ನಾಳೆ (ಆಗಸ್ಟ್15) 77ನೇ ಸ್ವಾತಂತ್ರ್ಯ ದಿನದ (Independence Day 2023) ಆಚರಣೆ. ದೇಶದ ಪ್ರತಿ ನಾಗರಿಕರೂ ತಮ್ಮದೇ ಆದ ರೀತಿಯಲ್ಲಿ ನಮ್ಮ ದೇಶದ ಸಾರ್ವಭೌಮತೆ, ಸ್ವಾತಂತ್ರ್ಯ, ಹಿರಿಮೆಗಳಿಗೆ ಗೌರವ ಸಲ್ಲಿಸುವ ದಿನ. ಕನ್ನಡ ಚಿತ್ರರಂಗ ದೇಶ ಭಕ್ತಿ ಸಾರುವ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ದೇಶ ಪ್ರೇಮ ಸಾರುವ ಹಾಡುಗಳನ್ನು ರಚಿಸಿವೆ. ದೇಶಪ್ರೇಮ ಮೆರೆವ ಕೆಲವು ಕನ್ನಡ ಚಿತ್ರಗಳು ಇಲ್ಲಿವೆ!
ಮುತ್ತಿನಹಾರ
ಮುತ್ತಿನ ಹಾರ ವೀರ ಯೋಧರ ಬದುಕಿನ ಕುರಿತಾದ ಚಲನಚಿತ್ರ. 1990ರಲ್ಲಿ ರೂಪುಗೊಂಡ ಚಲನಚಿತ್ರದ ಗೀತೆಗಳು ಬಹಳ ಜನಪ್ರಿಯವಾಗಿದ್ದವು. ಕೊಡಗಿನ ಹಿನ್ನೆಲೆಯಲ್ಲಿ ಸಾಗುವ ಚಲನಚಿತ್ರಕ್ಕೆ 1990-91 ರಲ್ಲಿ ರಾಷ್ಟ್ರೀಯ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪುರಸ್ಕಾರ ಲಭಿಸಿತ್ತು. ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡುವ ಕೊಡಗಿನ ವೀರ ಯೋಧನ ಕಥೆ ಇದಾಗಿದೆ. ಈ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನವಿದೆ. ರಾಜ್ಯ ಸರಕಾರದ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಈ ಸಿನಿಮಾಗೆ ಲಭಿಸಿತ್ತು. ಡಾ ವಿಷ್ಣುವರ್ಧನ್, ಸುಹಾಸಿನಿ, ಅಶ್ವತ್ಥ್ ಹಾಗೂ ಮಾಸ್ಟರ್ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ಇದನ್ನೂ ಓದಿ: Independence Day 2023: ಈ ಸಂದೇಶಗಳ ಮೂಲಕ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಉಲ್ಲಾಸ ತುಂಬಿ!
ಕಿತ್ತೂರು ರಾಣಿ ಚೆನ್ನಮ್ಮ
1961ರಲ್ಲಿ ತೆರೆಗೆ ಬಂದಿದ್ದ ಕಿತ್ತೂರು ರಾಣಿ ಚೆನ್ನಮ್ಮ ಬಿ ಆರ್ ಪಂತುಲು ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ಬಿ ಸರೋಜಾ ದೇವಿ ನಟಿಸಿದರೆ, ಮುಖ್ಯ ಭೂಮಿಕೆಯಲ್ಲಿ ರಾಜ್‌ಕುಮಾರ್, ಲೀಲಾವತಿ, ಎಂ ವಿ ರಾಜಮ್ಮ ಹಾಗೂ ನರಸಿಂಹ ರಾಜು ಸೇರಿದಂತೆ ಇನ್ನೂ ಹಲವರು ನಟಿಸಿದ್ದರು.
ವೀರಪ್ಪ ನಾಯಕ
ಎಸ್.ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಶೃತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹೇಮಾ ಚೌಧರಿ, ಸುಧೀರ್, ಶೋಭರಾಜ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದರು. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಗಾಂಧಿವಾದಿ ನಾಯಕನ ಜೀವನವನ್ನು ಚಿತ್ರ ಹೇಳುತ್ತದೆ. ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗ್ರಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಟಟ ದೇಶಾಭಿಮಾನಿಯ ಕಥೆ ಈ ಚಿತ್ರದಲ್ಲಿದೆ.
