ಮುಂಬೈ: 90ರ ದಶಕದಲ್ಲಿ ಬಾಲಿವುಡ್ ಆಳಿದ ಮಾಧುರಿ ದೀಕ್ಷಿತ್ (Madhuri Dixit) ಅವರು ಸಹಜಾಭಿನಯ, ಸ್ನಿಗ್ಧ ನಗು, ಡ್ಯಾನ್ಸ್‌ನಿಂದಲೇ ಅಭಿಮಾನಿಗಳ ಗಮನ ಸೆಳೆದವರು. 2008ರಲ್ಲಿ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡ ಮಾಧುರಿ ದೀಕ್ಷಿತ್ ರಾಜಕೀಯ ಸೇರುತ್ತಾರೆ ಎನ್ನುವ ವಿಚಾರದಿಂದಲೇ ಸದ್ಯ ಸುದ್ದಿಯಲ್ಲಿದ್ದಾರೆ. ಅವರ ರಾಜಕೀಯ ಸೇರ್ಪಡೆಯ ವಿಚಾರವನ್ನು ಹಲವರು ಸ್ವಾಗತಿಸಿದರೆ ಇನ್ನು ಕೆಲವರು ವಿರೋಧಿಸಿದ್ದಾರೆ. ಈ ಮಧ್ಯೆ ಬಾಲಿವುಡ್ ಜನಪ್ರಿಯ ಕೊರಿಯೋಗ್ರಾಫರ್ ಸರೋಜ್ ಖಾನ್ (Saroj Khan) ಮಾಧುರಿ ದೀಕ್ಷಿತ್ ಅವರ ಧಕ್ ಧಕ್ (Dhak Dhak) ಹಾಡಿನ ಬಗ್ಗೆ ಹಂಚಿಕೊಂಡ ವಿಚಾರವೊಂದು ಮುನ್ನೆಲೆಗೆ ಬಂದಿದೆ.
ನೃತ್ಯ ಸಂಯೋಜನೆಗಾಗಿ ಸರೋಜ್ ಖಾನ್ 3 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ವಿಶಿಷ್ಟ ನೃತ್ಯ ಸಂಯೋಜನೆಯಿಂದಲೇ ಅವರು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ಮಾಧುರಿ ದೀಕ್ಷಿತ್, ಶ್ರೀದೇವಿಯಂತಹ ಬಾಲಿವುಡ್‌ನ ಟಾಪ್ ನಟಿಯರು ಪ್ರಸಿದ್ಧ ಹಾಡುಗಳಿಗೆ ಸರೋಜ್ ಖಾನ್ ಕೊರಿಯೋಗ್ರಾಫ್ ಮಾಡಿದ್ದಾರೆ. 2020ರಲ್ಲಿ ಅವರು ತಮ್ಮ 71ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು. ಸರೋಜ್ ಖಾನ್-ಮಾಧುರಿ ದೀಕ್ಷಿತ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ʼಧಕ್ ಧಕ್ʼ ಇಂದಿಗೂ ಸಿನಿಪ್ರಿಯರ ಹಾಟ್ ಫೆವರೇಟ್ ಹಾಡು. 1992ರಲ್ಲಿ ತೆರೆಕಂಡ ʼಬೇಟಾʼ ಚಿತ್ರದ ಹಾಡು ಇದು. ಈ ಚಿತ್ರದಲ್ಲಿ ಅನಿಲ್ ಕಪೂರ್ ನಾಯಕರಾಗಿದ್ದರು. ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಈ ಹಾಡಿಗೆ ಮೈ ಕುಣಿಸಿದ ರೀತಿಯೇ ಹಾಗಿತ್ತು. ಆ ಬಳಿಕ ಮಾಧುರಿ ದೀಕ್ಷಿತ್ ʼಧಕ್ ಧಕ್ ಗರ್ಲ್ʼ ಎಂದೇ ಪ್ರಸಿದ್ಧರಾಗಿದ್ದರು.
ಕಟ್ ಮಾಡಲು ಮುಂದಾಗಿದ್ದ ಸೆನ್ಸಾರ್ ಬೋರ್ಡ್
ಅಚ್ಚರಿ ಎಂದರೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC) ಈ ಹಾಡಿನ ದೃಶ್ಯಗಳನ್ನು ಕತ್ತರಿಸಲು ಬಯಸಿತ್ತು ಎಂದರೆ ನಂಬುತ್ತೀರಾ? ಹೌದು, ನೃತ್ಯದ ಹೆಜ್ಜೆಗಳು ಉದ್ದೇಶಪೂರ್ವಕವಾಗಿ ಪ್ರಚೋದನಕಾರಿಯಾಗಿವೆ ಮತ್ತು ಅದು ಪ್ರೇಕ್ಷಕರನ್ನು ಕೆರಳಿಸುವಂತಿದೆ ಎಂದು ಕಾರಣ ನೀಡಿ ಸಿಬಿಎಫ್‌ಸಿ ಈ ದೃಶ್ಯಗಳಿಗೆ ಕತ್ತರಿ ಹಾಕಲು ಮುಂದಾಗಿತ್ತು. 2012ರಲ್ಲಿ ದಿ ಪಬ್ಲಿಕ್ ಸರ್ವಿಸ್ ಬ್ರಾಡ್‌ಕಾಸ್ಟಿಂಗ್ ಟ್ರಸ್ಟ್ (ಪಿಎಸ್‌ಬಿಟಿ) ನಿರ್ಮಿಸಿದ ʼದಿ ಸರೋಜ್ ಖಾನ್ ಸ್ಟೋರಿʼ ಎಂಬ ಸಾಕ್ಷ್ಯ ಚಿತ್ರದಲ್ಲಿ ಸರೋಜ್ ಖಾನ್ ಈ ಬಗ್ಗೆ ಮಾತನಾಡಿದ್ದಾರೆ. ನೃತ್ಯದ ಹೆಜ್ಜೆಗಳಲ್ಲಿ ಸಮಸ್ಯೆ ಇದೆ ಎಂದು ಸಿಬಿಎಫ್‌ಸಿ ಅಧಿಕಾರಿಗಳು ವಿವರಿಸಿದ್ದರಂತೆ. ಅದರಲ್ಲೂ ವಿಶೇಷವಾಗಿ ಮಾಧುರಿ ಕುಳಿತುಕೊಳ್ಳುವ ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರಂತೆ.
