Site icon Vistara News

Indian 2: ‘ಇಂಡಿಯನ್ 2′ ಚಿತ್ರದ ಶೂಟಿಂಗ್ ಪೂರ್ಣ; ಕಮಲ್‌ ಹಾಸನ್‌ ಸಿನಿಮಾ ತೆರೆಗೆ ಯಾವಾಗ?

Indian 2

Indian 2

ಚೆನ್ನೈ: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಕಾಲಿವುಡ್‌ನ ಇಂಡಿಯನ್ 2 (Indian 2) ಕೂಡ ಒಂದು. ಕಮಲ್ ಹಾಸನ್ (Kamal Haasan) ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ಸದ್ಯ ಚಿತ್ರೀಕರಣ ಪೂರ್ಣಗೊಳಿಸಿದೆ. ಜೂನ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಆದರೆ ಯಾವ ದಿನ ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಪ್ರಸ್ತುತ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿದೆ. ಸೆಟ್ಟೇರಿದಾಗಿನಿಂದಲೂ ಭಾರೀ ಕುತೂಹಲ ಮೂಡಿಸಿದ ಈ ಚಿತ್ರ ಪೋಸ್ಟರ್‌ ಮೂಲಕವೇ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ʼಇಂಡಿಯನ್ʼ ಸೀಕ್ವೆಲ್‌ಗೆ ಕಾಲಿವುಡ್‌ನ ಖ್ಯಾತ ನಿರ್ದೇಶಕ ಎಸ್.ಶಂಕರ್ ಆ್ಯಕ್ಷನ್‌ ಕಟ್‌ ಹೇಳಿರುವುದು ಇಷ್ಟೆಲ್ಲ ನಿರೀಕ್ಷೆ ಹೆಚ್ಚಲು ಕಾರಣ. ಜತೆಗೆ ಈ ಚಿತ್ರವು 1996ರ ‘ಇಂಡಿಯನ್’ ಚಿತ್ರದ ಮುಂದುವರಿದ ಭಾಗವಾಗಿರುವುದು ಕೂಡ ದೇಶದ ಸಿನಿ ಪ್ರಿಯರ ಗಮನ ಸೆಳೆದಿದೆ. ಹೀಗಾಗಿಯೇ ಚಿತ್ರವನ್ನು ಥಿಯೇಟರ್‌ಗಳಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಕಾಜಲ್ ಅಗರ್ವಾಲ್, ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೋವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ. ವಿಶೇಷ ಎಂದರೆ ಕಮಲ್ ಹಾಸನ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸುಬಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರ ಛಾಯಾಗ್ರಹಣ ಇದೆ. ಎ.ಶ್ರೀಕರ್ ಪ್ರಸಾದ್ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ʼಇಂಡಿಯನ್‌ʼ

1996ರಲ್ಲಿ ತೆರೆಕಂಡ ಎಸ್‌.ಶಂಕರ್‌ ನಿರ್ದೇಶನದ ʼಇಂಡಿಯನ್‌ʼ ತಮಿಳು ಚಿತ್ರದಲ್ಲಿ ಕಮಲ್‌ ಹಾಸನ್‌ ಜತೆಗೆ ಮನೀಶಾ ಕೊಯಿರಾಲ, ಊರ್ಮಿಳಾ ಮಾತೋಂಡ್ಕರ್‌, ಸುಕನ್ಯಾ, ಮನೋರಮಾ, ನಡುಮುಡಿ ವೇಣು, ಕಸ್ತೂರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಹೊಂದಿದ್ದ ಈ ಸಿನಿಮಾದಲ್ಲಿಯೂ ಕಮಲ್‌ ಹಾಸನ್‌ ದ್ವಿಪಾತ್ರ ನಿಭಾಯಿಸಿದ್ದರು.

ಭಾರತದ ಕ್ಲಾಸಿಕ್‌ ಚಿತ್ರಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ನಾಮನಿರ್ದೇಶನಕ್ಕೂ ಇದನ್ನು ಪರಿಗಣಿಸಲಾಗಿತ್ತು. ಮಾತ್ರವಲ್ಲ ಕಮಲ್‌ ಹಾಸನ್‌ ತಮ್ಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಎ.ಆರ್‌.ರೆಹಮಾನ್‌ ಅವರ ಸಂಗೀತವೂ ಸಿನಿಪ್ರಿಯರ ಗಮನ ಸೆಳೆದಿತ್ತು.

ಇದೀಗ ‘ಇಂಡಿಯನ್‌ 2’ ಜತೆಗೆ ʼಇಂಡಿಯನ್ 3ʼ ಸಿನಿಮಾದ ಚಿತ್ರೀಕರಣವೂ ಮುಗಿದಿದೆ ಎಂದು ವರದಿಯೊಂದು ತಿಳಿಸಿದೆ. ‘ಇಂಡಿಯನ್ 2’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಂಡ ಬಳಿಕ ‘ಇಂಡಿಯನ್ 3’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ ಎನ್ನಲಾಗಿದೆ.

ಈ ಮಧ್ಯೆ ಕಮಲ್‌ ಹಾಸನ್‌ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼಯಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಟಾಲಿವುಡ್ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಕೆರಳಿಸಿದೆ. ಭೂತ ಕಾಲ ಮತ್ತು ಭವಿಷ್ಯದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Kalki 2898 AD: ʼಕಲ್ಕಿʼ ಚಿತ್ರದಲ್ಲಿನ ಪಾತ್ರದ ಗುಟ್ಟು ರಟ್ಟು ಮಾಡಿದ ಕಮಲ್‌ ಹಾಸನ್‌; ಖಳನಾಯಕನಾಗಿ ಅಬ್ಬರಿಸುತ್ತಾರಾ ಉಲಗನಾಯಕನ್‌?

Exit mobile version