ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದಲ್ಲಿ ಮೂಡಿಬಂದಿರುವ ಡೊಳ್ಳು ಸಿನಿಮಾ (Dollu Kannada Movie) ಬಿಡುಗಡೆ ಹೊಸ್ತಿಲಲ್ಲಿದೆ. ಆಗಸ್ಟ್ 26ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಡೊಳ್ಳು ಜನಪದ ಕಲೆಯಾಗಿದ್ದು, ಇದರ ಮಹತ್ವ ಸಾರುವ ಈ ಸಿನಿಮಾಗೆ 18 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮನ್ನಣೆ ದೊರೆತಿದೆ.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ “ಡೊಳ್ಳು” ಭಾಜನವಾಗಿದೆ. ಈ ಸಿನಿಮಾವನ್ನು ವೀಕ್ಷಿಸುವಂತೆ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರಿಗೆ ನಿರ್ಮಾಪಕ ಪವನ್ ಒಡೆಯರ್ ಹಾಗೂ ನಿರ್ದೇಶಕ ಸಾಗರ್ ಪುರಾಣಿಕ್ ಆಹ್ವಾನ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿರುವ ಡೊಳ್ಳು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜ್ಯಪಾಲರು ಸಿನಿಮಾ ನೋಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಒಡೆಯರ್ ಮೂವೀಸ್ ಬ್ಯಾನರ್‌ನಡಿ ಚೊಚ್ಚಲ ಬಾರಿಗೆ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಜತೆಗೂಡಿ ಡೊಳ್ಳು ಸಿನಿಮಾ ಮಾಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಸಾರಥ್ಯದಲ್ಲಿ ಚಿತ್ರ ತಯಾರಾಗಿದೆ. ಕಿರುತೆರೆ ಕಲಾವಿದ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸಿದ್ದಾರೆ. ನಿಧಿ ಹೆಗಡೆ ನಾಯಕಿಯಾಗಿ ಅಭಿನಯಿಸಿದ್ದಾರೆ.
ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಮುಂತಾದ ಕಲಾವಿದರು ಚಿತ್ರದಲ್ಲಿದ್ದಾರೆ. ಸಂಭಾಷಣೆ ಮತ್ತು ಚಿತ್ರಕಥೆಯನ್ನು ಶ್ರೀನಿಧಿ ಬರೆದಿದ್ದಾರೆ. ಅನಂತ್ ಕಾಮತ್ ಸಂಗೀತವಿದ್ದು, ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ ಸಿನಿಮಾಕ್ಕಿದೆ. ಇತ್ತೀಚೆಗಷ್ಟೆ ರಿಲೀಸ್ ಆಗಿರುವ ಟ್ರೈಲರ್ ಹಾಗೂ ಮಾಯಾನಗರಿ ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.