ಸರೋಜ್ ಖಾನ್ ಸಮಸ್ಯೆ ಬಗೆಹರಿಸಿದ್ದು ಹೇಗೆ?
“ಸಿಬಿಎಫ್‌ಸಿ ಅಧಿಕಾರಿಗಳು ಧಕ್ ಧಕ್ ಹಾಡಿನ ಪ್ರಮುಖ ಭಾಗವನ್ನೇ ಕತ್ತರಿಸಲು ಬಯಸಿದ್ದರು. ಇದರಿಂದ ನಿರ್ಮಾಪಕರು, ನಿರ್ದೇಶಕರು ಚಿಂತೆಯಲ್ಲಿದ್ದರು. ಅವರು ನಮಗೆ ಸಹಾಯ ಮಾಡಬಹುದೇ ಎಂದು ಮನವಿ ಮಾಡಿದರು. ಬಳಿಕ ನಾನು ಸಿಬಿಎಫ್‌ಸಿ ಅಧಿಕಾರಿಗಳಿಗೆ ಹಾಡಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ. ಪ್ರಾಕ್ಟಿಕಲ್ ಆಗಿ ವಿವರಿಸಿದೆʼʼ ಎಂದು ಸರೋಜ್ ಖಾನ್ ಅಂದಿನ ಘಟನೆ ಬಗ್ಗೆ ವಿವರಿಸಿದ್ದರು.
ಇದನ್ನೂ ಓದಿ: Shah Rukh Khan: ಅಪ್ಪನ ಜತೆ ತೆರೆ ಹಂಚಿಕೊಳ್ಳಲು ಸುಹಾನಾ ಖಾನ್ ರೆಡಿ; ಶಾರುಖ್ ಇದೀಗ ʻಕಿಂಗ್ʼ!
ʼʼಪರಿಶೀಲನೆಗೆ ಬಂದ ಅಧಿಕಾರಿಗಳ ಪೈಕಿ ಒಬ್ಬ ಮಹಿಳೆ ಇದ್ದರು. ಅವರು ಸೀರೆ ಮತ್ತು ಹೈ ಹೀಲ್ಸ್ ಧರಿಸಿದ್ದರು. ‘ನೀವು ಉದ್ದೇಶಪೂರ್ವಕವಾಗಿ ಎದೆ ಅಲ್ಲಾಡಿಸುತ್ತಿದ್ದೀರಿ. ಅದು ನಮಗೆ ಇಷ್ಟವಿಲ್ಲ’ ಎಂದು ಅವರು ಹೇಳಿದರು. ಬಳಿಕ ನಾನು ಅವರ ಬಳಿ ಸ್ವಲ್ಪ ದೂರ ನಡೆಯಲು ಹೇಳಿದೆ. ಅದರಂತೆ ಅವರು ವಾಕ್ ಮಾಡಿದರು. ಹೈ ಹೀಲ್ಸ್ ಧರಿಸಿದಾಗ ಸಹಜವಾಗಿ ನಿಮ್ಮ ಸೊಂಟ ಚಲಿಸುತ್ತದೆ. ನೀವು ಉದ್ದೇಶಪೂರ್ವಕವಾಗಿ ನಡುಗುತ್ತಿಲ್ಲ. ಬ್ಯಾಲೆನ್ಸ್ ಮಾಡುವಾಗ ಆ ರೀತಿ ಆಗುತ್ತದೆ. ಹೀಗಿರುವಾಗ ನೃತ್ಯ ಮಾಡುತ್ತಿದ್ದೇನೆ ಎಂದು ತೋರಿಸಲು ಮಾಧುರಿ ದೀಕ್ಷಿತ್ ದೇಹವನ್ನು ಅಲ್ಲಾಡಿಸುವುದು ತಪ್ಪೇ? ಆಗ ಮಾಧುರಿ ಪಾತ್ರ ʼಧಕ್ ಧಕ್ʼ ಎಂದು ಹೇಳುತ್ತಾರೆ. ಆ ಶಬ್ದ ಎಲ್ಲಿಂದ ಬರುತ್ತದೆ? ಹೃದಯದಿಂದ. ಹೃದಯ ಎಲ್ಲಿದೆ? ಎದೆಯ ಬಳಿ. ಆದ್ದರಿಂದ ಧಕ್ ಧಕ್ ಎನ್ನುವುದನ್ನು ಎದೆಯ ಮೂಲಕ ತೋರಿಸಬೇಕಾಗುತ್ತದೆ ಎಂದು ವಿವರಿಸಿದ ಮೇಲೆ ಅವರಿಗೆ ಮನವರಿಕೆಯಾಯಿತು. ಬಳಿಕ ಆ ಹಾಡಿಗೆ ಒಪ್ಪಿಗೆ ಸೂಚಿಸಿದರುʼʼ ಎಂದು ಸರೋಜ್ ಖಾನ್ ಮಾಹಿತಿ ಹಂಚಿಕೊಂಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