ಮುಂಬೈ: ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ಜಾಲತಾಣ ಐಎಂಡಿಬಿ(IMDb’s list) 2023ರ ಅತ್ಯಂತ ಜನಪ್ರಿಯ 10 ಭಾರತೀಯ ಸಿನಿಮಾ ತಾರೆಯರ ಹೆಸರನ್ನು ಘೋಷಿಸಿದೆ. ವೀಕ್ಷಣೆಯನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಶೇಷ ಎಂದರೆ ದಕ್ಷಿಣ ಭಾರತದ ತಾರೆಯರು ಕೂಡ ಈ ಪಟ್ಟಿಯಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನಂಬರ್ 1 ಎನಿಸಿಕೊಂಡಿದ್ದಾರೆ.
ಟಾಪ್ 10 ಪಟ್ಟಿ
ಶಾರುಖ್ ಖಾನ್: ಸತತ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಈ ವರ್ಷ ಭರ್ಜರಿಯಾಗಿಯೇ ಕಮ್ ಬ್ಯಾಕ್ ಮಾಡಿದ್ದಾರೆ. ವರ್ಷಾರಂಭದಲ್ಲಿ ತೆರೆಕಂಡ ʼಪಠಾಣ್ʼ ಮತ್ತು ಇತ್ತೀಚೆಗೆ ಬಿಡುಗಡೆಗೊಂಡ ʼಜವಾನ್ʼ ಚಿತ್ರಗಳು ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ. ಬಾಕ್ಸ್ ಆಫೀಸ್‌ನಲ್ಲಿ ಎರಡೂ ಚಿತ್ರಗಳು 1 ಸಾವಿರ ಕೋಟಿ ರೂ.ಗೂ ಮಿಕ್ಕಿ ಕಲೆಕ್ಷನ್ ಮಾಡಿವೆ.
ಆಲಿಯಾ ಭಟ್: ಈ ವರ್ಷ ಹಾಲಿವುಡ್‌ಗೂ ಕಾಲಿಟ್ಟ ಆಲಿಯಾ ಭಟ್ ಸತತ ಎರಡನೇ ವರ್ಷ ನಂಬರ್ 2 ಸ್ಥಾನದಲ್ಲಿದ್ದಾರೆ. ಈ ವರ್ಷ ಆಲಿಯಾ ಭಟ್ ಅಭಿನಯದ ಹಿಂದಿ ಚಿತ್ರ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಮತ್ತು ಹಾಲಿವುಡ್‌ನ ʼಹಾರ್ಟ್ ಆಫ್ ಸ್ಟೋನ್ʼ ಬಿಡುಗಡೆಯಾಗಿತ್ತು. ಅವರು ಈ ವರ್ಷದ ಆರಂಭದಲ್ಲಿ ಮೆಟ್ ಗಾಲಾಕ್ಕೆ ಪದಾರ್ಪಣೆ ಮಾಡಿದ್ದರು.
ದೀಪಿಕಾ ಪಡುಕೋಣೆ: ಕನ್ನಡತಿ ದೀಪಿಕಾ ಪಡುಕೋಣೆ ಐಎಂಡಿಬಿ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದ್ದಾರೆ. ದೀಪಿಕಾ ಈ ವರ್ಷ ಶಾರುಖ್ ಖಾನ್ ಜತೆ ತೆರೆ ಹಂಚಿಕೊಂಡ ʼಪಠಾಣ್ʼ ಮತ್ತು ʼಜವಾನ್ʼ ಚಿತ್ರಗಳು ತೆರೆಕಂಡಿವೆ. ʼಪಠಾಣ್ʼ ರಿಲೀಸ್‌ಗೂ ಮುನ್ನ ದೀಪಿಕಾ ತೊಟ್ಟ ಬಟ್ಟೆ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿತ್ತು. ʼಜವಾನ್ʼ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರೂ ಪ್ರೇಕ್ಷಕರ ಗಮನ ಸೆಳೆದಿದ್ದರು. ಪತಿ ರಣವೀರ್ ಸಿಂಗ್ ಜತೆ ಇತ್ತೀಚೆಗೆ ಕಾಫಿ ವಿತ್ ಕರಣ್ ಶೋದಲ್ಲಿ ಭಾಗವಹಿಸಿದ್ದರು. ಇದು ಕೂಡ ಸಾಕಷ್ಟು ಸುದ್ದಿಯಾಗಿತ್ತು.
ವಾಮಿಕಾ ಗಬ್ಬಿ: 4ನೇ ರ‍್ಯಾಂಕ್ ಪಡೆದುಕೊಂಡಿರುವ ಇವರು ಮೊದಲ ಬಾರಿಗೆ ಐಎಂಡಿಬಿಯ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ, ಪಂಜಾಬಿ ಚಿತ್ರಗಳು ಮಾತ್ರವಲ್ಲದೆ ದಕ್ಷಿಣ ಭಾರತೀಯ ಸಿನಿಮಾಗಳಲ್ಲೂ ವಾಮಿಕಾ ಗಬ್ಬಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ವಿಶಾಲ್ ಭಾರದ್ವಾಜ್ ಅವರ ಸ್ಪೈ ಥ್ರಿಲ್ಲರ್ ʼಖುಫಿಯಾʼ, ವಿಕ್ರಮಾದಿತ್ಯ ಮೋಟ್ವಾನೆ ಅವರ ʼಜುಬಿಲಿʼ, ʼಮಾಡರ್ನ್ ಲವ್ ಚೆನ್ನೈʼ ಮತ್ತು ಪಂಜಾಬಿ ಚಲನಚಿತ್ರ ʼಕಾಲಿ ಜೋಟ್ಟʼ ಮುಂತಾದ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದರು.
