Site icon Vistara News

Puneeth Parva | ಕಾಣದಂತೆ ಮಾಯವಾದನು ಹಾಡು, ಅಪ್ಪು ವಿನಮ್ರತೆ ತುಂಬ ಇಷ್ಟ, ಇನ್ಫಿ ಸುಧಾಮೂರ್ತಿ ಸ್ಮರಣೆ

Appu

ಬೆಂಗಳೂರು: ರಾಜಧಾನಿಯ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪುನೀತ ಪರ್ವ (Puneeth Parva) ಕಾರ್ಯಕ್ರಮದಲ್ಲಿ ಇನ್ಫೋಸಿಸ್‌ ಫೌಂಡೇಷನ್‌ನ ಸುಧಾಮೂರ್ತಿ ಸೇರಿ ಹಲವು ಗಣ್ಯರು ಭಾಗವಹಿಸಿದ್ದಾರೆ. ಅದರಲ್ಲೂ ಸುಧಾಮೂರ್ತಿ ಅವರು ವೇದಿಕೆ ಮೇಲೆ ಆಗಮಿಸಿ ಪುನೀತ್‌ ರಾಜಕಮಾರ್‌ ಅವರ ಜತೆಗೆ ಕಳೆದ ನೆನಪುಗಳನ್ನು ಹಂಚಿಕೊಂಡರು.

“ಅಪ್ಪು ಬಾಲನಟನಾಗಿ ನನಗೆ ಹೆಚ್ಚು ಆಪ್ತ. ಕಾಣದಂತೆ ಮಾಯವಾದನು ಹಾಡು ಇಷ್ಟ. ಬೆಟ್ಟದ ಹೂ, ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ರಾಜಕುಮಾರ ಸಿನಿಮಾ ನೋಡಿದ್ದೇನೆ. ನಾನು ಅವರನ್ನು ಯಾವಾಗ ಭೇಟಿಯಾದರೂ ವಿನಮ್ರವಾಗಿ ಮಾತನಾಡುತ್ತಿದ್ದರು. ನಿಮ್ಮನ್ನು ಅಪ್ಪು, ಪುನೀತ್‌ ಎನ್ನುವುದಕ್ಕಿಂತ ಲೋಹಿತ್‌ ಎನ್ನುವುದೇ ನನಗೆ ಇಷ್ಟ ಎಂದು ಯಾವಾಗಲೂ ಹೇಳುತ್ತಿದ್ದೆ. ಇದನ್ನು ಕೇಳಿ ಅವರು ನಗುತ್ತಿದ್ದರು” ಎಂದು ಸುಧಾ ಮೂರ್ತಿ ಹೇಳಿದರು.

“ವಿದೇಶದಲ್ಲಿರುವಾಗ ಕಾರ್ಯಕ್ರಮವೊಂದರಲ್ಲಿ ಭೇಟಿಯಾದಾಗ ಅವರು ಬಂದು ನನಗೆ ನಮಸ್ಕಾರ ಮಾಡಿದರು. ಅಂತಹ ವಿನಯಶೀಲತೆ, ವಿನಮ್ರತೆ ತುಂಬ ಇತ್ತು. ನಾವೆಲ್ಲ ರಾಜಕುಮಾರ್‌ ಅವರ ಭಕ್ತರು. ಪುನೀತ್‌ ರಾಜಕುಮಾರ್‌ ಅವರೂ ನನಗೆ ಇಷ್ಟವಾಗಿದ್ದರು. ಆದರೆ, ಚಿಕ್ಕ ವಯಸ್ಸಿನಲ್ಲಿಯೇ ಅವರು ನಮ್ಮನ್ನು ಅಗಲಿದ್ದು ತುಂಬ ದುಃಖದ ವಿಷಯ” ಎಂದು ಬೇಸರ ವ್ಯಕ್ತಪಡಿಸಿದರು.

ನಟರಾದ ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಶರತ್‌ ಕುಮಾರ್ ಸೇರಿ ಹಲವರು ಅಪ್ಪು ಜತೆಗಿನ ಒಡನಾಟ ಸ್ಮರಿಸಿದರು. “ಅಪ್ಪು ಜತೆಗೆ ನಟಿಸುವುದೇ ಸಂತೋಷದ ವಿಷಯ. ಆದರೆ, ಪುನೀತ್‌ ರಾಜಕುಮಾರ್‌ ಅವರು ಬೇಗನೆ ನಮ್ಮನ್ನು ಅಗಲಿ ದೇವರಾಗಿಬಿಟ್ಟರು” ಎಂದು ಶರತ್‌ ಕುಮಾರ್‌ ಹೇಳಿದರು.

ಇದನ್ನೂ ಓದಿ | Gandhada Gudi | ಡಾ. ರಾಜ್‌ ಗಂಧದ ಗುಡಿಗಿಂತಲೂ ಪುನೀತ್‌ ಸಿನಿಮಾ ಯಶಸ್ಸು ಕಾಣಲಿ: ಸೋದರತ್ತೆ ನಾಗಮ್ಮ ಹಾರೈಕೆ

Exit mobile version