ಬೆಂಗಳೂರು : ನ್ಯೂಜೆರ್ಸಿಯ ಎಡಿಸನ್ ಸಿಟಿಯಲ್ಲಿರುವ ಭಾರತೀಯ ಮೂಲದ ಅಮೆರಿಕ ಕುಟುಂಬವೊಂದು ತಮ್ಮ ಮನೆಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಅವರ ಪ್ರತಿಮೆಯನ್ನು ಸ್ಥಾಪಿಸಿದೆ.
ಭಾರತೀಯ ಮೂಲದವರು ಹೆಚ್ಚಾಗಿ ಎಡಿಸನ್ ಸಿಟಿಯಲ್ಲಿ ನೆಲೆಸಿದ್ದಾರೆ. ಈ ಸಿಟಿಯನ್ನು ಸಾಮಾನ್ಯವಾಗಿ ಲಿಟಲ್ ಇಂಡಿಯಾ ಎಂತಲೇ ಕರೆಯಲಾಗುತ್ತದೆ. ಎಡಿಸನ್‌ನಲ್ಲಿರುವ ರಿಂಕು ಹಾಗೂ ಗೋಪಿ ಸೇಥ್ ದಂಪತಿ ಮನೆಯಲ್ಲಿ ಅಮಿತಾಭ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಸ್ಥಳೀಯ ನಾಯಕ ಅಲ್ಬರ್ಟ್ ಜಸಾನಿ ಎನ್ನುವವರು ಔಪಚಾರಿಕವಾಗಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಮನೆಯ ಹೊರಗೆ 600 ಜನ ಜಮಾಯಿಸಿದ್ದರು. ಬಿಗ್‌ಬಿ ಅವರ ಪ್ರತಿಮೆಯನ್ನು ದೊಡ್ಡ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಬಿಗ್‌ಬಿ ಅಭಿಮಾನಿಗಳು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ | Amitabh Bachchan | ಕೋಟ್ಯಂತರ ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಕ್ಷಮೆಯಾಚಿಸಿದ್ದು ಏಕೆ?
ಪ್ರತಿಮೆ ಮಾಡಲು ಕಾರಣ?
ಇಂಟರ್‌ನೆಟ್ ಭದ್ರತಾ ಎಂಜಿನಿಯರ್ ಆಗಿರುವ ಗೋಪಿ ಸೇಥ್ ಗುಜರಾತ್‌ನ ದಾಹೋದ್‌ನಿಂದ 1990ರಲ್ಲಿ ಅಮೆರಿಕಾಕ್ಕೆ ಅಗಮಿಸಿದ್ದರು. ಈ ಕುರಿತು ಮಾನಾಡಿದ ಸೇಥ್ ʻʻನನಗೆ ಮತ್ತು ಪತ್ನಿಗೆ ಅಮಿತಾಭ್ ಅವರು ದೇವರಂತೆ. ಅವರು ಬೇರೆ ನಟರಂತೆ ಅಲ್ಲ, ತುಂಬಾ ಡೌನ್ ಟು ಅರ್ಥ್ ಆಗಿದ್ದಾರೆ. ಅಮಿತಾಭ್ ಅವರು ತಮ್ಮನ್ನು ತಾವು ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವುದು, ಸಂವಹನ ನಡೆಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ತುಂಬಾ ಸರಳವಾಗಿರುವ ಅಮಿತಾಭ್ ಅವರು ಅಭಿಮಾನಿಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಈ ಕಾರಣಕ್ಕೆ ಮನೆಯಲ್ಲಿ ಅವರ ಪ್ರತಿಮೆ ಇರಬೇಕೆಂದು ನಿರ್ಧರಿಸಿದೆʼʼ ಎಂದರು.
ಬಚ್ಚನ್ ಅವರಿಗೆ ತಿಳಿದಿದೆಯಂತೆ ಪ್ರತಿಮೆ ವಿಚಾರ
ಈ ಪ್ರತಿಮೆಯ ವಿಷಯ ಅಮಿತಾಭ್ ಅವರಿಗೂ ಗೊತ್ತಿದೆ ಎನ್ನುತ್ತಾರೆ ಸೇಥ್. ಈ ವಿಚಾರ ಅವರಿಗೆ ತಿಳಿದಾಗ ಇಂತಹ ಸತ್ಕಾರಕ್ಕೆ ತಾವು ಅರ್ಹರಲ್ಲ ಎಂದು ಹೇಳಿದ್ದರು. ಆದರೂ ನಾವು ಪ್ರತಿಮೆ ಸ್ಥಾಪಿಸಿದ್ದೇವೆ. ಬಚ್ಚನ್ ಅವರ “ಕೌನ್ ಬನೇಗಾ ಕರೋಡ್‌ಪತಿ” ಶೋದಲ್ಲಿ ಕುಳಿತಿರುವಂತೆ ಪ್ರತಿಮೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ರಾಜಸ್ಥಾನದಲ್ಲಿ ವಿನ್ಯಾಸಗೊಳಿಸಿ ಬಳಿಕ ಅಮೆರಿಕಗೆ ತೆಗೆದುಕೊಂಡು ಬರಲಾಗಿದೆ. ಅಂದಾಜು 60 ಲಕ್ಷ ರೂ. ವೆಚ್ಚವಾಗಿದೆ ಎಂದು ಸೇಥ್ ಮಾಹಿತಿ ನೀಡಿದರು.
ಬಿಗ್ ಬಿ ಫ್ಯಾನ್ ಸೇಥ್!
ನ್ಯೂಜೆರ್ಸಿಯಲ್ಲಿ 1991ರಲ್ಲಿ ನವರಾತ್ರಿ ಆಚರಣೆ ವೇಳೆ ಅಮಿತಾಭ್ ಅವರನ್ನು ಭೇಟಿಯಾಗಿರುವ ಸೇಥ್, ಆಗಿನಿಂದಲೂ ಅಮಿತಾಭ್ ಅವರ ಅಭಿಮಾನಿಯಾಗಿದ್ದಾರೆ. ಅಮಿತಾಭ್ ಅಭಿಮಾನಿಗಳನ್ನು ಸಂಘಟಿಸುವ ಸಲುವಾಗಿ ಕಳೆದ ಮೂರು ವರ್ಷದಿಂದ ʻʻಬಿಗ್‌ಬಿ ಎಕ್ಸ್‌ಟೆಂಡೆಡ್ ಫ್ಯಾಮಿಲಿʼʼ (www.BigBEFamily.com) ವೆಬ್‌ಸೈಟ್ ಅನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ | Don Movie | 44 ವರ್ಷಗಳ ಹಿಂದಿನ ʻಡಾನ್ʼ ಚಿತ್ರದ ಮೆಲುಕು ಹಾಕಿದ ಬಿಗ್ ಬಿ