Site icon Vistara News

Independence Day 2024: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕಥೆ ಹೇಳುವ ಟಾಪ್‌ 10 ಹಿಂದಿ ಸಿನೆಮಾಗಳಿವು

Independence Day 2024

78ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲು (Independence Day 2024) ನಾವೆಲ್ಲ ಸಿದ್ಧರಾಗಿದ್ದೇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಸಾಕಷ್ಟು ಮಂದಿಯ ಹೋರಾಟದ ಫಲವಾಗಿ ಬಂದಿದೆ. ಇಂಥವರ (freedom fighter story) ಸ್ಫೂರ್ತಿದಾಯಕ ಕಥೆಗಳನ್ನು ಆಧರಿಸಿ ಹಲವು ಚಲನಚಿತ್ರಗಳು (film) ಬಂದಿವೆ. ಈ ಚಿತ್ರಗಳು ನಮ್ಮಲ್ಲಿ ದೇಶ ಪ್ರೇಮವನ್ನು ಬಡಿದೆಬ್ಬಿಸುತ್ತದೆ. ಈ ಚಿತ್ರಗಳನ್ನು (Indian film) ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮತ್ತೊಮ್ಮೆ ನಾವು ನೋಡಬೇಕು, ನಮ್ಮ ಮಕ್ಕಳಿಗೂ ತೋರಿಸಬೇಕು. ನಮ್ಮೊಳಗಿನ ದೇಶಭಕ್ತಿಯನ್ನು ಜಾಗೃತಗೊಳಿಸಲು, ಮಕ್ಕಳಲ್ಲಿ ದೇಶಭಕ್ತಿಯನ್ನು ಚಿಗುರಿಸಲು ನೆರವಾಗಬಲ್ಲ ಪ್ರಮುಖ ಹತ್ತು ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಗಾಂಧಿ: (1982ರಲ್ಲಿ ನಿರ್ಮಾಣ)

ರಿಚರ್ಡ್ ಅಟೆನ್‌ಬರೋ ಅವರ ಈ ಚಲನಚಿತ್ರ “ಗಾಂಧಿ” ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯ ನಾಯಕ ಮಹಾತ್ಮ ಗಾಂಧಿಯವರ ಜೀವನವನ್ನು ವಿವರಿಸುತ್ತದೆ. ಗಾಂಧಿಯವರ ಅಹಿಂಸೆ ಮತ್ತು ಅಸಹಕಾರ ಚಳವಳಿಯ ಅಸ್ತ್ರದ ಪರಿಣಾಮವನ್ನು ಸುಂದರವಾಗಿ ಸೆರೆಹಿಡಿದಿದೆ. ಇದು 8 ಆಸ್ಕರ್‌ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿದೆ.


ಲಗಾನ್: (2001ರಲ್ಲಿ ನಿರ್ಮಾಣ)

ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ “ಲಗಾನ್” ಚಿತ್ರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ನಡೆದ ಕ್ರಿಕೆಟ್‌ ಪಂದ್ಯದ ಕಥೆಯಾಗಿದೆ. ಇದು ಭಾರತದ ಹಳ್ಳಿಯ ಜನರ ಸುತ್ತ ಹೆಣೆದ ಕಥೆಯಾಗಿದೆ. ಬ್ರಿಟಿಷ್ ದಬ್ಬಾಳಿಕೆ ಮತ್ತು ಅಮಾನವೀಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ಹಳ್ಳಿಯ ಜನರು ಕ್ರಿಕೆಟ್ ಪಂದ್ಯದ ಸವಾಲು ಹಾಕುತ್ತಾರೆ. ಈ ಚಿತ್ರವು ಬ್ರಿಟಿಷರ ವಿರುದ್ಧದ ಭಾರತೀಯರ ಏಕತೆ, ಬದ್ಧತೆ ಮತ್ತು ಧೈರ್ಯ-ಸಾಹಸವನ್ನು ಪ್ರತಿಬಿಂಬಿಸಿದೆ.


