Site icon Vistara News

Hombale Films: ʼಸಲಾರ್‌ʼ ಬಿಡುಗಡೆ ಹೊತ್ತಲ್ಲೇ ಹೊಸ ಚಿತ್ರದ ಅಪ್‌ಡೇಟ್‌ ನೀಡಿದ ಹೊಂಬಾಳೆ ಫಿಲ್ಮ್ಸ್

keerthy suresh

keerthy suresh

ಚೆನ್ನೈ: ʼಕೆಜಿಎಫ್‌ʼ ಸರಣಿ ಮತ್ತು ʼಕಾಂತಾರʼ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ವಿಜಯ್‌ ಕಿರಗಂದೂರು ಮಾಲೀಕತ್ವದ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ʼಸಲಾರ್‌ʼ ಚಿತ್ರದ ಬಿಡುಗಡೆಯ ತಯಾರಿಯಲ್ಲಿದೆ. ಪ್ರಶಾಂತ್‌ ನೀಲ್‌ ಮತ್ತು ಪ್ರಭಾಸ್‌ ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಡಿಸೆಂಬರ್‌ 22ರಂದು ಈ ಚಿತ್ರ ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ ತನ್ನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್‌ ನೀಡಿದೆ. ಕೀರ್ತಿ ಸುರೇಶ್‌ (Keerthy Suresh) ನಟನೆಯ ʼರಘು ತಾತʼ ಚಿತ್ರವನ್ನು ಘೋಷಿಸಿದ್ದ ʼಹೊಂಬಾಳೆ ಫಿಲ್ಮ್ಸ್ʼ ಇದೀಗ ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದೆ.

ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ʼರಘು ತಾತʼ ಚಿತ್ರ ಶೀಘ್ರ ತೆರೆಗೆ ಬರಲಿದೆ ಎಂದು ತಿಳಿಸಿದೆ. ಸುಮನ್‌ ಕುಮಾರ್‌ ರಚಿಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಚಿತ್ರದ ಪೋಸ್ಟರ್‌ ಅನ್ನು ಸಾಗಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಪೋಸ್ಟರ್‌ನಲ್ಲಿ ಕೀರ್ತಿ ಸುರೇಶ್‌ ಅವರ ಚಿತ್ರ ಕಂಡು ಬಂದಿದೆ. ಹಿಂದಿ ಮತ್ತು ತಮಿಳಿನಲ್ಲಿ ಹಿನ್ನಲೆ ಧ್ವನಿ ಮೂಡಿಬಂದಿದೆ. ವಿಡಿಯೊ ಕೊನೆಯಲ್ಲಿ ʼಕಮಿಂಗ್‌ ಸೂನ್‌ʼ ಎನ್ನುವ ಸಂದೇಶ ಮೂಡಿ ಬರುತ್ತದೆ. ಆದರೆ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ರಿವೀಲ್‌ ಆಗಿಲ್ಲ.

ಕೀರ್ತಿ ಸುರೇಶ್‌ ನಾಯಕಿಯಾಗಿ ನಟಿಸುವ ʼರಘು ತಾತʼ ಸಿನಿಮಾ ಆರಂಭವಾದಾಗಿನಿಂದಲೂ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಚಿತ್ರದ ಸಣ್ಣ ಝಲಕ್‌ ಬಿಡುಗಡೆ ಮಾಡಿ ಚಿತ್ರತಂಡ ಕುತೂಹಲ ಮೂಡಿಸಿದೆ. ಬಹು ದಿನಗಳ ಬಳಿಕ ತೆರೆ ಮೇಲೆ ಕೀರ್ತಿ ಸುರೇಶ್‌ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಕೀರ್ತಿ ಸುರೇಶ್‌ ಈ ಬಾರಿ ಗೆಲುವು ಸಾಧಿಸ್ತಾರಾ?

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್‌ ಅಭಿನಯದ ʼಭೋಲಾ ಶಂಕರ್‌ʼ ತೆಲುಗು ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಹೀನಾಯವಾಗಿ ಸೋತಿತ್ತು. ಚಿರಂಜೀವಿ, ತಮನ್ನಾ ಭಾಟಿಯಾ ಮತ್ತಿತರರು ನಟಿಸಿದ್ದ ಇದು ತಮಿಳಿನ ʼವೇದಾಲಂʼ ಚಿತ್ರದ ರಿಮೇಕ್‌. ಸೂಪರ್‌ ಸ್ಟಾರ್‌ಗಳಿದ್ದರೂ ಈ ಚಿತ್ರ ಗೆಲುವು ಸಾಧಿಸಿರಲಿಲ್ಲ. ಅಲ್ಲದೆ ಕೀರ್ತಿ ಸುರೇಶ್‌ ಅಭಿನಯಿಸಿದ ಈ ಹಿಂದಿನ ಚಿತ್ರಗಳಾದ ʼಮಾಮಣ್ಣಾನ್‌ʼ ಮತ್ತು ʼದಸರಾʼ ಸಾಧಾರಣ ಗೆಲುವನ್ನಷ್ಟೇ ಸಾಧಿಸಿದ್ದವು. ಹೀಗಾಗಿ ಮಹಾನಟಿ ʼರಘು ತಾತʼ ಚಿತ್ರದ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ‘ರಘು ತಾತ’ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವುದು ಕೂಡ ನಿರೀಕ್ಷೆ ಮೂಡಿಸಿದೆ. ಇದಲ್ಲದೆ ಕೀರ್ತಿ ಸುರೇಶ್‌ ʼಸೈರನ್‌ʼ, ʼರಿವಾಲ್ವರ್‌ ರೀತಾʼ, ಕಣ್ಣಿವೆಡಿʼ ಮುಂತಾದ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಅವರು ವೆವ್‌ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಅವರು ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ. ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.

ಇದನ್ನೂ ಓದಿ: Hombale Films: 2025ಕ್ಕೆ ಕೆಜಿಎಫ್‌ 3 ಪಕ್ಕಾ! ರಾಕಿ ಪಾತ್ರದಲ್ಲಿ ಯಶ್‌ ಇರ್ತಾರಾ?

Exit mobile version