Site icon Vistara News

SK Bhagavan: ಡಾ.ರಾಜ್ ಜತೆ ಎಸ್‌.ಕೆ. ಭಗವಾನ್‌ ನಂಟು: ನಿರ್ದೇಶಕರ ಸಿನಿ ಜರ್ನಿ ಹೇಗಿತ್ತು?

How was the SK Bhagavan director film journey

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್‌.ಕೆ. ಭಗವಾನ್‌ (SK Bhagavan) ಅವರು ನಿಧನರಾಗಿದ್ದಾರೆ. ಭಗವಾನ್ ಎಂದೇ ಪ್ರಸಿದ್ಧರಾಗಿರುವ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ನಿರ್ದೇಶಕ, ನಿರ್ಮಾಪಕ ಹಾಗೂ ನಟ. ನಿರ್ದೇಶಕ ದೊರೈರಾಜ್‌ ಜತೆಗೂಡಿ ಹಲವಾರು ಸೂಪರ್‌ ಹಿಟ್‌ ಚಿತ್ರಗಳನ್ನು ಇವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಇವರ ಜೋಡಿ ದೊರೈ- ಭಗವಾನ್‌ ಎಂದೇ ಹೆಸರಾಗಿತ್ತು. ನಿರ್ದೇಶಕ ದೊರೆ ಜತೆಗೆ ಸೇರಿಕೊಂಡು, 24 ಕಾದಂಬರಿಗಳನ್ನು ಸಿನಿಮಾ ಮಾಡಿದವರು, ರಾಜ್ ಕುಮಾರ್ ಅವರ 32 ಚಿತ್ರಗಳನ್ನು ನಿರ್ದೇಶಿಸಿದವರು ಭಗವಾನ್.

ಡಾ.ರಾಜ್ ಜತೆ ನಂಟು

ದೊರೈ-ಭಗವಾನ್ (dorai bhagavan) ಜೋಡಿಯ ಒಂದಾಗಿ ರಾಜಕುಮಾರ್ ನಾಯಕ ನಟನಾಗಿರುವ ’ಜೇಡರ ಬಲೆ’ ಸಿನಿಮಾ ಮಾಡಿ ಸೂಪರ್ ಸಕ್ಸಸ್ ಕಂಡರು.’ ಜೇಡರ ಬಲೆ ಸಿನಿಮಾ ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಮೊದಲ ಚಿತ್ರವಾಗಿತ್ತು. ರಾಜ್ ಹಾಗೂ ದೊರೈ-ಭಗವಾನ್ ಜೋಡಿ ಸಿನಿಮಾ ಸಕ್ಸಸ್ ಕಾಣುತ್ತಿದ್ದಂತೆ, ಮೂವರು ಜೊತೆಯಾಗಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸಬೆಳಕು’, ‘ಯಾರಿವನು’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾ ಮಾಡಿದ ಮೊದಲ ನಿರ್ದೇಶಕ

ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾ ಮಾಡಿದ ಮೊದಲ ನಿರ್ದೇಶಕ ಅಂದರೆ ಭಗವಾನ್‌. ದೊರೈ- ಭಗವಾನ್‌ ಜೋಡಿಯು ಕೆಲವು ಬ್ಲಾಕ್‌ಬಸ್ಟರ್ ಹಿಟ್ ಚಲನಚಿತ್ರಗಳನ್ನು ಮಾಡಲು ಒಟ್ಟಿಗೆ ಕೆಲಸ ಮಾಡಿದೆ. ಅವುಗಳಲ್ಲಿ ಕೆಲವು ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಾಳಿ ಮಾತು, ಹೊಸ ಬೆಳಕು ಮತ್ತು ಇನ್ನೂ ಅನೇಕ. ಈ ಎಲ್ಲಾ ಚಿತ್ರಗಳಲ್ಲಿ ರಾಜಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ನಾಗ್ ಮತ್ತು ಲಕ್ಷ್ಮಿ ಅವರಂತಹ ಇತರ ನಟರೊಂದಿಗೆ ಕೂಡ ಚಲನಚಿತ್ರವನ್ನು ನಿರ್ದೇಶಿಸಿದರು. 1968ರಲ್ಲಿ ಎಸ್‌ಕೆ ಭಗವಾನ್ ಮತ್ತು ದೊರೈರಾಜ್ ‌ʼಜೇಡರ ಬಲೆʼ ನಿರ್ದೇಶಿಸಿದರು.

