ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್-ರೀನಾ ದತ್ತ (Aamir Khan-Reena Dutta) ಅವರ ಪುತ್ರಿ ಇರಾ ಖಾನ್ (Ira Khan) ವಿವಾಹ ಸಮಾರಂಭದ ಆಚರಣೆಗಳು ಆರಂಭವಾಗಿದೆ. ನೂಪುರ್ ಶಿಖರೆ ಅವರನ್ನು ಇರಾ ಖಾನ್ 2024ರ ಜನವರಿ 3ರಂದು ವಿವಾಹವಾಗಲಿದ್ದು, ಅದಕ್ಕೆ ಮುನ್ನುಡಿಯಾಗಿ ಕೆಲ್ವಾನ್ ಆಚರಣೆಯನ್ನು (Kelvan ceremony) ನೆರವೇರಿಸಲಾಗಿದೆ. ಮರಾಠಿ ವಿವಾಹದಲ್ಲಿ ನಡೆಯುವ ವಿವಾಹಪೂರ್ವ ಆಚರಣೆಗಳಲ್ಲಿ ಕೆಲ್ವಾನ್ ಸಮಾರಂಭ ಮುಖ್ಯವಾದುದು. ಮದುವೆ ಸಮಾರಂಭಕ್ಕೆ ಮೊದಲು ವಧು-ವರರ ಕುಟುಂಬಗಳ ಸಂಬಂಧಿಕರು ಮತ್ತು ಸ್ನೇಹಿತರನ್ನು ಆಹ್ವಾನಿಸಿ ಕೆಲವು ಸಂಪ್ರದಾಯಗಳನ್ನು ನೆರವೇರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಧು-ವರರಿಗೆ ಉಡುಗೊರೆಗಳನ್ನೂ ನೀಡಲಾಗುತ್ತದೆ.
ಫೋಟೊಗಳನ್ನು ಹಂಚಿಕೊಂಡ ಇರಾ ಖಾನ್
ಕೆಲ್ವಾನ್ ಆಚರಣೆಯ ಫೋಟೊಗಳನ್ನು ಇರಾ ಖಾನ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಇರಾ ಖಾನ್ ಸ್ನೇಹಿತರ ಜತೆಗೆ ವಧು-ವರ ಎರಡೂ ಕುಟುಂಬಗಳ ಸದಸ್ಯರು ಹಾಜರಿದ್ದರು. ಈ ವಿಶೇಷ ಸಮಾರಂಭದಲ್ಲಿ ಇರಾ ಖಾನ್ ಸೀರೆ ಜತೆಗೆ ಪೇಶ್ವೈ ನಥ್ (ಸಾಂಪ್ರದಾಯಿಕ ಮಹಾರಾಷ್ಟ್ರ ರೀತಿಯ ಮೂಗಿನ ಬೊಟ್ಟು)ಧರಿಸಿ ಮಿಂಚಿದರೆ ನೂಪುರ್ ಕೂಡ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು.
ನೂಪುರ್ ಸ್ಪೂನ್ನಿಂದ ಇರಾ ಖಾನ್ಗೆ ಸಿಹಿ ತಿನ್ನಿಸಲು ಮುಂದಾಗುವುದು, ಇಬ್ಬರು ಪರಸ್ಪರ ಸಿಹಿ ಹಂಚಿಕೊಳ್ಳುವುದು, ಇಬ್ಬರಿಗೆ ಸಂಬಂಧಿಕರು ಆರತಿ ಬೆಳಗುವುದು, ಸ್ನೇಹಿತೆಯ ಜತೆ ಇರಾ ಖಾನ್ ಫೋಸ್ ಕೊಡುವುದು ಇತ್ಯಾದಿ ಫೊಟೊಗಳನ್ನು ಹಂಚಿಕೊಳ್ಳಲಾಗಿದ್ದು ವೈರಲ್ ಆಗಿದೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇರಾ ಖಾನ್ ಸ್ನೇಹಿತರಾದ ಮಿಥಾಲಿ ಪಾಲ್ಕರ್, ಝಯಾನ್ ಖಾನ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು. ಕೆಂಪು ಸೀರೆ ಧರಿಸಿದ ರೀನಾ ದತ್ತ ವಿಶೇಷ ಆಕರ್ಷಣೆಯಾಗಿದ್ದರು. ಈ ಫೋಟೊಗಳಿಗೆ ಅನೇಕ ಕಲಾವಿದರು ಕೂಡ ಪ್ರತಿಕ್ರಿಯಿಸಿದ್ದಾರೆ. ನಟಿಯರಾದ ರಿಯಾ ಚಕ್ರವರ್ತಿ, ರಿಚಾ ಛಡ್ಡಾ, ಮಿಥಿಲಾ ಮತ್ತಿತರರು ಮೆಚ್ಚುಗೆ ಸೂಚಿಸಿದ್ದಾರೆ.
