ಮುಂಬೈ: ಬಾಲಿವುಡ್ ಸ್ಟಾರ್ ಆಮೀರ್ ಖಾನ್ (Aamir Khan) ಮತ್ತು ರೀನಾ ದತ್ತ ಅವರ ಪುತ್ರಿ ಇರಾ ಖಾನ್ ಜನವರಿ 10ರಂದು ರಾಜಸ್ಥಾನದ ಉದಯಪುರದಲ್ಲಿ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ವಿವಾಹವಾದರು (Ira Khan and Nupur Wedding). ಜನವರಿ 3ರಂದು ಮುಂಬೈಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದ ಇರಾ ಖಾನ್-ನೂಪುರ್ ಶಿಖರೆ ಜೋಡಿ ಉದಯಪುರದಲ್ಲಿ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಜನವರಿ 13ರಂದು ಮುಂಬೈಯ ಬಿಕೆಸಿ ಜಿಯೋ ಸೆಂಟರ್‌ನಲ್ಲಿ (BKC Jio Centre) ಆಮೀರ್ ಖಾನ್ ಅದ್ಧೂರಿ ರಿಸೆಪ್ಶನ್ ಆಯೋಜಿಸಿದ್ದರು. ಈ ಸಮಾರಂಭಕ್ಕೆ ಬಾಲಿವುಡ್ ತಾರೆಯರು ಸೇರಿ ಹಲವು ಸೆಲೆಬ್ರಿಟಿಗಳ ಆಗಮಿಸಿದ್ದರು.
ಶಾರುಖ್ ಖಾನ್ ಫೋಟೊ ವೈರಲ್
ಈ ಅದ್ಧೂರಿ ಸಮಾರಂಭಕ್ಕೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ತಮ್ಮ ಪತ್ನಿ ಗೌರಿ ಖಾನ್ ಅವರೊಂದಿಗೆ ಆಗಮಿಸಿದ್ದರು. ಅಮೀರ್ ಖಾನ್, ಗೌರಿ ಖಾನ್ ಮತ್ತು ನೂಪುರ್ ಶಿಖರೆ ಅವರ ತಾಯಿಯೊಂದಿಗೆ ಶಾರುಖ್ ಖಾನ್ ಪೋಸ್ ನೀಡುತ್ತಿರುವ ಫೋಟೊ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶಾರುಖ್ ಖಾನ್ ಕಪ್ಪು ಸೂಟ್ ಧರಿಸಿದ್ದರೆ ಗೌರಿ ಖಾನ್ ನೇರಳ ಬಣ್ಣದ ಕಸೂತಿ ಉಡುಪಿನಲ್ಲಿ ಗಮನ ಸೆಳೆದರು.
ಯಾರೆಲ್ಲ ಭಾಗಿ?
ಅಲ್ಲದೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಕೂಡ ಜಿಯೋ ವರ್ಲ್ಡ್ ಸೆಂಟರ್‌ಗೆ ಭೇಟಿ ನೀಡಿ ನವದಂಪತಿಯನ್ನು ಹರಿಸಿದ್ದಾರೆ. ಸಲ್ಮಾನ್ ಖಾನ್ ಕೂಡ ಗೆಳೆಯನ ಪುತ್ರಿಯ ರಿಸೆಪ್ಶನ್‌ಗೆ ಆಗಮಿಸಿದ್ದರು. ಕಪ್ಪು ಸೂಟ್ ಧರಿಸಿ ಆಗಮಿಸಿದ್ದ ಸಲ್ಮಾನ್ ಖಾನ್ ಖುಷಿಯಿಂದಲೇ ಕ್ಯಾಮೆರಾಕ್ಕೆ ಫೋಸ್ ನೀಡಿದರು. ಜತೆಗೆ ಬಾಲಿವುಡ್ ಕಲಾವಿದರಾದ ಅನಿಲ್ ಕಪೂರ್, ಫರ್ಹಾನ್ ಅಖ್ತರ್, ಟೈಗರ್ ಶ್ರಾಫ್, ಕಂಗನಾ ರಣಾವತ್, ಕಾರ್ತಿಕ್ ಆರ್ಯನ್, ರಿತೇಶ್ ದೇಶ್‌ಮುಖ್-ಜೆನಿಲಿಯಾ ದೇಶ್‌ಮುಖ್ ದಂಪತಿ, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ದಿಲೀಪ್ ಜೋಶಿ, ಧರ್ಮೇಂದ್ರ, ರೇಖಾ, ನಿರ್ಮಾಪಕ ರವಿ ಭಾಗ್ಚಂದ್ಕಾ, ಸಚಿವೆ ಸ್ಮೃತಿ ಇರಾನಿ ಮತ್ತಿತರರು ಕೂಡ ಇರಾ ಖಾನ್ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.