ಆಂಗ್ಲ ಚಿತ್ರಗಳ ಸ್ಫೂರ್ತಿ

ಚಿತ್ರರಂಗ ಪ್ರವೇಶಿಸುವಾಗ ಎಸ್‌.ಕೆ. ಭಗವಾನ್‌ ಅವರಿಗೆ ಇಪ್ಪತ್ತು ವರ್ಷ. ‘ಭಾಗ್ಯದೇವತೆ’ ಅವರ ಮೊದಲ ಚಿತ್ರವಾಗಿತ್ತು. ಆಂಗ್ಲ ಚಿತ್ರಗಳ ಸ್ಫೂರ್ತಿ ಆ ಕಾಲದಲ್ಲೇ ಪಡೆಯುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಸ್ಫೂರ್ತಿ ಪಡೆಯುವುದು ಎಂದರೆ ಯಾವ ಪ್ರಮಾಣಕ್ಕೆ ಸೀಮಿತವಾಗಿರುತ್ತದೆ ಎನ್ನುವುದಕ್ಕೆ ಅವುಗಳನ್ನು ಉದಾಹರಣೆಯಾಗಿಯೂ ಹೇಳಿದ್ದರು. ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರ ನೋಡಿ ‘ಪ್ರತಿಧ್ವನಿ’ ಮಾಡಿದೆವು. ಆಲ್ ಫ್ರೆಡ್ ಹಿಚ್ ಕಾಕ್ ಸಿನಿಮಾ ನೋಡಿ ‘ಯಾರಿವನು’ ಮಾಡಿದೆವು. ಇರಾನ್ ಸಿನಿಮಾವೊಂದರ ಸ್ಫೂರ್ತಿಯಿಂದ ‘ವಸಂತಗೀತ’ ಮಾಡಿದ್ದೆವು ಎಂದು ಸ್ವತಃ ಭಗವಾನ್ ಅವರು ಹೇಳಿಕೊಂಡಿದ್ದರು.

ದೊರೈ- ಭಗವಾನ್‌ ಜೋಡಿ

ದೊರೈ ನಿಧನದ ನಂತರ ಎಸ್ ಕೆ ಭಗವಾನ್ ಬೆಳ್ಳಿತೆರೆಯಿಂದ ದೂರ

1994ರಲ್ಲಿ, ದೊರೈರಾಜ್ ನಿಧನರಾದಾಗ, ಎಸ್ ಕೆ ಭಗವಾನ್ ಬೆಳ್ಳಿತೆರೆಯಿಂದ ದೂರ ಉಳಿಯಲು ನಿರ್ಧರಿಸಿದರು. ಸುಮಾರು 49 ಚಿತ್ರಗಳನ್ನು ನಿರ್ದೇಶಿಸಿದ ಈ ಜೋಡಿಯ 32 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕನಟರಾಗಿ ನಟಿಸಿದ್ದು ವಿಶೇಷ. ಸಾಮಾಜಿಕ ಕಳಕಳಿ ಹೊಂದಿದ್ದ ಇವರು 24 ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳಿದ ನಂತರ `ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್’ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದು ರಾಜನ್-ನಾಗೇಂದ್ರ ಜೋಡಿ.

ಪ್ರಶಸ್ತಿಯ ಸುರಿಮಳೆ

ಎಸ್ ಕೆ ಭಗವಾನ್ ಅವರು 2017ರಲ್ಲಿ “ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ” ಗೆದ್ದಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಅಕಾಡೆಮಿಯು ಚಲನಚಿತ್ರ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ. ಈ ದೊರೈ-ಭಗವಾನ್ ಜೋಡಿಯು ಕರ್ನಾಟಕ ರಾಜ್ಯ ಸರ್ಕಾರದಿಂದ 1995-96 ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಮತ್ತು 2010 ರಲ್ಲಿ ಚೊಚ್ಚಲ ಡಾ. ರಾಜಕುಮಾರ್ ಸೌಹಾರ್ದ ಪ್ರಶಸ್ತಿಯನ್ನು ಸಹ ಪಡೆದಿದೆ.

Exit mobile version