ಮುಂಬಯಿ: ಸಲ್ಲೂಬಾಯಿ ಚಿತ್ರಗಳು ಅಂದ್ರೇನೇ ಹಾಗೇ. ಮನರಂಜನೆ, ಸಖತ್ ಹಾಡುಗಳು, ಉತ್ತಮ ಕಥೆ ಹಾಗೂ ಜಬರ್ದಸ್ತ್ ಸಾಹಸವನ್ನು ಒಳಗೊಂಡಿರುತ್ತದೆ. ಪ್ರೇಕ್ಷಕ ವರ್ಗವನ್ನು ಹಿಡಿದಿಡುವ ನಾಯಕರಲ್ಲಿ ಸಲ್ಮಾನ್ ಖಾನ್ ಮುಂಚೂಣಿಯಲ್ಲಿದ್ದಾರೆ. ಅವರ ಸಿನಿಮಾಗಳು ತೆರೆಯ ಮೇಲೆ ಬರುವ ಮೊದಲೇ ಸಾಕಷ್ಟು ಸುದ್ದಿ ಮಾಡಿರುತ್ತವೆ. ಹೀಗೆ ಸೆಟ್ಟೇರುವ ಹಂತದಲ್ಲೇ ಸಾಕಷ್ಟು ಗಮನ ಸೆಳೆದದ್ದು ಅವರ ಮುಂದಿನ ಸಿನಿಮಾದ ಟೈಟಲ್: ಕಭಿ ಈದ್ ಕಭಿ ದಿವಾಲಿ.
ಆದರೆ, ಈಗ ಬರುತ್ತಿರುವ ಸುದ್ದಿ ಪ್ರಕಾರ, ಈ ಟೈಟಲ್ ಬದಲಾಗಲಿದೆ. ಸಲ್ಮಾನ್ ಖಾನ್ ತಮ್ಮ ಇಷ್ಟದ ಟೈಟಲ್ ಆಗಿರುವ ಭಾಯಿ ಜಾನ್‌ಗೇ ಮರಳಲಿದ್ದಾರೆ. ಸಲ್ಮಾನ್ ಖಾನ್ ಅವರು ನಟಿಸಿದ ಭಜರಂಗಿ ಭಾಯಿ ಜಾನ್ ಭಾರಿ ಜನಪ್ರಿಯ ಚಿತ್ರ. 2015ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸಲ್ಮಾನ್ ಖಾನ್ ಅವರನ್ನು ಮನೆ ಮನೆಯ ಹೀರೊ ಮಾಡಿತ್ತು. ಈಗ ಹೊಸ ಚಿತ್ರಕ್ಕೆ ಭಾಯಿ ಜಾನ್ ಎಂದು ಹೆಸರಿಟ್ಟರೆ ಅಭಿಮಾನಿಗಳು ಭಜರಂಗಿ ಭಾಯಿ ಜಾನ್‌ಗೂ ಕನೆಕ್ಟ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಚಿತ್ರದ ನಿರೀಕ್ಷೆ ಇನ್ನಷ್ಟು ಹೆಚ್ಚಲಿದೆ.
