Site icon Vistara News

Oscars 2024: ಭಾರತೀಯ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕನನ್ನು ಸ್ಮರಿಸಿದ ಆಸ್ಕರ್‌ ವೇದಿಕೆ

Indian art designer Nitin Chandrakant Desai remembered with Oscars

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ನಿತಿನ್ ದೇಸಾಯಿ (Art Director Nitin Desai) ಅವರು 2023ರ ಆಗಸ್ಟ್‌ 2ರಂದು ತಮ್ಮದೇ ಎನ್‌ಡಿ ಸ್ಟುಡಿಯೊದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸೆಟ್‌ಗಳನ್ನು ನಿರ್ಮಿಸಿದ್ದ ನಿತಿನ್ ದೇಸಾಯಿ ಪ್ರೊಡಕ್ಷನ್ ಡಿಸೈನರ್ ಆಗಿಯೂ ಗುರುತಿಸಿಕೊಂಡಿದ್ದರು. ಹಿಂದಿ, ಮರಾಠಿ ಕಿರುತೆರೆಯಲ್ಲೂ ಕೆಲಸ ಮಾಡಿದ್ದರು. ಕಲಾ ನಿರ್ದೇಶನಕ್ಕಾಗಿ 4 ಬಾರಿ ರಾಷ್ಟ್ರ‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಬಾರಿಯ 96ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ನಿತಿನ್‌ ಅವರನ್ನು ಸ್ಮರಿಸಿಕೊಳ್ಳಲಾಗಿದೆ.

ಪ್ರತಿ ವರ್ಷ, ಅಕಾಡೆಮಿ ಪ್ರಶಸ್ತಿಗಳಲ್ಲಿ ಕಳೆದ ಒಂದು ವರ್ಷದಲ್ಲಿ ನಿಧನರಾದ ಪ್ರಮುಖರ ಬಗ್ಗೆ ಸ್ಮರಿಸಿಕೊಳ್ಳಲಾಗುತ್ತದೆ. ಈ ಬಾರಿಯ ಆಸ್ಕರ್‌ ʻಮೆಮೋರಿಯಮ್ ಮಾಂಟೇಜ್‌ʼನಲ್ಲಿ (Memoriam segment) ನಿತಿನ್ ದೇಸಾಯಿ ಅವರನ್ನು ಸ್ಮರಿಸಲಾಗಿದೆ.

‘ಹಮ್ ದಿಲ್ ದೇ ಚುಕೇ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’, ‘ಲಗಾನ್’ʼ, ‘ಬಾಜಿರಾವ್ ಮಸ್ತಾನಿ’ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಅದ್ಧೂರಿ ಸೆಟ್‌ಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ: Oscars 2024: ಯಾರಿಗೆ, ಯಾವ ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ? ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ!

ಎರಡು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ದೇಸಾಯಿ ಅವರು ಸಂಜಯ್ ಲೀಲಾ ಬನ್ಸಾಲಿ, ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಸೇರಿದಂತೆ ಹಲವಾರು ಧೀಮಂತ ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಾರೆ. 52 ಎಕರೆಯಲ್ಲಿ ಇರುವ ಇವರದ್ದೇ ಎನ್‌ಡಿ ಸ್ಟುಡಿಯೊ ಹಲವಾರು ಫಿಲ್ಮ್ ಸೆಟ್‌ಗಳಿಗೆ ನೆಲೆಯಾಗಿದೆ. ಅದರಲ್ಲಿ ಪ್ರಮುಖವಾದದ್ದು ‘ಜೋಧಾ ಅಕ್ಬರ್’.

ಚಲನಚಿತ್ರಗಳು ಮಾತ್ರವಲ್ಲದೆ, ರಿಯಾಲಿಟಿ ಶೋ ‘ಬಿಗ್ ಬಾಸ್’ ನ ಹಲವಾರು ಸೀಸನ್‌ಗಳನ್ನು ಎನ್‌ಡಿ ಸ್ಟುಡಿಯೋಸ್‌ನಲ್ಲಿ ಆಯೋಜಿಸಲಾಗಿದೆ. ನಿತಿನ್‌ ಒಂದೆರಡು ಚಿತ್ರಗಳನ್ನು ನಿರ್ದೇಶಿಸಿದ್ದರು. ‘ಹಲೋ ಜೈ ಹಿಂದ್!’ (2011) ಮತ್ತು ‘ಅಜಿಂತಾ’ (2012) ಇವರು ನಿರ್ದೇಶಿಸಿದ್ದ ಪ್ರಮುಖ ಸಿನಿಮಾಗಳು.

Exit mobile version