Site icon Vistara News

Indian 2: ಕಮಲ್‌ ಹಾಸನ್‌ ಅಭಿನಯದ ʼಇಂಡಿಯನ್‌ 2ʼ ಚಿತ್ರದ ಮೊದಲ ಹಾಡು ರಿಲೀಸ್‌; ಕುದುರೆ ಏರಿ ಬಂದ ಉಳಗನಾಯಗನ್‌

Indian 2

Indian 2

ಚೆನ್ನೈ: ಉಳಗ ನಾಯಕನ್‌ ಕಮಲ್ ಹಾಸನ್ (Kamal Haasan) ಹಾಗೂ ಜನಪ್ರಿಯ ನಿರ್ದೇಶಕ ಆರ್.ಶಂಕರ್ (R.Shankar) ಜೋಡಿಯ ʼಇಂಡಿಯನ್ 2ʼ (Indian 2) ಪ್ಯಾನ್‌ ಇಂಡಿಯಾ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜುಲೈ 12ಕ್ಕೆ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಅದರ ಭಾಗವಾಗಿ ʼಇಂಡಿಯನ್ 2ʼ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ.

ʼಇಂಡಿಯನ್ 2ʼ ಸಿನಿಮಾದ ‘ಪಾರಾ’ ಎಂಬ ಹಾಡು ರಿಲೀಸ್‌ ಆಗಿದೆ. ಕುದುರೆ ಏರಿ ಬರುವ ಸೇನಾಪತಿಯ ಸಾಹಸ ಕಥೆಯನ್ನು ವರ್ಣಿಸುವ ಈ ಹಾಡಿಗೆ ಸುದ್ದಲ ಅಶೋಕ್ ತೇಜ ಸಾಹಿತ್ಯ ಬರೆದಿದ್ದಾರೆ. ರಿತೇಶ್ ಜಿ. ರಾವ್ ಮತ್ತು ಶೃತಿಕಾ ಸಮುದ್ರಾ ಸೌರಾ ಹಾಡಿಗೆ ಧ್ವನಿಯಾಗಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸೇನಾಪತಿಯಾಗಿ ಕಮಲ್ ಹಾಸನ್ ನಟಿಸಿದ್ದು,‌ ಅನಿರುದ್ಧ್ ಹಾಡಿಗೆ ಟ್ಯೂನ್ ಹಾಕಿದ್ದಾರೆ.

1996ರಲ್ಲಿ ಬಿಡುಗಡೆಗೊಂಡಿದ್ದ ʼಇಂಡಿಯನ್ʼ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿತ್ತು. ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ದ್ವಿಪಾತ್ರ ನಿಭಾಯಿಸಿದ್ದರು. ʼಇಂಡಿಯನ್ 2ʼ ಆ ಹಿಟ್ ಚಿತ್ರದ ಮುಂದುವರಿದ ಭಾಗವಾಗಿದ್ದು, ಇದರಲ್ಲೂ ಕಮಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಜವಾಬ್ದಾರಿ ಹೊತ್ತಿದ್ದು, ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಸಂಕಲನದ ಕೆಲಸ ನಿಭಾಯಿಸಿದ್ದಾರೆ. ಈ ಚಲನಚಿತ್ರವನ್ನು ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ನಿರ್ಮಿಸಿದೆ. ಈಗಾಗಲೇ ರಿಲೀಸ್‌ ಆಗಿರುವ ಪೋಸ್ಟರ್‌ ಕುತೂಹಲ ಮೂಡಿಸಿದ್ದು, ಇದೀಗ ಹಾಡು ಕೂಡ ಗಮನ ಸೆಳೆಯುತ್ತಿದೆ.

ʼಇಂಡಿಯನ್‌ʼ

1996ರಲ್ಲಿ ತೆರೆಕಂಡ ಎಸ್‌.ಶಂಕರ್‌ ನಿರ್ದೇಶನದ ʼಇಂಡಿಯನ್‌ʼ ತಮಿಳು ಚಿತ್ರದಲ್ಲಿ ಕಮಲ್‌ ಹಾಸನ್‌ ಜತೆಗೆ ಮನೀಶಾ ಕೊಯಿರಾಲ, ಊರ್ಮಿಳಾ ಮಾತೋಂಡ್ಕರ್‌, ಸುಕನ್ಯಾ, ಮನೋರಮಾ, ನಡುಮುಡಿ ವೇಣು, ಕಸ್ತೂರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಭಾರತದ ಕ್ಲಾಸಿಕ್‌ ಚಿತ್ರಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ನಾಮನಿರ್ದೇಶನಕ್ಕೂ ಇದನ್ನು ಪರಿಗಣಿಸಲಾಗಿತ್ತು. ಮಾತ್ರವಲ್ಲ ಕಮಲ್‌ ಹಾಸನ್‌ ತಮ್ಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಎ.ಆರ್‌.ರೆಹಮಾನ್‌ ಅವರ ಸಂಗೀತವೂ ಸಿನಿಪ್ರಿಯರ ಗಮನ ಸೆಳೆದಿತ್ತು.

ಇದನ್ನೂ ಓದಿ: Indian 2 : ‘ಇಂಡಿಯನ್ 2ʼ ಸಿನಿಮಾದಲ್ಲಿ ಸಿದ್ಧಾರ್ಥ್: ಫಸ್ಟ್‌ ಲುಕ್‌ ಔಟ್‌!

ಇದೀಗ ‘ಇಂಡಿಯನ್‌ 2’ ಜತೆಗೆ ʼಇಂಡಿಯನ್ 3ʼ ಸಿನಿಮಾದ ಚಿತ್ರೀಕರಣವೂ ಮುಗಿದಿದೆ ಎಂದು ವರದಿಯೊಂದು ತಿಳಿಸಿದೆ. ‘ಇಂಡಿಯನ್ 2’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಂಡ ಬಳಿಕ ‘ಇಂಡಿಯನ್ 3’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ ಎನ್ನಲಾಗಿದೆ.

Exit mobile version