ನಯನತಾರಾ: ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಈ ವರ್ಷ ಭರ್ಜರಿಯಾಗಿ ಬಾಲಿವುಡ್ ಪ್ರವೇಶಿಸಿದ್ದಾರೆ. ʼಜವಾನ್ʼ ಚಿತ್ರ ಸೂಪರ್ ಹಿಟ್ ಆಗಿದೆ. ಜತೆಗೆ ತಮಿಳಿನ ʼಇರೈವನ್ʼ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಈ ವರ್ಷ ತಮ್ಮದೇ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.
ತಮನ್ನಾ ಭಾಟಿಯಾ: ಬಾಲಿವುಡ್ ಜತೆಗೆ ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ಮಿಂಚುತ್ತಿರುವ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಈ ವರ್ಷ ತಮ್ಮ ಬಾಯ್ ಫ್ರೆಂಡ್ ವಿಜಯ್ ವರ್ಮಾ ವಿಚಾರದಲ್ಲೂ ಸದ್ದು ಮಾಡಿದರು. ಜತೆಗೆ ವೆಬ್ ಸೀರಿಸ್‌ಗಳಲ್ಲಿ ಬೋಲ್ಡಾಗಿ ಕಾಣಿಸಿಕೊಂಡರು. ʼಜೀ ಕರ್ದಾʼ, ʼಲಸ್ಟ್ ಸ್ಟೋರಿಸ್ 2ʼ, ʼಜೈಲರ್ʼ, ʼಭೋಲಾ ಶಂಕರ್ʼ, ʼಆಖ್ರಿ ಸಚ್ʼ, ʼಬಂದ್ರಾʼ ಮತ್ತಿತರ ಸಿನಿಮಾ, ವೆಬ್ ಸೀರಿಸ್‌ಗಳು ಈ ವರ್ಷ ತೆರೆಕಂಡಿವೆ.
ಇದನ್ನೂ ಓದಿ: Shah Rukh Khan: ʼಡಂಕಿʼ ಸಿನಿಮಾದ ಮೊದಲ ಹಾಡು ಎಂಟ್ರಿಗೆ ಡೇಟ್ ಫಿಕ್ಸ್!
ಕರೀನಾ ಕಪೂರ್ ಖಾನ್: ಬಾಲಿವುಡ್‌ನ ಯಶಸ್ವಿ ನಾಯಕಿಯರಲ್ಲಿ ಒಬ್ಬರೆನಿಕೊಂಡ ಕರೀನಾ ಕಪೂರ್ 7ನೇ ಸ್ಥಾನ ಪಡೆದುಕೊಂಡಿದ್ದಾರೆ. ಚಿತ್ರರಂಗ ಪ್ರವೇಶಿಸಿ 20 ವರ್ಷ ಕಳೆದದಿದ್ದರೂ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ. ಈ ವರ್ಷ ಕರೀನಾ ನಟನೆಯ ʼಜಾನೇ ಜಾನ್ʼ ಚಿತ್ರ ತೆರೆಕಂಡಿದೆ.
ಶೋಭಿತಾ ಧೂಲಿಪಲ: ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ʼಪೊನ್ನಿಯಿನ್ ಸೆಲ್ವಂʼ ಸರಣಿ ಚಿತ್ರಗಳ ಮೂಲಕ ಶೋಭಿತಾ ಗಮನ ಸೆಳೆದಿದ್ದಾರೆ. ಈ ವರ್ಷ ಇವರು ಅಭಿನಯಿಸಿದ ʼಪೊನ್ನಿಯಿನ್ ಸೆಲ್ವಂ 2ʼ, ʼದಿ ನೈಟ್ ಮ್ಯಾನೇಜರ್ʼ, ʼಮೇಡ್ ಇನ್ ಹೆವೆನ್ ಸೀಸನ್ 2ʼ ತೆರೆಕಂಡಿವೆ.
ಅಕ್ಷಯ್ ಕುಮಾರ್: ಬಾಲಿವುಡ್‌ನ ಮತ್ತೊಬ್ಬ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ 9ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಅಕ್ಷಯ್ ಅಭಿನಯದ ʼಸೆಲ್ಫಿʼ, ʼಓಎಂಜಿ 2ʼ, ʼಮಿಷನ್ ರಾಣಿಗಂಜ್ʼ ಚಿತ್ರಗಳು ತೆರೆಕಂಡಿವೆ. ಅಕ್ಷಯ್ ಕುಮಾರ್ ಚಿತ್ರಗಳಿಗೆ ಈ ವರ್ಷ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ.
ವಿಜಯ್ ಸೇತುಪತಿ: ಈ ವರ್ಷ ಅವರು ಎರಡು ಪದಾರ್ಪಣೆ ಮಾಡಿದರು. ಇವರ ಮೊದಲ ಹಿಂದಿ ಚಿತ್ರ ʼಜವಾನ್ʼ ಮತ್ತು ಅವರ ಮೊದಲ ಭಾರತೀಯ ವೆಬ್ ಸರಣಿ ಫರ್ಜಿ. ಅಲ್ಲದೆ ತಮಿಳು ಚಿತ್ರಗಳಲ್ಲಿಯೂ ಕಾಣಿಸಿಕೊಂಡರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