ಭಾವುಕರಾಗಿದ್ದ ಆಮೀರ್ ಖಾನ್
ಉದಯಪುರದಲ್ಲಿ ನಡೆದ ತಮ್ಮ ಪುತ್ರಿಯ ವಿವಾಹ ಸಮಾರಂಭದಲ್ಲಿ ಆಮೀರ್ ಖಾನ್ ಭಾವುಕರಾಗಿ ಕಣ್ಣೀರು ಸುರಿಸಿದ ವಿಡಿಯೊ ವೈರಲ್ ಆಗಿದೆ. ಇರಾ ಖಾನ್ ಮದುವೆಗೂ ಮುನ್ನ ಆಮೀರ್ ಖಾನ್ ಸಂದರ್ಶನವೊಂದರಲ್ಲಿ ಮಗಳ ಮದುವೆ ವೇಳೆ ನಾನು ಅಳುವುದು ಖಂಡಿತ ಎಂದು ಹೇಳಿದ್ದರು. ವೈರಲ್ ಆದ ವಿಡಿಯೊದಲ್ಲಿ ಇರಾ ಮತ್ತು ನೂಪುರ್ ಚುಂಬಿಸಿ ಉಂಗುರ ಬದಲಾಯಿಸಿಕೊಳ್ಳುತ್ತಿದ್ದಂತೆ ಆಮೀರ್ ಭಾವುಕರಾಗಿರುವುದು ಕಂಡು ಬಂದಿದೆ. ಆಮೀರ್ ಖಾನ್ ತನ್ನ ಮಾಜಿ ಪತ್ನಿ ರೀನಾ ದತ್ತಾ ಅವರ ಪಕ್ಕದಲ್ಲಿ ನಿಂತು ಮಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ.
ಬಣ್ಣದ ಲೋಕದಿಂದ ದೂರ ಉಳಿದಿರುವ ಇರಾ ಖಾನ್, ಮಾನಸಿಕ ಆರೋಗ್ಯ ವೃದ್ಧಿಗೆ ನೇರವಾಗುವ ಅಗಸ್ತು ಫೌಂಡೇಶನ್‌ನ ಸ್ಥಾಪಕಿ ಮತ್ತು ಸಿಇಒ. ನೂಪುರ್ ಶಿಖರೆ ಫಿಟ್‌ನೆಸ್ ತರಬೇತುದಾರ, ಸಲಹೆಗಾರ ಮತ್ತು ಕ್ರೀಡಾಪಟು. ಚಿತ್ರೀಕರಣಕ್ಕಾಗಿ ಅಮೀರ್ ಖಾನ್ ಅವರಿಗೆ ತರಬೇತಿ ನೀಡಲು ನೂಪುರ್ ಆಗಮಿಸಿದ ವೇಳೆ ಇರಾ ಖಾನ್ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿಸತೊಡಗಿದ್ದರು.
ಇದನ್ನೂ ಓದಿ: Ira Khan and Nupur Wedding: ಆಮೀರ್ ಖಾನ್ ಪುತ್ರಿಯ ಅದ್ಧೂರಿ ಮದುವೆ; ಗೌನ್‌ನಲ್ಲಿ ಮಿಂಚಿದ ಇರಾ ಖಾನ್!