Site icon Vistara News

Vishnuvardhan: ಭಾನುವಾರ ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ; ಸರ್ಕಾರದ ನಡೆಗೆ ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ಬೇಸರ

Vishnuvardhan smaraka

ಬೆಂಗಳೂರು: ಸತತ ಹದಿಮೂರು ವರ್ಷಗಳ ನಂತರ ಡಾ.ವಿಷ್ಣುವರ್ಧನ್ (Vishnuvardhan) ಸ್ಮಾರಕ ಉದ್ಘಾಟನೆಯಾಗುತ್ತಿದೆ. ಅಸಂಖ್ಯ ಅಭಿಮಾನಿಗಳು ಹಾಗೂ ಕುಟುಂಬದ ಬಹು ದೊಡ್ಡ ಕನಸಾಗಿದ್ದ ವಿಷ್ಣು ಸ್ಮಾರಕ ಭಾನುವಾರ ಜನವರಿ 29 ಲೋಕಾರ್ಪಣೆಯಾಗುತ್ತಿದೆ. ಈ ಬಗ್ಗೆ ವಿಷ್ಣು ಅಭಿಮಾನಿಗಳ ಪರವಾಗಿ ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ಒಂದಿಷ್ಟು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ʻʻಡಾ ವಿಷ್ಣುವರ್ಧನ್ ಸ್ಮಾರಕ 13 ವರ್ಷಗಳ ನಂತರ ಲೋಕಾರ್ಪಣೆ ಆಗುತ್ತಿದೆ. ಸ್ಮಾರಕಕ್ಕಾಗಿ ನಮ್ಮ ಹೋರಾಟ, ನೋವು, ಕಾಯುವಿಕೆ ಲೆಕ್ಕಕ್ಕೆ ಇಡದಷ್ಟು. ಕುಟುಂಬದವರು ಇದಕ್ಕಾಗಿ ಸಾಕಷ್ಟು ಹೋರಾಟ ನಡೆಸಿ ಅವರಿಂದಾಗಿಯೇ ಸ್ಮಾರಕ ಮೈಸೂರಿನಲ್ಲಿ ಆಗಿದೆ. ಕಾರ್ಯಕ್ರಮಕ್ಕೆ ಮುಖ್ಯಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಾರೆ. ಚಿತ್ರರಂಗದವರನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕೆಲಸ ನಡೆಯುತ್ತಿದೆ. ಸುದೀಪ್ ಅವರು ಫೆಬ್ರವರಿಯಲ್ಲಿ ಸ್ಮಾರಕಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಯಶ್ ಅವರಿಗೆ ಆಹ್ವಾನ ನೀಡಬೇಕಿದೆʼʼ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: Actor Vishnuvardhan | ʻಕೋಟಿಗೊಬ್ಬʼ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್

Vishnuvardhan

ʻʻಚಿತ್ರರಂಗದ ಮೇರು ನಟ, ಪಂಚಭಾಷೆ ತಾರೆಯಾಗಿದ್ದ ವಿಷ್ಣು ಸ್ಮಾರಕ ಉದ್ಘಾಟನೆಗೆ ಅವರ ಗೆಳೆಯರಾದ ಅಕ್ಷಯ್ ಕುಮಾರ್, ಚಿರಂಜೀವಿ, ಮೋಹನ್ ಲಾಲ್, ರಜನಿಕಾಂತ್ ಸೇರಿದಂತೆ ಹಲವರನ್ನು ಸರ್ಕಾರ ಆಹ್ವಾನಿಸುತ್ತದೆ ಎಂದು ಅಂದುಕೊಂಡಿದ್ದೆವು. ಆದರೆ ಆ ಕೆಲಸ ಆಗಿಲ್ಲ. ಅಭಿಮಾನಿಗಳಾಗಿ ನಮಗೆ ಇದು ಬೇಸರ ತರಿಸಿದೆ. ಬೇರೆ ನಟರ ಕಾರ್ಯಕ್ರಮಗಳಿಗೆ ನೀಡುವ ಮನ್ನಣೆಯನ್ನು ಸರ್ಕಾರ ವಿಷ್ಣು ಸರ್ ಸ್ಮಾರಕ ಉದ್ಘಾಟನೆ ವಿಚಾರದಲ್ಲಿ ನೀಡುತ್ತಿಲ್ಲʼʼ.

ʻʻಚಿತ್ರರಂಗದ ಹಿರಿಯ, ಕಿರಿಯ ಹಾಗೂ ಸ್ಟಾರ್ ನಟರುಗಳು ಸ್ಮಾರಕದ ಕುರಿತಾಗಿ ಮಾತನಾಡುತ್ತಿಲ್ಲ. ಸ್ಮಾರಕ ಉದ್ಘಾಟನೆ ವೇಳೆ ಸರ್ಕಾರ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು. ಜತೆಗೆ ಅವರ ಪುಣ್ಯಭೂಮಿ ಅಭಿವೃದ್ದಿಗೆ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿʼʼ ವೀರಕಪುತ್ರ ಶ್ರೀನಿವಾಸ್ ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: Vishnuvardhan | ಬಾಲಣ್ಣ ಕುಟುಂಬಸ್ಥರು ಅವಮಾನ ಮಾಡಿದ್ದಾರೆ: ನಟ ಅನಿರುದ್ಧ

ಸ್ಮಾರಕ ಉದ್ಘಾಟನೆಯಾಗುವ ದಿನ ಮೈಸೂರಿನಿಂದ ಸ್ಮಾರಕದ ವರೆಗೆ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿಸಬೇಕು. ಬೆಂಗಳೂರಿನಿಂದ ಸ್ಮಾರಕದವರೆಗೆ 700 ವಾಹನಗಳ ಬೃಹತ್ ಜಾಥ ಹಮ್ಮಿಕೊಂಡಿರುವುದರಿಂದ ಅಭಿಮಾನಿಗಳಿಗೆ ಅನುಕೂಲವಾಗುವಂತೆ ಅಗತ್ಯವಿದ್ದ ಕಡೆ ಟ್ರಾಫಿಕ್ ಕ್ಲಿಯರೆನ್ಸ್ ಗೆ ಆದೇಶಿಸಬೇಕು ಎಂದು ಹಲವು ಬೇಡಿಕೆಯನ್ನು ವಿಷ್ಣು ಅಭಿಮಾನಿಗಳ ಪರವಾಗಿ ವೀರಕಪುತ್ರ ಶ್ರೀನಿವಾಸ್ ಸರ್ಕಾರದ ಮುಂದಿಟ್ಟಿದ್ದಾರೆ.

Exit mobile version