ಬೆಂಗಳೂರು: ಆಗಸ್ಟ್ 15 ರಂದು ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆ (Independence day 2024) ನಡೆಯಲಿದೆ. ಈ ದಿನ ಇಡೀ ದೇಶ ತ್ರಿವರ್ಣ ಧ್ವಜಗಳಿಂದ ರಾರಾಜಿಸುತ್ತಿರುತ್ತದೆ. ಸ್ವಾತಂತ್ರ್ಯದಿನದ ಸಂಭ್ರಮ ಎಲ್ಲಡೆ ಮನೆ ಮಾಡಿದೆ. ಇನ್ನು ಆಗಸ್ಟ್ 15ರಂದು ಕೆಂಪು ಕೋಟೆ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಇದೀಗ ಹೊಸ ಚಿತ್ರ ತಯಾರಕರ ತಂಡವು ‘ನನ್ನ ದೇಶವು’ (Nanna Deshavu) ಎಂಬ ಕನ್ನಡ ದೇಶಭಕ್ತಿಯ ಗೀತೆಯನ್ನು ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಭಾರತದ ವೈವಿಧ್ಯಮಯ ಸಂಸ್ಕೃತಿ, ಭವ್ಯವಾದ ಭೂದೃಶ್ಯಗಳು, ಇತಿಹಾಸ ಮತ್ತು ಭಾರತದ ಹಿರಿಮೆಯನ್ನು ಎತ್ತಿ ತೋರಿಸುವಂತಿದೆ. ‘ನನ್ನ ದೇಶವು’ ಹಾಡು ಕನ್ನಡ ಚಿತ್ರರಂಗದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿದೆ.
Jungrus Studios ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ವಿಜಯ್ ಪ್ರಕಾಶ್ ಅವರ ಸುಂದರ ಗಾಯನದೊಂದಿಗೆ ಭರತ್ ಕುಮಾರ್ ಜನಾರ್ದನ ಅವರು ಬರೆದು ನಿರ್ದೇಶಿಸಿರುವ ಈ ಹಾಡನ್ನು ಸತ್ಯ ರಾಧಾಕಿರ್ಷ್ಣ ಸಂಗೀತ ಸಂಯೋಜಿಸಿದ್ದಾರೆ. ಲೇಹ್ ಲಡಕ್, ಕಾಶ್ಮೀರ, ಹಂಪಿ, ಸಾಗರ, ಶಿವಮೊಗ್ಗ, ಬೆಂಗಳೂರು, ಶಿವನಸಮುದ್ರ ಮುಂತಾದ ಭಾರತದ ವಿವಿಧ ಸ್ಥಳಗಳಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ದೇಶಕ್ಕಾಗಿ ಅವಿರತವಾಗಿ ದುಡಿಯುವ ಮತ್ತು ತ್ಯಾಗ ಮಾಡುವ ಭಾರತೀಯ ಸೇನೆಗೆ ಈ ಹಾಡನ್ನು ಅರ್ಪಿಸಲಾಗಿದೆ.
ಇದನ್ನೂ ಓದಿ: Independence Day 2024: ಬ್ರಿಟಿಷ್ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!
ಭಾರತದಾದ್ಯಂತ ಈ ಬಾರಿ 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸಲು ಸಿದ್ಧತೆಗಳು ಜೋರಾಗಿವೆ. ಈ ದಿನ ಎಲ್ಲರ ಚಿತ್ತ ಕೆಂಪುಕೋಟೆಯ (delhi Red Fort) ಮೇಲಿರುತ್ತದೆ. ಯಾಕೆಂದರೆ ಇಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಧ್ವಜಾರೋಹಣ ನಡೆಸಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಆಗಸ್ಟ್ 15ರಂದು ಬೆಳಗ್ಗೆ 7.30ಕ್ಕೆ ರಾಷ್ಟ್ರಧ್ವಜವನ್ನು ಹಾರಿಸಿ, ಆ ಬಳಿಕ ದೇಶವನ್ನು ಉದ್ದೇಶಿಸಿ ಸತತ 11ನೇ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದಾರೆ.
ಸ್ವಾತಂತ್ರ್ಯ ದಿನದ ನೇರ ಪ್ರಸಾರ ಎಲ್ಲಿ?
ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ನೇರ ಪ್ರಸಾರ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತದೆ. ವಿಸ್ತಾರ ನ್ಯೂಸ್ ಟಿವಿ ಮತ್ತು ವಿಸ್ತಾರ ನ್ಯೂಸ್ ಯುಟ್ಯೂಬ್ ಚಾನೆಲ್ ಮೂಲಕವೂ ಮೋದಿಯವರ ಭಾಷಣ ನೇರ ಪ್ರಸಾರ ನೋಡಬಹುದು.
ಅಲ್ಲದೇ ಕಾರ್ಯಕ್ರಮವನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಯೂಟ್ಯೂಬ್ ಚಾನೆಲ್ ಜೊತೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್‌ನಲ್ಲಿ @PIB_India ಮತ್ತು PMO ಟ್ವಿಟರ್ ಹ್ಯಾಂಡಲ್ ಮೂಲಕವೂ ಪ್ರಸಾರ ಮಾಡಲಾಗುತ್ತದೆ.