜೆಟ್ 15 ಕೋಟಿ ರೂ.ನಲ್ಲಿ ನಿರ್ಮಿಸಲಾಗಿದೆ.


ಇದನ್ನೂ ಓದಿ: Kalki 2898 AD: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಕಲ್ಕಿʼ; ಬಿಡುಗಡೆಯಾದ 5ನೇ ದಿನ ಗಳಿಸಿದ್ದು ಬರೋಬ್ಬರಿ 84 ಕೋಟಿ ರೂ.

10. ಪಿಕೆ

ಆಮೀರ್ ಖಾನ್, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಈ ಚಿತ್ರ 2014ರಲ್ಲಿ ತೆರೆಗೆ ಬಂದಿತ್ತು. ರಾಜಕುಮಾರ್ ಹಿರಾನಿ ನಿರ್ದೇಶಿರುವ ಈ ಚಿತ್ರವನ್ನು 122 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ 769.89 ಕೋಟಿ ರೂ. ಆದಾಯವನ್ನು ಗಳಿಸಿದೆ.

Exit mobile version