ಇದನ್ನೂ ಓದಿ: Independence Day 2023: ಅಣ್ಣ ಉಗ್ರನಾದರೇನು ತಮ್ಮ ದೇಶಭಕ್ತ; ಕಾಶ್ಮೀರದಲ್ಲಿ ತಿರಂಗಾ ಬೀಸಿದ ಉಗ್ರನ ತಮ್ಮ!
ಹಗಲುವೇಷ
ಬರಗೂರು ರಾಮಚಂದ್ರಪ್ಪ ನಿರ್ದೇಶನದ `ಹಗಲುವೇಷ’ ಚಿತ್ರವು ಬ್ರಿಟಿಷ್ ಆಳ್ವಿಕೆ ವಿರುದ್ಧ ದಂಗೆಯೇಳುವ ಸ್ವಾತಂತ್ರ ಹೋರಾಟಗಾರನ ಕಥೆ ಹೊಂದಿದೆ. ಸೆಂಚುರಿ ಸ್ಟಾರ್ ಶಿವಣ್ಣ ಮುಖ್ಯಪಾತ್ರದಲ್ಲಿರುವ ಈ ಚಿತ್ರದಲ್ಲಿ ರೇಷ್ಮಾ,ತಾರಾ ನಾಸ್ಸರ್,ಜೈ ಜಗದೀಶ್ ಮುಂತಾದವರು ನಟಿಸಿದ್ದಾರೆ.
ಎಕೆ 47
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 50 ನೇ ಚಿತ್ರವಾದ ಎಕೆ 47′ ಚಿತ್ರವನ್ನು ನಿರ್ದೇಶಕ ಓಂ ಪ್ರಕಾಶರಾವ್ ನಿರ್ದೇಶಿಸಿದ್ದಾರೆ. ನಿರ್ಮಾಪಕ ರಾಮು ಮತ್ತು ಶಿವಣ್ಣ ಹಿಂದಿನ ಚಿತ್ರಸಿಂಹದ ಮರಿ’ ಚಿತ್ರಕ್ಕಿಂತ ಅದ್ಭುತ ಪ್ರತಿಕ್ರಿಯೆ ಈ ಚಿತ್ರಕ್ಕೆ ಸಿಕ್ಕಿತು. 2 ಕೋಟಿ ರೂ. ಗಳಿಕೆ ಕಂಡ ಮತ್ತು ಡಿಟಿಎಸ್(DTS) ಸೌಂಡ್‌ನಲ್ಲಿ ಬಿಡುಗಡೆಗೊಂಡ ಮೊದಲ ಕನ್ನಡ ಚಿತ್ರವಾಗಿ ದಾಖಲಾಯಿತು. ತೆಲುಗುವಿನಲ್ಲಿ ಸಾಯಿಕುಮಾರ್ ನಾಯಕನಾಗಿ ನಟಿಸಿದರು. ಈ ಚಿತ್ರದಲ್ಲಿ ಅಮಾಯಕನೋರ್ವ ತಾನು ಮಾಡದ ತಪ್ಪಿಗೆ ಸಿಲುಕಿ ದೇಶ ದ್ರೋಹಿ ಎಂಬ ಪಟ್ಟಕ್ಕೆ ಸಿಲುಕಿದಾಗ ಅದರಿಂದ ಹೇಗೆ ಪಾರಾಗುತ್ತಾನೆ ಹಾಗೂ ತನ್ನ ದೇಶವನ್ನು ಯಾವ ರೀತಿ ರಕ್ಷಿಸಲು ಸಹಾಯ ಮಾಡುತ್ತಾನೆ ಎಂಬುದನ್ನು ಚೆನ್ನಾಗಿ ತೋರಿಸಿದ್ದಾರೆ.
ಇಂತಹ ಚಿತ್ರಗಳನ್ನು ಕನ್ನಡ ಕಿರುತೆರೆ ಚಾನೆಲ್‌ಗಳು ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಟಿವಿಯಲ್ಲಿ ಪ್ರಸಾರ ಮಾಡುತ್ತಿರುತ್ತವೆ. ಇನ್ನೂ ಕೆಲ ಸಿನಿ ರಸಿಕರು ಈ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹುಡುಕಿ ವೀಕ್ಷಿಸುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಈ ಎಲ್ಲ ಸಿನಿಮಾಗಳು ಯುಟ್ಯೂಬ್‌ನಲ್ಲಿ ಲಭ್ಯವಿದೆ.