ರಂಗ್ ದೇ ಬಸಂತಿ: (2006ರಲ್ಲಿ ನಿರ್ಮಾಣ)

ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ “ರಂಗ್ ದೇ ಬಸಂತಿ” ಸಮಕಾಲೀನ ಭಾರತೀಯ ಯುವಕರ ಕಥೆಯನ್ನು ಒಳಗೊಂಡಿದೆ. ಇದು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳೊಂದಿಗೆ ಹೆಣೆದುಕೊಂಡಿದೆ. ಈ ಚಲನಚಿತ್ರವು ಹಿಂದಿನ ಮತ್ತು ವರ್ತಮಾನದ ನಡುವಿನ ಕಥೆಯನ್ನು ಹೆಣೆದು ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಹೊಸ ಪೀಳಿಗೆಯನ್ನು ಪ್ರೇರೇಪಿಸುವ ಕಥಾ ಹಂದರವನ್ನು ಇದು ಒಳಗೊಂಡಿದೆ.

1942 ಎ ಲವ್ ಸ್ಟೋರಿ (1994ರಲ್ಲಿ ಬಿಡುಗಡೆ)

ವಿಧು ವಿನೋದ್ ಚೋಪ್ರಾ ಅವರ ರೊಮ್ಯಾಂಟಿಕ್ ಚಿತ್ರ “1942: ಎ ಲವ್ ಸ್ಟೋರಿ” ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಆಗಿದೆ. ಕ್ವಿಟ್ ಇಂಡಿಯಾ ಚಳವಳಿಯ ಹಿನ್ನೆಲೆಯನ್ನು ಒಳಗೊಂಡಿದೆ. ಈ ಚಿತ್ರವು ಸ್ವಾತಂತ್ರ್ಯದ ಹೋರಾಟದೊಂದಿಗೆ ಅರಳುವ ಪ್ರೇಮಕಥೆಯನ್ನು ಹೊಂದಿದೆ. ಬ್ರಿಟಿಷರ ವಿರುದ್ಧ ಹೋರಾಟ ಮತ್ತು ಯುವ ಜೋಡಿಯ ಪ್ರೀತಿಯ ಕಥಾನಕ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.


ಮಂಗಲ್ ಪಾಂಡೆ: ದಿ ರೈಸಿಂಗ್ (2005ರಲ್ಲಿ ನಿರ್ಮಾಣ)

ಕೇತನ್ ಮೆಹ್ತಾ ಅವರ ಐತಿಹಾಸಿಕ ಜೀವನಚರಿತ್ರೆಯ “ಮಂಗಲ್ ಪಾಂಡೆ: ದಿ ರೈಸಿಂಗ್”ನಲ್ಲಿ ಆಮೀರ್ ಖಾನ್ ಮನೋಜ್ಞವಾಗಿ ನಟಿಸಿದ್ದಾರೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ 1857ರ ಸಿಪಾಯಿ ದಂಗೆಯನ್ನು ಹೊತ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಪಾಯಿ ಮಂಗಲ್ ಪಾಂಡೆಯ ಜೀವನವನ್ನು ಇದು ಬಿಂಬಿಸಿದೆ.

ನೇತಾಜಿ ಸುಭಾಸ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ (2004ರಲ್ಲಿ ನಿರ್ಮಾಣ)

ಶ್ಯಾಮ್ ಬೆನಗಲ್ ಅವರ ಈ ಚಿತ್ರವು ಪ್ರಭಾವಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನ ಕಥೆಯನ್ನು ಒಳಗೊಂಡಿದೆ. ಇದು ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ) ಸ್ಥಾಪನೆ ಮತ್ತು ಬ್ರಿಟಿಷ್ ಆಳ್ವಿಕೆಯನ್ನು ಉರುಳಿಸಲು ಅವರು ನಡೆಸಿದ ಸಾಹಸಮಯ ಹೋರಾಟದ ಮೇಲೆ ಬೆಳಕು ಚೆಲ್ಲುತ್ತದೆ.