ಇರಾ ಖಾನ್ ಮತ್ತು ನೂಪರ್ ಅವರ ವಿವಾಹ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. ಖಾಸಗಿಯಾಗಿ ನಡೆದ ಈ ಸಮಾರಂಭದ ಬಳಿಕ ಇಬ್ಬರೂ ಮುಂಬೈಯಲ್ಲಿ ಪಾರ್ಟಿ ಆಯೋಜಿಸಿದ್ದರು. ಮುಂದಿನ ವರ್ಷ ಜನವರಿಯಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಇದನ್ನೂ ಓದಿ: Ira khan | ನೂಪುರ್ ಶಿಖರೆ ಜತೆ ಎಂಗೇಜ್ ಆದ ಆಮಿರ್ ಖಾನ್ ಪುತ್ರಿ ಇರಾ ಖಾನ್: ವಿಡಿಯೊ ವೈರಲ್!
ಮದುವೆ ಬಗ್ಗೆ ಆಮೀರ್ ಖಾನ್ ಹೇಳಿದ್ದೇನು?
ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿದ್ದ ಆಮೀರ್ ಖಾನ್ ತಮ್ಮ ಮಗಳ ಮದುವೆ ಬಗ್ಗೆ ಮಾಹಿತಿ ನೀಡಿದ್ದರು. ʼʼಇರಾ ಖಾನ್ ಆಯ್ಕೆ ಮಾಡಿಕೊಂಡ ನೂಪುರ್ ತುಂಬಾ ಒಳ್ಳೆಯ ವ್ಯಕ್ತಿ. ಇರಾ ಖಾನ್ ಖಿನ್ನತೆಗೆ ಜಾರಿದ್ದಾಗ ಆತ ಅವಳ ಜತೆಗಿದ್ದು, ಆಕೆಗೆ ಸಹಾಯ ಮಾಡಿದ್ದ. ಬೆಂಬಲ ಸೂಚಿಸಿದ್ದ. ಆಕೆಯ ಆಯ್ಕೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇಬ್ಬರೂ ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆʼʼ ಎಂದು ಆಮೀರ್ ಖಾನ್ ಹೇಳಿದ್ದರು. ʼʼಮಗಳ ಮದುವೆ ದಿನ ಖಂಡಿತಾ ನಾನು ಅಳುತ್ತೇನೆ. ನಾನು ತುಂಬ ಭಾವುಕನಾಗಿರುವುದರಿಂದ ನನ್ನ ಬಗ್ಗೆ ಈಗಲೇ ಕುಟುಂಬ ಸದಸ್ಯರು ಎಚ್ಚರಿಕೆ ವಹಿಸತೊಡಗಿದ್ದಾರೆ. ನಗು ಮತ್ತು ಕಣ್ಣೀರನ್ನು ನನಗೆ ನಿಯಂತ್ರಿಸಲು ಸಾಧ್ಯವಿಲ್ಲʼʼ ಎಂದು ಆಮೀರ್ ಖಾನ್ ಭಾವುಕರಾಗಿ ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