Site icon Vistara News

ನಾನು ಸತ್ತಿಲ್ಲ, ಆಸ್ತಿಗಾಗಿ ನನ್ನ ಮಗ ನನ್ನನ್ನು ಕೊಂದಿಲ್ಲ; ಹಿರಿಯ ನಟಿಯಿಂದ ಸ್ಪಷ್ಟನೆ, ಪೊಲೀಸರಿಗೆ ದೂರು

I am Not killed By My son Says Veena Kapoor

ಮುಂಬಯಿ: ಹಲವು ಹಿಂದಿ ಧಾರಾವಾಹಿ-ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ವೀಣಾ ಕಪೂರ್​ರನ್ನು ಅವರ ಪುತ್ರ ಸಚಿನ್​ ಕಪೂರ್​ ಹತ್ಯೆ ಮಾಡಿದ್ದಾನೆ ಎಂಬ ಸುದ್ದಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬಹುತೇಕ ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದರೆ ವಾಸ್ತವದಲ್ಲಿ ಆ ಸುದ್ದಿ ಸುಳ್ಳು ಎಂದು ಖಚಿತವಾಗಿದೆ. ‘ನಾನು ಸತ್ತಿಲ್ಲ, ನನ್ನ ಮಗ ನನ್ನನ್ನು ಕೊಂದಿಲ್ಲ’ ಎಂದು ನಟಿ ವೀಣಾ ಕಪೂರ್ ಅವರೇ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಮುಂಬಯಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವೀಣಾ ಕಪೂರ್​ ‘ನನ್ನನ್ನು ನನ್ನ ಪುತ್ರನೇ ಆಸ್ತಿಗಾಗಿ ಕೊಂದಿದ್ದಾನೆ ಎಂಬುದು ಸುಳ್ಳುಸುದ್ದಿ. ನಿಜ ಹೇಳಬೇಕೆಂದರೆ, ಹೀಗೆ ಕೊಲೆಯಾಗಿದ್ದು ಜುಹುವಿನಲ್ಲಿ. ಆಕೆಯ ಹೆಸರೂ ವೀಣಾ ಕಪೂರ್​. ಆದರೆ ನಾನು ಕೊಲೆಯಾಗಿದ್ದೇನೆ ಎಂದು ದೇಶಾದ್ಯಂತ ಸುದ್ದಿಯಾಯಿತು. ನಾನು ಆರಾಮಾಗಿದ್ದೇನೆ ಮತ್ತು ಗೋರೆಗಾಂವ್​​ನಲ್ಲಿ ಪುತ್ರನೊಂದಿಗೇ ಇದ್ದೇನೆ. ನಾನು ಸತ್ತೇ ಹೋಗಿದ್ದೇನೆ ಎಂದು ಭಾವಿಸಿರುವ ಜನರಿಗೆ ಈ ಸಂದೇಶ ಕೊಡಲು ಬಯಸುತ್ತೇನೆ. ನಾನು ಬದುಕಿದ್ದೇನೆ. ಫೇಕ್​​ನ್ಯೂಸ್​ಗಳನ್ನು ನಂಬಬೇಡಿ. ನಾನು ನನ್ನ ಪುತ್ರನಿಂದ ಹತ್ಯೆಗೀಡಾದೆ ಎಂಬ ಸುದ್ದಿ ನೋಡಿ ನನಗೇ ನೋವಾಯಿತು. ಪೊಲೀಸ್​ ಠಾಣೆಗೆ ಹೋಗಿ ದೂರು ದಾಖಲು ಮಾಡಿದ್ದೇವೆ. ಇಂಥ ಫೇಕ್​ನ್ಯೂಸ್ ಹಬ್ಬಿಸಿದವರ ವಿರುದ್ಧ ಅವರೇ ಕ್ರಮ ಕೈಗೊಳ್ಳುತ್ತಾರೆ. ಮುಂಬಯಿ ಪೊಲೀಸರು ನಮಗೆ ನೀಡುತ್ತಿರುವ ಸಹಕಾರಕ್ಕೆ ನಾನು ಕೃತಜ್ಞಳು’ ಎಂದಿದ್ದಾರೆ.

‘ಅದ್ಯಾವುದೋ ಬೇರೆ ವೀಣಾ ಕಪೂರ್​ ಕೊಲೆಯಾದ ಸುದ್ದಿಗೆ ನನ್ನ ಫೋಟೋ ಹಾಕಿ ಇಲ್ಲದ ರೂಮರ್ಸ್​ ಹಬ್ಬಿಸಿದ್ದಾರೆ. ನಾವೀಗ ಈ ಬಗ್ಗೆ ಪೊಲೀಸರಿಗೆ ದೂರು ನೀಡದೆ ಇದ್ದರೆ, ಮತ್ತೊಮ್ಮೆ ಇದೇ ರೀತಿಯ ಸುದ್ದಿ ಹರಡುತ್ತದೆ. ನಾನು ನನ್ನ ಮಗನಿಂದಲೇ ಹತ್ಯೆಗೀಡಾದೆ ಎಂಬ ಸುದ್ದಿ ನೋಡಿ ಅನೇಕರು ನಮ್ಮ ಮನೆಗೆ ಕರೆ ಮಾಡಿದ್ದಾರೆ. ನನ್ನ ಮೊಬೈಲ್​, ಮಗನ ಮೊಬೈಲ್​​ಗಳಿಗೆ ನಿರಂತರವಾಗಿ ಕಾಲ್​ ಬಂದಿದೆ. ಅವರಿಗೆಲ್ಲ ಉತ್ತರಿಸಿ ಸಾಕಾಯಿತು. ಮಾನಸಿಕವಾಗಿ ತುಂಬ ಹಿಂಸೆಗೆ ಒಳಪಟ್ಟಿದ್ದೇವೆ’ ಎಂದೂ ವೀಣಾ ಕಪೂರ್​ ಹೇಳಿದ್ದಾರೆ.

ವೀಣಾ ಕಪೂರ್​ಗೆ 73 ವರ್ಷ ವಯಸ್ಸಾಗಿದೆ. ವೀಣಾ ಕಪೂರ್ ಮತ್ತು ಅವರ ಪುತ್ರ ಸಚಿನ್​ ಕಪೂರ್​ ನಡುವೆ 12 ಕೋಟಿ ರೂ.ಮೌಲ್ಯದ ಫ್ಲ್ಯಾಟ್​​ಗಾಗಿ ವಿವಾದ ಆಗಿತ್ತು. ಜಗಳ ಉತ್ತುಂಗಕ್ಕೇರಿ ಸಚಿನ್​ ತನ್ನಮ್ಮ ವೀಣಾರನ್ನು ಕೊಂದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಸತ್ತಿದ್ದು ನಟಿ ವೀಣಾ ಕಪೂರ್​ ಅಲ್ಲ ಎಂಬುದು ದೃಢಪಟ್ಟಿದೆ. ಈ ಪ್ರಮಾದ ಎಸಗಿದವರ ಪತ್ತೆಗಾಗಿ ದಿಂಡೋಶಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Stars Fashion | ನೈಕಾ ಬ್ಯೂಟಿ ಅವಾರ್ಡ್‌ನಲ್ಲಿ ಬಾಲಿವುಡ್‌ ತಾರೆಯರು ಹೇಗೆಲ್ಲ ಮಿನುಗಿದರು!

Exit mobile version