ದಿ ಲೆಜೆಂಡ್ ಆಫ್ ಭಗತ್ ಸಿಂಗ್ (2002ರಲ್ಲಿ ನಿರ್ಮಾಣ)

ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ʼದಿ ಲೆಜೆಂಡ್ ಆಫ್ ಭಗತ್ ಸಿಂಗ್ʼ ಚಿತ್ರದಲ್ಲಿ ಅಜಯ್ ದೇವಗನ್ ಭಾರತದ ಸ್ವಾತಂತ್ರ್ಯಕ್ಕಾಗಿ ವೀರಾವೇಶದಿಂದ ಹೋರಾಡಿದ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಬ್ರಿಟಿಷ್ ಆಡಳಿತಗಾರರ ವಿರುದ್ಧ ಭಗತ್‌ ಸಿಂಗ್ ಅವರ ಅಚಲ ಬದ್ಧತೆ ಮತ್ತು ಧೈರ್ಯದ ನಿಲುವನ್ನು ಚಲನಚಿತ್ರವು ಎತ್ತಿ ತೋರಿಸುತ್ತದೆ.


ಶಹೀದ್ (1965ರಲ್ಲಿ ನಿರ್ಮಾಣ)

ಎಸ್. ರಾಮ್ ಶರ್ಮಾ ಅವರ “ಶಹೀದ್” ಚಿತ್ರ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ್ ರಾಜಗುರು ಅವರ ಜೀವನವನ್ನು ಚಿತ್ರಿಸುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ಮೂವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿ ಮತ್ತು ನಿಸ್ವಾರ್ಥತೆಯನ್ನು ಚಿತ್ರದ ಮೂಲಕ ಗೌರವಿಸಲಾಗಿದೆ.


ಚಿತ್ತಗಾಂಗ್ (2012ರಲ್ಲಿ ನಿರ್ಮಾಣ)

ವೇದವ್ರತ ಪೈನ್ ಅವರ “ಚಿತ್ತಗಾಂಗ್” ಚಿತ್ರವು 1930ರ ಚಿತ್ತಗಾಂಗ್ ದಂಗೆಯ ಸಮಯದಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸವಾಲೆಸೆದ ಹದಿಹರೆಯದ ಶಾಲಾ ಹುಡುಗರ ಕಥೆಯನ್ನು ಹೇಳುತ್ತದೆ. ಈ ಯುವ ದೇಶಭಕ್ತರ ಗಮನಾರ್ಹ ಶೌರ್ಯ ಮತ್ತು ಸಂಕಲ್ಪವನ್ನು ಚಲನಚಿತ್ರವು ಸಮರ್ಥವಾಗಿ ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Indian 2 Ott: ಇಂಡಿಯನ್ 2 ಒಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್!


ಬೋಸ್: ದಿ ಫಾರ್ಗಾಟನ್ ಹೀರೊ (2005ರಲ್ಲಿ ನಿರ್ಮಾಣ)

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನದ ಮತ್ತೊಂದು ಚಿತ್ರ ಇದು. ಶ್ಯಾಮ್ ಬೆನಗಲ್ ನಿರ್ದೇಶಿಸಿದ “ಬೋಸ್: ದಿ ಫಾರ್ಗಾಟನ್ ಹೀರೋ” ಚಿತ್ರವು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬೋಸ್ ಅವರ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನಗಳು ಮತ್ತು ಇಂಡಿಯನ್‌ ನ್ಯಾಷನಲ್‌ ಆರ್ಮಿಯನ್ನು ಸಜ್ಜುಗೊಳಿಸುವಲ್ಲಿ ಅವರು ತೋರಿದ ಚಾಣಾಕ್ಷತೆಯನ್ನು ಮನೋಜ್ಞವಾಗಿ ಕಟ್ಟಿ ಕೊಟ್ಟಿದೆ.

ಈ ಎಲ್ಲ ಚಿತ್ರಗಳು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯರು ತೋರಿದ ಅದಮ್ಯ ಚೇತನಕ್ಕೆ ಸಂದ ಗೌರವವಾಗಿದೆ. ದೇಶ ಸ್ವಾತಂತ್ರ್ಯ ಪಡೆಯಲು ಅವರೆಲ್ಲ ಮಾಡಿರುವ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತದೆ.

Exit mobile version