ಬೆಂಗಳೂರು: ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ (Ira Khan) ಅವರು ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಅವರನ್ನು ಜನವರಿ 3ರಂದು ಮದುವೆಯಾಗಲಿದ್ದಾರೆ. ಈಗಾಗಲೇ ವಿವಾಹ ಪೂರ್ವ ಸಮಾರಂಭಗಳು ನಡಯುತ್ತಿವೆ. ಇದೀಗ ಆರತಕ್ಷತೆಯ ಬಗ್ಗೆ ಮಾಹಿತಿಯೊಂದು ವೈರಲ್ ಆಗಿದೆ.
ಮುಂಬೈನಲ್ಲಿ ಆರತಕ್ಷತೆ
ಇರಾ ಖಾನ್ ಮತ್ತು ನೂಪುರ್ ಶಿಖರೆ ಜನವರಿ 3ರಂದು ಮಹಾರಾಷ್ಟ್ರದಲ್ಲಿ ವಿವಾಹವಾಗಲಿದ್ದಾರೆ. ಇರಾ ಮತ್ತು ನೂಪುರ್ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಈ ರಿಸಪ್ಷನ್‌ಗೆ ಬಾಲಿವುಡ್‌ನ ಅನೇಕ ಸ್ಟಾರ್ ನಟರು, ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಜನವರಿ 10ರ ನಂತರ ಆರತಕ್ಷತೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಇರಾ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಮಹಾರಾಷ್ಟ್ರದ ಆಚರಣೆಯ ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಇರಾ ಅವರ ಮದುವೆ ಶಾಸ್ತ್ರದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಉಪಸ್ಥಿತರಿದ್ದರು. ಆಮೀರ್ ಅವರ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಅವರ ಮಗ ಆಜಾದ್ ರಾವ್ ಖಾನ್ ಸೇರಿದಂತೆ ಎಲ್ಲಾ ಅತಿಥಿಗಳ ಜತೆ ಡಿನ್ನರ್ ಮಾಡುತ್ತಿರುವ ವಿಡಿಯೊ ಹಂಚಿಕೊಂಡಿದ್ದರು.
ಇದನ್ನೂ ಓದಿ: Ira Khan: ಆಮೀರ್ ಖಾನ್ ಪುತ್ರಿಯ ವಿವಾಹಪೂರ್ವ ಶಾಸ್ತ್ರಗಳು ಆರಂಭ; ಮಿಂಚಿದ ಇರಾ
ಇರಾ ಖಾನ್ ಮತ್ತು ನೂಪರ್ ಅವರ ವಿವಾಹ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. ಖಾಸಗಿಯಾಗಿ ನಡೆದ ಈ ಸಮಾರಂಭದ ಬಳಿಕ ಇಬ್ಬರೂ ಮುಂಬೈಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿದ್ದ ಆಮೀರ್ ಖಾನ್ ತಮ್ಮ ಮಗಳ ಮದುವೆ ಬಗ್ಗೆ ಮಾಹಿತಿ ನೀಡಿದ್ದರು. ʼʼಇರಾ ಖಾನ್ ಆಯ್ಕೆ ಮಾಡಿಕೊಂಡ ನೂಪುರ್ ತುಂಬಾ ಒಳ್ಳೆಯ ವ್ಯಕ್ತಿ. ಇರಾ ಖಾನ್ ಖಿನ್ನತೆಗೆ ಜಾರಿದ್ದಾಗ ಆತ ಅವಳ ಜತೆಗಿದ್ದು, ಆಕೆಗೆ ಸಹಾಯ ಮಾಡಿದ್ದ. ಬೆಂಬಲ ಸೂಚಿಸಿದ್ದ. ಆಕೆಯ ಆಯ್ಕೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇಬ್ಬರೂ ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆʼʼ ಎಂದು ಆಮೀರ್ ಖಾನ್ ಹೇಳಿದ್ದರು.
ʼʼಮಗಳ ಮದುವೆ ದಿನ ಖಂಡಿತಾ ನಾನು ಅಳುತ್ತೇನೆ. ನಾನು ತುಂಬ ಭಾವುಕನಾಗಿರುವುದರಿಂದ ನನ್ನ ಬಗ್ಗೆ ಈಗಲೇ ಕುಟುಂಬ ಸದಸ್ಯರು ಎಚ್ಚರಿಕೆ ವಹಿಸತೊಡಗಿದ್ದಾರೆ. ನಗು ಮತ್ತು ಕಣ್ಣೀರನ್ನು ನನಗೆ ನಿಯಂತ್ರಿಸಲು ಸಾಧ್ಯವಿಲ್ಲʼʼ ಎಂದು ಆಮೀರ್ ಖಾನ್ ಭಾವುಕರಾಗಿ ಹೇಳಿದ್ದರು.