ಕಭಿ ಈದ್ ಕಭಿ ದಿವಾಲಿ ಸಿನಿಮಾಕ್ಕೆ ಸಂಬಂಧಿಸಿ ಈಗಾಗಲೇ ಹಲವು ಬದಲಾವಣೆಗಳು ಆಗಿ ಹೋಗಿದೆ. ಮೇ ತಿಂಗಳ ಆರಂಭದಲ್ಲಿ, ಆಯುಷ್ ಶರ್ಮಾ ಚಿತ್ರದಿಂದ ಹೊರನಡೆದಿದ್ದರು. ನಿರ್ದೇಶಕ ಫರ್ಹಾದ್ ಸಾಮ್ಜಿ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಅವರು ದೂರ ಸರಿದರು ಎನ್ನಲಾಗಿತ್ತು. ಆಗ ಸಂಬಂಧಿಕನೇ ಆಗಿರುವ ಆಯುಷ್ ಶರ್ಮನನ್ನು ಮರಳಿ ಕರೆ ತರುವ ಹೊಣೆಯನ್ನು ಸಲ್ಮಾನ್ ಖಾನ್‌ಗೇ ವಹಿಸಲಾಗಿತ್ತು. ಆದರೆ, ಸಲ್ಮಾನ್ ಖಾನ್ ಈ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. ಆಯುಷ್ ಶರ್ಮ ಅವರ ಪಾತ್ರವನ್ನು ಈಗ ಜಸ್ಸಿ ಗಿಲ್ ತುಂಬಿದ್ದಾರೆ. ಈ ನಡುವೆ ನಟ ಜಹೀರ್ ಇಕ್ಬಾಲ್ ಅವರೂ ಪ್ರಾಜೆಕ್ಟ್ ತೊರೆದಿದ್ದು, ಸಿದ್ಧಾರ್ಥ್ ನಿಗಮ್ ಆ ಸ್ಥಾನಕ್ಕೆ ಬಂದಿದ್ದಾರೆ.
ಪೂಜಾ ಹೆಗ್ಡೆ ಎಂಟ್ರಿ
ಕಭಿ ಈದ್ ಕಭಿ ದಿವಾಲಿ ಸಿನಿಮಾದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಸಹ ನಟಿಸಲಿದ್ದಾರೆ. ಭರವಸೆಯ ನಟಿ ಶೆಹನಾಜ್ ಗಿಲ್ ಅವರಿಗೆ ಇದು ಚೊಚ್ಚಲ ಬಾಲಿವುಡ್ ಚಿತ್ರವಾಗಲಿದೆ. ಅವರು ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂಬಯಿಯಲ್ಲಿ ಮೊದಲ ಶೆಡ್ಯೂಲ್‌ನ ಚಿತ್ರೀಕರಣ ನಡೆಯುತ್ತಿದ್ದು, ಎರಡನೇ ಸುತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ಬಳಿಕ ಉತ್ತರ ಭಾರತದ ಹಲವು ನಗರಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ತಿಳಿದುಬಂದಿದೆ.
ಕಭಿ ಈದ್ ಕಭಿ ದಿವಾಲಿ ಹೊರತುಪಡಿಸಿ ಸಲ್ಮಾನ್ ಖಾನ್ ಇತರ ಹಲವು ಸಿನಿಮಾಗಳಲ್ಲಿ ಸಲ್ಮಾನ್ ಬ್ಯುಸಿ ಆಗಿದ್ದಾರೆ. ರೆಡಿ ಆಗುತ್ತಿದ್ದಾರೆ. ಕತ್ರಿನಾ ಕೈಫ್ ಸಹ ನಟಿಸಿರುವ ಟೈಗರ್ 3 ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರವು 2023ರ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶಾರುಖ್ ಖಾನ್ ಅವರ ಪಠಾನ್ ಚಿತ್ರದಲ್ಲಿ ಹಿಂದೆಂದೂ ನೋಡಿರದ ಆಕ್ಷನ್ ಸೀಕ್ವೆನ್ಸ್ ಗಳಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಇದರ ಕೆಲವು ಆಯ್ದ ದೃಶ್ಯಗಳನ್ನು ಟೈಗರ್ 3ಯಲ್ಲಿಯೂ ಬಳಸಲಾಗುತ್ತದೆ ಎಂಬ ಸುದ್ದಿ ಇದೆ.
ಇದನ್ನೂ ಓದಿ: ಬಾಲಿವುಡ್ ನ ಜನ ಮೆಚ್ಚಿದ ಗಾಯಕ ಕೆಕೆ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ, 3,000 ಜಿಂಗಲ್ಸ್ ಹಾಡಿದ್ದರು!