ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ತಮ್ಮ ಪತ್ನಿ ಸುಸೇನ್ ಖಾನ್ಗೆ 2014ರಲ್ಲಿ ಡಿವೋರ್ಸ್ ನೀಡಿದ ಬಳಿಕ ನಟಿ ಸಬಾ ಆಜಾದ್ ಜತೆ ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಜೋಡಿ ಇದೇ ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿಯೂ ಚಾಲ್ತಿಯಲ್ಲಿದೆ. ಈ ಮಧ್ಯೆ ಈಗ ಹೃತಿಕ್ ರೋಷನ್ ಅವರು ದಿ ಬೆಸ್ಟ್ ಬಾಯ್ಫ್ರೆಂಡ್ ಅವಾರ್ಡ್ ಗೆಲ್ಲುವಂಥ ಕೆಲಸವೊಂದನ್ನು ಮಾಡಿದ್ದಾಗಿ ನೆಟ್ಟಿಗರು ಹೇಳುತ್ತಿದ್ದು, ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮುಂಬಯಿಯ ಬಾಂದ್ರಾ ಕುರ್ಲಾದಲ್ಲಿರುವ ಅಂತಾರಾಷ್ಟ್ರೀಯ ಜಿಯೋ ಸೆಂಟರ್ನ ಒಳಗೆ ನೂತನವಾಗಿ ನಿರ್ಮಾಣವಾಗಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕಲಾಕೇಂದ್ರದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಅದರಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಸೈಫ್ ಅಲಿ ಖಾನ್, ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ, ಅವರ ಪತಿ ನಿಕ್ ಜೋನಾಸ್, ಹೃತಿಕ್ ರೋಷನ್, ಸಬಾ ಆಜಾದ್ ಸೇರಿ ಹಲವು ಬಾಲಿವುಡ್ ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ಸಬಾ ಆಜಾದ್ ಕೆಂಪು ಬಣ್ಣದ ಕಸ್ಟಮ್ ಮೇಡ್ ಸೀರೆಯನ್ನು ಉಟ್ಟಿದ್ದು, ಇದನ್ನು ವಿನ್ಯಾಸ ಮಾಡಿದ್ದು, ಡಿಸೈನರ್ ಅಮಿತ್ ಅಗರ್ವಾಲ್.
ಈಗ ಅಮಿತ್ ಅಗರ್ವಾಲ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಸಬಾ ಆಜಾದ್ ಅವರು ತಾವು ವಿನ್ಯಾಸ ಮಾಡಿದ ಸೀರೆಯನ್ನುಟ್ಟು ಪೋಸ್ ಕೊಟ್ಟಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋದಲ್ಲಿ ಸಬಾ ಆಜಾದ್ ಅವರು ಅಮಿತ್ ಅಗರ್ವಾಲ್ ಜತೆಗೇ ಪೋಸ್ ಕೊಟ್ಟಿದ್ದಾರೆ. ಆ ಫೋಟೋವನ್ನು ನೀವು ಸೂಕ್ಷ್ಮವಾಗಿ ನೋಡಿದರೆ, ಅಲ್ಲೇ ಹಿಂಭಾಗದಲ್ಲಿ ಹೃತಿಕ್ ರೋಷನ್ ಕಾಣಿಸುತ್ತಾರೆ ಮತ್ತು ಅವರ ಕೈಯಲ್ಲಿ ಸಬಾ ಆಜಾದ್ ಅವರ ‘ಹೈ ಹೀಲ್ಸ್’ಚಪ್ಪಲಿಯನ್ನು ನೋಡಬಹುದು. ಹಿಂಭಾಗ ಎತ್ತರ ಇರುವ ಚಪ್ಪಲಿ (ಹೈಹೀಲ್ಸ್) ಧರಿಸಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕಲಾ ಕೇಂದ್ರದ ಉದ್ಘಾಟನೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸಬಾಗೆ ಬರುಬರುತ್ತ ಕಾಲು ಪಾದ ಊದಿಕೊಂಡು, ನೋಯಲು ಶುರುವಾಯಿತು. ಹೀಗಾಗಿ ಅದನ್ನು ತೆಗೆದಿದ್ದಾರೆ. ಇಡೀ ಪಾರ್ಟಿಯಲ್ಲಿ ಆ ಹೈಹೀಲ್ಸ್ ಚಪ್ಪಲಿಯನ್ನು ಹೃತಿಕ್ ರೋಷನ್ ಅವರೇ ಹಿಡಿದಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: Hrithik Roshan | 6 ಪ್ಯಾಕ್ ಲುಕ್‌ನಲ್ಲಿ ವರ್ಷದ ಮೊದಲ ಫೋಟೊ ಹಂಚಿಕೊಂಡ ಹೃತಿಕ್ ರೋಷನ್
ನೆಟ್ಟಿಗರು ಈ ಫೋಟೋ ನೋಡಿ ವಿವಿಧ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ‘ದಿ ಬೆಸ್ಟ್ ಬಾಯ್ಫ್ರೆಂಡ್ ಎಂಬ ಪ್ರಶಸ್ತಿ ಇದ್ದರೆ ಅದು ಹೃತಿಕ್ ರೋಷನ್ಗೇ ಸೇರಬೇಕು ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬ ಯುವತಿ ‘ನಂಗೂ ಇಂಥ ಬಾಯ್ಫ್ರೆಂಡ್ ಬೇಕು’ ಎಂದಿದ್ದಾಳೆ. ಹಾಗೇ, ಮತ್ತೊಬ್ಬರು ಕಮೆಂಟ್ ಮಾಡಿ, ‘ಹಿಂದೊಮ್ಮೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆಯೊಂದಕ್ಕೆ ಹೋಗಿದ್ದಾಗ, ರಣವೀರ್ ಸಿಂಗ್ ಕೂಡ ದೀಪಿಕಾರ ಚಪ್ಪಲಿ ಕೈಯಲ್ಲಿ ಹಿಡಿದುಕೊಂಡಿದ್ದರು’ ಎಂದು ಹೇಳಿದ್ದಾರೆ. ‘ಹೃತಿಕ್ ರೋಷನ್ ಹಿಡಿದುಕೊಂಡಿದ್ದು ಸಬಾ ಅವರ ಚಪ್ಪಲಿಯನ್ನೇ ಎಂದು ಹೇಳಲಾಗುವುದಿಲ್ಲ, ಬಹುಶಃ ಯಾರದ್ದನ್ನೋ ಕದ್ದಿರಬಹುದು’ ಎಂದು ನೆಟ್ಟಿಗರೊಬ್ಬರು ಜೋಕ್ ಕೂಡ ಮಾಡಿದ್ದಾರೆ.